ಶನಿವಾರ, ಏಪ್ರಿಲ್ 17, 2021
31 °C

ನೆಮ್ಮದಿ ಹಾಳು ಮಾಡಿದ ನೆಮ್ಮದಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ:  ಇಲ್ಲಿನ ಪೊಲೀಸ್ ಠಾಣೆಯ ರಸ್ತೆಯ ಪಕ್ಕದಲ್ಲಿ ನಸುಕಿನ 5ಗಂಟೆಯ ಸಮಯದಲ್ಲಿ ಕಿಟಕಿಯ ಪಕ್ಕದಲ್ಲಿ,ರಸ್ತೆಯಲ್ಲಿ ಕಾಯುತ್ತ ಕುಳಿತ ಜನತೆಯನ್ನು ಕಾಣಬಹುದು.  `ಇಲ್ಲಿ ಏಕೆ ನಿಂತಿದ್ದೀರಿ?~ ಎಂದು ಅವರನ್ನು ಪ್ರಶ್ನಿಸಿದರೆ `  ಆದಾಯ ಪ್ರಮಾಣ ಪತ್ರ ,ಜಾತಿ ಮತ್ತು ಪಡಿತರ ಚೀಟಿಯನ್ನು ಪಡೆಯುವ ಸಲುವಾಗಿ ನಸುಕಿನ ಸಮಯದಲ್ಲಿ 5ಗಂಟೆಗೆ ಬಂದಿದ್ದೇವೆ~ ಎಂದು ಉತ್ತರಿಸುವ ಜನರು ಇಲ್ಲಿ ಸಿಗುತ್ತಾರೆ.ನೆಮ್ಮದಿ ಕೇಂದ್ರದಲ್ಲಿ ಸಿಬ್ಬಂದಿ ಆಗಮಿಸುವುದು ಬೆಳಿಗ್ಗೆ 11ಗಂಟೆಯ ನಂತರ. ಆದರೆ ಚೀಟಿ ಪಡೆಯಲು 6ಗಂಟೆ ಮುಂಚೆ ಬಂದು ಕುಳಿತರೂ ಒಮ್ಮಮ್ಮೆ ಚೀಟಿ ದೊರೆಯುವದಿಲ್ಲ.ಯಾಕೆಂದರೆ ವಿದ್ಯುತ್ ಸ್ಥಗಿತ, ಸರ್ವರ್ ಸ್ಥಗಿತ ಮತ್ತು ಇಮೇಲ್‌ಲೈನ್ ಸ್ಥಗಿತವಾಗಿ  ದೆ ಎನ್ನುವ ಉತ್ತರ ಸಿದ್ಧ. ಹೀಗಾಗಿ ಜನರಿಗೆ ಬಹಳ ತೊಂದರೆಯಾಗಿದೆ.`ನಾ ಇಲ್ಲಿಗೆ ಬರಾಕಹತ್ತಿ ಒಂದು ವಾರ ಆತ್ರಿ.ಒಂದು ವಾರದಿಂದ ಪಾಳಿ ಹಚ್ಚಿದರೂ ಇನ್ನೂತನಕ  ನನ್ನ ಪಾಳೆ ಬಂದಿಲ್ರಿ. ಮನಿ ಕೆಲಸ  ಬಿಟ್ಟುಕೊಟ್ಟು, ಹೊಲಕ್ಕ ದುಡಿಯಾಕ ಹೋಗುದು ಬಿಟ್ಟು ಇಲ್ಲಿ ಕಾಲಕಟಗೊಂಡು ನಿಲ್ಲಬೇಕ್ರಿ. ಪಾಳೇವು ಬಂತು ಅಂದಕೂಡಲೇ ಅದು ಹೋಗೈತಿ, ಇದು ಹೋಗೈತಿ ಎಂದು ನಮ್ಮನ್ನ ತಿರುಗಿ ಕಳಸ್ತಾರಿ.ಹೋದದ್ದು ಬಿಟ್ಟದ್ದು ನಮಗೇನು ಗೊತ್ತಾಗಬೇಕ್ರಿ?~  ಎಂದು ವೃದ್ಧೆ ಭೀಮವ್ವ ಕವಾಸ್ತೆ ನೋವಿನಿಂದ ಹೇಳಿದರು.

ವಿವಿಧ ಸರ್ಟಿಫಿಕೆಟ್ ಪಡೆಯಲು ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು, ಯುವಕರು,ಪುರುಷರು ಹಾಗೂ ಮಹಿಳೆಯರು ಸಾಲು ಸಾಲಾಗಿ ನಿಲ್ಲುವುದು ಒಂದು ತಿಂಗಳಿಂದ ಕಾಣಬಹುದು.ನೆಮ್ಮದಿ ಕೇಂದ್ರದ ಎದುರು ಹೀಗಾದರೆ, ನಂತರ ಸಿಂಡಿಕೇಟ್ ಬ್ಯಾಂಕ್ ಬಳಿ ಕಂಪ್ಯೂಟರ್ ಕೇಂದ್ರದಲ್ಲಿ ಫೋಟೋ ತೆಗೆಸಲು ಪಾಳಿ ಹಚ್ಚಬೇಕು. ಇದಾದ ನಂತರ ದಾಖಲೆ ಪಡೆಯಲು ಆಟೋಕ್ಕೆ ಹಣಕೊಟ್ಟು ಮಿನಿ ವಿಧಾನ ಸೌಧಕ್ಕೆ ಹೋಗಬೇಕು. ನಮಗ ಸಾಕು ಸಾಕಾಗಿ ಹೋಗೈತಿ. ಜನರಿಗೆ ಬಹಳ ಕಷ್ಟೈತ್ರಿ~ ಎಂದು ಮಹ್ಮದ್ ಇಕ್ಬಾಲ್ ಹೇಳುತ್ತಾರೆ.ನಗರದಲ್ಲಿ  23ವಾಡ್‌ಗಳಿವೆ. 40ಸಾವಿರಕ್ಕೂ ಮಿಕ್ಕಿ ಜನಸಂಖ್ಯೆಇದೆ. ಕೇವಲ ಒಂದು ನೆಮ್ಮದಿ ಕೇಂದ್ರ ಸಾಲದು. ನಗರದ ವಿವಿಧೆಡೆ 5-6ನೆಮ್ಮದಿ ಕೇಂದ್ರಗಳನ್ನು ತೆರೆದಾಗ ಮಾತ್ರ ಜನತೆಗೆ ಬೇಗನೇ ನೆಮ್ಮದಿಯಿಂದ ಅಗತ್ಯದ ಪ್ರಮಾಣ ಪತ್ರ ದೊರೆಯಲು ಸಾಧ್ಯ ಎಂದು  ಇಕ್ಬಾಲ್ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಒತ್ತಾಯಿಸುತ್ತಾರೆ.ಜನತೆಯ ತೊಂದರೆಯನ್ನು ನಿವಾರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೀವ್ರವಾಗಿ ಸೂಕ್ತ ಕ್ರಮವನ್ನು ಕೈಕೊಳ್ಳಬೇಕಿದೆ ಎನ್ನುವ ಆಗ್ರಹ ಕೇಳಿಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.