ಸೋಮವಾರ, ಮಾರ್ಚ್ 1, 2021
30 °C
ರೋಹಿತ್ ವೇಮುಲ ಆತ್ಮಹತ್ಯೆ ವಿಚಾರಣೆಗೆ ಸತ್ಯಶೋಧನಾ ತಂಡ

ನೆರಳಿನಿಂದ ನಕ್ಷತ್ರದೆಡೆಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರಳಿನಿಂದ ನಕ್ಷತ್ರದೆಡೆಗೆ...

ನವದೆಹಲಿ: ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಘಟನೆ ಕುರಿತಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಸಚಿವಾಲಯದ ವಿಶೇಷಾಧಿಕಾರಿ ಶಕಿಲ ಟಿ ಶಂಸು ಮತ್ತು ಉಪ ಕಾರ್ಯದರ್ಶಿ ಸುರತ್‌ ಸಿಂಗ್‌ ಅವರ ನೇತೃತ್ವದ ಸತ್ಯಶೋಧನಾ ತಂಡವನ್ನು ಹೈದರಾಬಾದ್‌ಗೆ ಕಳುಹಿಸಿದೆ.

ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಜತೆ ಮಾತುಕತೆ ನಡೆಸಿ ತಂಡವು ನೇರವಾಗಿ ಸಚಿವಾಲಯಕ್ಕೆ ವರದಿ ಸಲ್ಲಿಸಲಿದೆ.

ಉದ್ವಿಗ್ನ ಪರಿಸ್ಥಿತಿ: ರೋಹಿತ್‌ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರಿಗೆ ನೀಡಲು ವಿದ್ಯಾರ್ಥಿಗಳು ನಿರಾಕರಿಸುವುದರೊಂದಿಗೆ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತು.

ತಾಯಿಯ ಧರಣಿ: ಮಗನನ್ನು ಅಮಾನತು ಮಾಡಲು ಕಾರಣವೇನು ಎಂಬುದನ್ನು ಕುಲಪತಿ ವಿವರಿಸಬೇಕು ಎಂದು ಒತ್ತಾಯಿಸಿ ರೋಹಿತ್‌ ತಾಯಿ ರಾಧಿಕಾ ವಿಶ್ವವಿದ್ಯಾಲಯ ಆವರಣದಲ್ಲಿ ಧರಣಿ ನಡೆಸಿದರು. ರಾಜಕೀಯ ಮುಖಂಡರು ವಿಶ್ವವಿದ್ಯಾಲಯಕ್ಕೆ ಬಂದು ದಲಿತ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ ಪ್ರವೇಶಿಸದಂತೆ ನಿಷೇಧ ಹೇರಿದ ಕ್ರಮದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.***

ಹಿಂಸೆಗೆ ತಿರುಗಿದ ಪ್ರತಿಭಟನೆ

ನವದೆಹಲಿ (ಪಿಟಿಐ): ದಲಿತ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯಿಂದ ಆಕ್ರೋಶಗೊಂಡಿರುವ ನೂರಾರು ವಿದ್ಯಾರ್ಥಿಗಳು ಮಾನವ ಸಂಪನ್ಮೂಲ ಸಚಿವಾಲಯದ ಎದುರು ಭಾರಿ ಪ್ರತಿಭಟನೆ ನಡೆಸಿದ್ದಾರೆ. 70ಕ್ಕೂ ಹೆಚ್ಚು ವಿದ್ಯಾ

ರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ.ಎಡಪಕ್ಷಗಳಿಗೆ ಸೇರಿದ ಆಲ್‌ ಇಂಡಿಯಾ ಸ್ಟೂಡೆಂಟ್ಸ್‌ ಅಸೋಸಿಯೇಷನ್‌ (ಎಐಎಸ್‌ಎ), ಸ್ಟೂಡೆಂಟ್‌ ಫೆಡರೇಶನ್‌ ಆಫ್‌ ಇಂಡಿಯಾ  (ಎಸ್‌ಎಫ್‌ಐ) ಮತ್ತು ಕಾಂಗ್ರೆಸ್‌ನ ನ್ಯಾಷನಲ್‌ ಸ್ಟೂಡೆಂಟ್ಸ್‌ ಯೂನಿಯನ್‌ ಆಫ್‌ ಇಂಡಿಯಾ (ಎನ್‌ಎಸ್‌ಯುಐ) ಸದಸ್ಯರು ಮಾನವ ಸಂಪನ್ಮೂಲ ಸಚಿವಾಲಯ ಇರುವ ಶಾಸ್ತ್ರಿ ಭವನಕ್ಕೆ ಮೆರವಣಿಗೆ ನಡೆಸಿದರು.ಸಚಿವೆ ಸ್ಮೃತಿ ಇರಾನಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿಗಳು ತಡೆ ಬೇಲಿಗಳನ್ನು ಹಾರಲು ಯತ್ನಿಸಿದ್ದಲ್ಲದೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದರು.  ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದರು ಮತ್ತು ಕೆಲವರನ್ನು ವಶಕ್ಕೆ ಪಡೆದರು.***

