ಭಾನುವಾರ, ಮೇ 9, 2021
26 °C

ನೆಮ್ಮದಿ ಕೇಂದ್ರ ಪುನರ್ ಸ್ಥಾಪನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಮ್ಮದಿ ಕೇಂದ್ರ ಪುನರ್ ಸ್ಥಾಪನೆಗೆ ಒತ್ತಾಯ

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ಪಂಚಾಯ್ತಿ ಕಚೇರಿಯ ಪಕ್ಕದಲ್ಲಿದ್ದ ನೆಮ್ಮದಿ ಕೇಂದ್ರವನ್ನು ಪುನರ್‌ಸ್ಥಾಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಸಮತಾವಾದ) ಬೆಂಗಳೂರು ಉತ್ತರ ತಾಲ್ಲೂಕು ಶಾಖೆಯ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಸಂತೆ ವೃತ್ತದಲ್ಲಿರುವ ಕೆಂಪೇಗೌಡ ಪ್ರತಿಮೆ ಮುಂಭಾಗದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು, ತಹಶೀಲ್ದಾರ್ ಕಚೇರಿ ಮುಂಭಾಗಕ್ಕೆ ಬಂದು, ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿ, ಪ್ರತಿಭಟಿಸಿದರು.ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಎಚ್.ಮಾರಪ್ಪ ಮಾತನಾಡಿ, `ಈ ಹಿಂದೆ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದ ಪಕ್ಕದಲ್ಲಿ ನೆಮ್ಮದಿ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಈ ಕಚೇರಿಯಲ್ಲಿ ಯಲಹಂಕದ ಸುತ್ತಮುತ್ತಲ ಗ್ರಾಮಗಳ ನಾಗರಿಕರು, ಪಡಿತರಚೀಟಿ, ಜಾತಿ ಪ್ರಮಾಣಪತ್ರ, ಆದಾಯ ಪತ್ರ, ವೃದ್ಯಾಪ್ಯ ವೇತನ ಮತ್ತಿತರ ಸೌಲಭ್ಯಗಳಿಗಾಗಿ ಅರ್ಜಿ ಸಲ್ಲಿಸುತ್ತಿದ್ದರು. ಒಂದು ತಿಂಗಳ ಹಿಂದೆ ಈ ಕೇಂದ್ರವನ್ನು ಸಿಂಗನಾಯಕನಹಳ್ಳಿಗೆ ಸ್ಥಳಾಂತರಿಸಿರುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ' ಎಂದು ದೂರಿದರು.ಈ ಸಂದರ್ಭ ಬೆಂಗಳೂರು ಉತ್ತರ (ಹೆಚ್ಚುವರಿ) ವಿಶೇಷ ತಹಸೀಲ್ದಾರ್ ಮನೋರಮಾ ಅವರಿಗೆ ಪ್ರತಿಭಟನಾಕಾರರು ಮನವಿಪತ್ರ ಸಲ್ಲಿಸಿದರು.ಸಮಿತಿಯ ರಾಜ್ಯ ಗೌರವಾಧ್ಯಕ್ಷ ಕೆ.ತಮ್ಮಯ್ಯ, ರಾಜ್ಯ ಉಪಪ್ರಧಾನ ಸಂಚಾಲಕರಾದ ಎಂ.ಎಲ್.ಮುನಿಬೈರಪ್ಪ, ಚಂದ್ರಪ್ಪ, ಬೆಂಗಳೂರು ಉತ್ತರ ತಾಲ್ಲೂಕು ಪ್ರಧಾನ ಸಂಚಾಲಕ ಡಿ.ವಿ.ವೀರಭದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.