ಭಾನುವಾರ, ಆಗಸ್ಟ್ 25, 2019
28 °C

ನೆಮ್ಮದಿ ಕೇಂದ್ರ ತೆರೆಯಲು ಒತ್ತಾಯ

Published:
Updated:

ಚಿತ್ರದುರ್ಗ: ನಗರದ ನಾಲ್ಕು ಕಡೆಗಳಲ್ಲಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳನ್ನು ಪಡೆಯಲು ನೆಮ್ಮದಿ ಕೇಂದ್ರ ತೆರೆಯುವಂತೆ ಆಗ್ರಹಿಸಿ ಸತ್ಯಮೇವ ಜಯತೇ ಯುವಶಕ್ತಿ ಕೇಂದ್ರದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ತಾಲ್ಲೂಕು ಕಚೇರಿ ಮುಂದೆ ಕೆಲಕಾಲ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿಳಂಬವಾಗುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ತಾಲ್ಲೂಕು ಕಚೇರಿಯಲ್ಲಿ ಮಾತ್ರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಅವಕಾಶವಿದ್ದು, ಕೇವಲ ಒಂದೇ ನೆಮ್ಮದಿ ಕೇಂದ್ರವಿದೆ. ಇದರಿಂದಾಗಿ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗಿದೆ. ಆದ ಕಾರಣ ನಾಲ್ಕು ಕಡೆಗಳಲ್ಲಿ ನೆಮ್ಮದಿ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.ಈಗಾಗಲೇ ಇರುವ ಒಂದು ನೆಮ್ಮದಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗಿ ಅನನುಕೂಲವಾಗುತ್ತಿದೆ. ಈ ಕಾರಣದಿಂದ ನಾಗರಿಕರು, ವಿದ್ಯಾರ್ಥಿಗಳು, ದಿನಗೂಲಿ ನೌಕರರು, ಮಹಿಳೆಯರು, ಅಂಗವಿಕಲರು,   ಪಡಿತರ ಚೀಟಿಗಾಗಿ, ಸಾಲ ಸೌಲಭ್ಯಕ್ಕಾಗಿ ಸರ್ಕಾರಿ ನೌಕರರು ತಾಲ್ಲೂಕು ಕಚೇರಿಯಲ್ಲಿ ನಿತ್ಯ ಅರ್ಜಿಗಳನ್ನು ಕೊಡಲು ಸಾಲುಗಟ್ಟಿ ನಿಂತರೂ ಸಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಿಗದಿತ ಸಮಯಕ್ಕೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದ್ದಾರೆ.ಈಗಿರುವ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವವರ ಸಂಖ್ಯೆ ಕಡಿಮೆಯಿದ್ದು, ಸಮಯ ವಿಳಂಬ ವಾಗುತ್ತಿದೆ. ಇದರಿಂದಾಗಿ ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ತುಂಬಾ ತೊಂದರೆಯಾಗಿದೆ. ಸುಮಾರು ಮೂರು ತಿಂಗಳಿಂದ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಳವಾದರು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ನೀಡದಿರುವುದು ಶೋಚನೀಯ ಸಂಗತಿ ಎಂದು ಆರೋಪಿಸಿದ್ದಾರೆ.

 

ಯುವ ಶಕ್ತಿ ಸಂಘದ ಅಧ್ಯಕ್ಷ ಪ್ರತಾಪ್ ಜೋಗಿ, ಉಪಾಧ್ಯಕ್ಷ ಅಶೋಕ್ ಬೆಳಗಟ್ಟ, ಕಾರ್ಯದರ್ಶಿ ಅಶೋಕ್, ಜಂಟಿ ಕಾರ್ಯದರ್ಶಿ ಆಂಜನೇಯ, ತಾಲ್ಲೂಕು ಕಾರ್ಯದರ್ಶಿ ಉಮೇಶ್ ಹಾಜರಿದ್ದರು.

Post Comments (+)