ರೋಹಿತ್‌ ಬರೆದ ಆತ್ಮಹತ್ಯಾ ಪತ್ರದ ಸಂಗ್ರಹ ರೂಪ

ಹೈದರಾಬಾದ್: ನೀವು ಈ ಪತ್ರ ಓದುವಾಗ ನಾನು ಇರುವುದಿಲ್ಲ. ನನ್ನ ಮೇಲೆ ಸಿಟ್ಟು ತೋರಿಸಬೇಡಿ. ನಿಮ್ಮಲ್ಲಿ ಕೆಲವರು ನನ್ನ ಬಗ್ಗೆ ಅಪಾರ ಕಾಳಜಿ ತೋರಿಸಿದ್ದೀರಿ. ನನ್ನನ್ನು ಪ್ರೀತಿಸಿದ್ದೀರಿ ಮತ್ತು ಆರೈಕೆ ಮಾಡಿದ್ದೀರಿ. ಯಾರನ್ನೂ ನಾನು ದೂರುವುದಿಲ್ಲ. ನನ್ನಲ್ಲಿಯೇ ಯಾವಾಗಲೂ ಸಮಸ್ಯೆ ಇತ್ತು. ನನ್ನ ಆತ್ಮ ಮತ್ತು ದೇಹದ ನಡುವೆ ಅಂತರ ಹೆಚ್ಚುತ್ತಿದೆ ಎಂದು ನನಗೆ ಅನಿಸಿತ್ತು. ಹೀಗಾಗಿ ನಾನೊಂದು ಪ್ರಾಣಿಯಾದೆ.ಕಾರ್ಲ್‌ ಸಗಾನ್‌ನಂತಹ ವಿಜ್ಞಾನ ಲೇಖಕನಾಗುವ ಬಯಕೆ ಇತ್ತು. ಆದರೆ, ಈ ಪತ್ರ ಬರೆಯಲು ಮಾತ್ರ ಸಾಧ್ಯವಾಗಿದೆ. ನಾನು ವಿಜ್ಞಾನ, ನಕ್ಷತ್ರ, ನಿಸರ್ಗವನ್ನು ಪ್ರೀತಿಸಿದೆ. ಜನರು ನಿಸರ್ಗದಿಂದ ಎಂದೋ ದೂರ ಸರಿದಿದ್ದಾರೆ ಎಂಬುದು ಅರಿಯದೆ ಅವರನ್ನೂ ಪ್ರೀತಿಸಿದೆ. ನಮ್ಮ ಭಾವನೆಗಳೆಲ್ಲವೂ ಹಳೆಯವೇ. ನಮ್ಮ ಪ್ರೀತಿಯೂ ಕೃತಕ. ನಮ್ಮ ನಂಬಿಕೆಗಳಿಗೆ ಬಣ್ಣ ಬಳಿಯಲಾಗಿದೆ. ನಿಜಕ್ಕೂ ನೋವಾಗದಂತೆ  ಪ್ರೀತಿಸುವುದು ಕಠಿಣವಾಗಿದೆ.ಮನುಷ್ಯನ ಮೌಲ್ಯವನ್ನು ಆತನ ಮೇಲ್ಮೈ ಅಸ್ತಿತ್ವ ಮತ್ತು ಆತ ತಕ್ಷಣದಲ್ಲಿ ಸಾಧಿಸಬಹುದಾದ ಅಂಶಗಳಿಗೆ ಸೀಮಿತಗೊಳಿಸಲಾಗಿದೆ. ಒಂದು ಮತ, ಒಂದು ಸಂಖ್ಯೆ ಮತ್ತು ಒಂದು ವಿಷಯ. ಮನುಷ್ಯನನ್ನು ಒಂದು ಮನಸ್ಸಾಗಿ ಎಂದೂ ನೋಡಲಾಗಿಯೇ ಇಲ್ಲ. ಮನುಷ್ಯ ತಾರಾಪುಂಜದಿಂದ ರೂಪುಗೊಂಡ ಅದ್ಭುತ ಸೃಷ್ಟಿ ಎಂಬುದನ್ನು ಗಣನೆಗೇ ತೆಗೆದುಕೊಳ್ಳಲಾಗುತ್ತಿಲ್ಲ.