ಭಾನುವಾರ, ಮೇ 22, 2022
23 °C

ನೆಮ್ಮದಿ ಕೇಂದ್ರ ಉನ್ನತಿಗೆ ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಹರ: ನೆಮ್ಮದಿ ಕೇಂದ್ರದ ಅವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಆಂಜನೇಯ ಸಣ್ಣ ವರ್ತಕರ ಸಂಘ ಮತ್ತು ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನೆಮ್ಮದಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ ಎಚ್. ಓಂಕಾರಪ್ಪ ಮಾತನಾಡಿ, ನೆಮ್ಮದಿ ಕೇಂದ್ರ ಪ್ರಾರಂಭವಾದ ದಿನದಿಂದ ಒಂದೇ ಕಂಪ್ಯೂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ದಿನದಿನಕ್ಕೆ ನೆಮ್ಮದಿ ಕೇಂದ್ರದಿಂದ ಸೇವೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ವ್ಯವಸ್ಥೆಯಲ್ಲಿ ಯಾವುದೇ ಉನ್ನತೀಕರಣ ಆಗಿಲ್ಲ. ನೂರಾರು ಜನ ಸರತಿ ಸಾಲಿನಲ್ಲಿ ಸಂಜೆಯವರೆಗೆ ಕಾಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಸೇವಾ ವಿಳಂಬದಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಿಬೇಕು ಎಂದು ಪಟ್ಟು ಹಿಡಿದರು.ಆಂಜನೇಯ ಸಣ್ಣ ವರ್ತಕರ ಸಂಘದ ಅಧ್ಯಕ್ಷ ಶಾವಿಗೆ ಬಸವರಾಜಪ್ಪ ಮಾತನಾಡಿ, ಶಾಲಾ- ಕಾಲೇಜುಗಳ ಪ್ರವೇಶಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪ್ರತಿದಿನ ನೆಮ್ಮದಿ ಕೇಂದ್ರದ ಎದುರು, 300ಕ್ಕೂ ಹೆಚ್ಚು ಜನ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯುವವರೇ ಇರುತ್ತಾರೆ. ಇದಲ್ಲದೇ ಪಹಣಿ ಹಾಗೂ ಇತರೆ ಸೇವೆ ಪಡೆಯುವವರೂ ಇರುತ್ತಾರೆ. ಜಾತಿ ಮತ್ತು ಆದಾಯ ಪ್ರಮಾಣಪತ್ರ ವಿಳಂಬದಿಂದ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ, ಹೆಚ್ಚುವರಿ ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ. ನಜ್ಮಾ, ಕಾರ್ಯಕರ್ತರು ಅಹವಾಲುಗಳನ್ನು ಆಲಿಸಿದರು. ಕೂಡಲೇ, ನೆಮ್ಮದಿ ಕೇಂದ್ರವನ್ನು ಎಪಿಎಂಸಿ ಆವರಣದಲ್ಲಿರುವ ಮಳಿಗೆಯಲ್ಲಿ ಹೆಚ್ಚುವರಿ ಕೇಂದ್ರವನ್ನು ಸ್ಥಾಪಿಸಿವಂತೆ ಆದೇಶ ಹೊರಡಿಸಿದರು. ತಕ್ಷಣದಿಂದ ಆದೇಶ ಜಾರಿಗೆ ಬರುವಂತೆ ನೋಡಿಕೊಳ್ಳಲಾಗುವುದು ಎಂದರು.ಆಂಜನೇಯ ಸಣ್ಣ ವರ್ತಕರ ಸಂಘ ಹಾಗೂ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರ ಹೋರಾಟದ ಪ್ರತಿಫಲವಾಗಿ ಮಧ್ಯಾಹ್ನದಿಂದ ಹೆಚ್ಚುವರಿ ನೆಮ್ಮದಿ ಕೇಂದ್ರ ಕಾರ್ಯ ಪ್ರಾರಂಭಿಸಿತು.ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಶಂಭುಲಿಂಗಪ್ಪ, ಗರಡಿಮನೆ ಬಸಣ್ಣ, ದೇವೇಂದ್ರಗೌಡ ಪಾಟೀಲ, ಬಿ.ಎಂ. ಬಸಣ್ಣ, ಶಿವಣ್ಣ ಬುರಡಿಕಟ್ಟಿ, ಚಂದ್ರಶೇಖರ್, ಆರೀಫ್, ಮಹೇಶಪ್ಪ, ಸಿರಿಗೆರೆ ಬಸವರಾಜ, ಬಿ. ಮಹೇಶ್ವರಪ್ಪ, ಎ. ಬಸವರಾಜ, ಸಿಗ್ಬತ್, ಬಸಣ್ಣ ಗುತ್ತೂರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.