ಇಂತಹ ಪತ್ರವನ್ನು ನಾನು ಮೊದಲ ಬಾರಿ ಬರೆಯುತ್ತಿದ್ದೇನೆ. ಇದು ನನ್ನ ಅಂತಿಮ ಪತ್ರವೂ ಹೌದು. ಇದರಲ್ಲಾದರೂ ಅರ್ಥಪೂರ್ಣವಾಗಿ ಏನನ್ನಾದರೂ ಹೇಳಲು ಸಾಧ್ಯವಾಗದಿದ್ದರೆ ನನ್ನನ್ನು ಕ್ಷಮಿಸಿ.ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನೇ ಎಡವಿರಬಹುದು– ಪ್ರೀತಿ, ನೋವು, ಜೀವನ, ಸಾವು ಎಲ್ಲದರಲ್ಲೂ ತಪ್ಪಿರಬಹುದು. ಆದರೆ ನಾನು ಹೊಸದೊಂದು ಜೀವನ ಆರಂಭಿಸುವುದಕ್ಕಾಗಿ ಹತಾಶೆಯಿಂದ ಮುನ್ನುಗ್ಗುತ್ತಲೇ ಇದ್ದೆ. ಆದರೆ ಈ ಎಲ್ಲದರ ನಡುವೆ ಕೆಲವು ಜನರಿಗೆ ಜೀವನವೇ ಒಂದು ಶಾಪ. ನಾನು ಎಂದೂ ನನ್ನ ಬಾಲ್ಯದ ಒಂಟಿತನದಿಂದ ಹೊರಬರುವುದು ಸಾಧ್ಯವಿಲ್ಲ.ನಾನು ಹೋದ ಮೇಲೆ ಜನರು ನನ್ನನ್ನು ಹೇಡಿ ಎನ್ನಬಹುದು. ಸ್ವಾರ್ಥಿ ಅಥವಾ ಮೂರ್ಖ ಎನ್ನಬಹುದು. ಈ ಬಗ್ಗೆ ನನಗೆ ಚಿಂತೆಯೇನೂ ಇಲ್ಲ. ಸಾವಿನ ನಂತರದ ಬದುಕಿನ ಬಗ್ಗೆ ನನಗೆ ನಂಬಿಕೆ ಇಲ್ಲ. ಒಂದು ವೇಳೆ ಅಂತಹುದೇನಾದರೂ ಇದ್ದರೆ ನಾನು ನಕ್ಷತ್ರಗಳ ಲೋಕಕ್ಕೆ ಹೋಗುತ್ತೇನೆ. ಬೇರೆ ಜಗತ್ತುಗಳ ಬಗ್ಗೆ ಅರಿತುಕೊಳ್ಳುತ್ತೇನೆ. ನನ್ನ ಅಂತ್ಯ ಸಂಸ್ಕಾರ ಸದ್ದಿಲ್ಲದೆ, ಸರಾಗವಾಗಿ ನಡೆಯಬೇಕು. ನನಗಾಗಿ ಅಳಬೇಡಿ, ಬದುಕಿರುವುದಕ್ಕಿಂತ ಸಾವಿನಲ್ಲಿ ನನಗೆ ಹೆಚ್ಚು ಸುಖ ಎಂಬುದನ್ನು ನೆನಪಿರಿಸಿಕೊಳ್ಳಿ.ನನ್ನ ಆತ್ಮಹತ್ಯೆಗೆ ಯಾರೂ ಹೊಣೆಯಲ್ಲ. ಆತ್ಮಹತ್ಯೆಗೆ ನನಗೆ ಯಾರೂ ಕುಮ್ಮಕ್ಕು ನೀಡಿಲ್ಲ. ನನ್ನದೇ ನಿರ್ಧಾರ ಮತ್ತು ಇದಕ್ಕೆ ನಾನೇ ಹೊಣೆ. ನಾನು ಹೋದ ನಂತರ ನನ್ನ ಮಿತ್ರರಿಗಾಗಲಿ, ಶತ್ರುಗಾಗಲಿ ತೊಂದರೆ ಕೊಡಬೇಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.