ಗುರುವಾರ , ನವೆಂಬರ್ 21, 2019
22 °C
ಹೆಣ್ಣು ಮಗುವಿಗೆ ಜಲಮಸ್ತಿಷ್ಕ ಕಾಯಿಲೆ

ನೆರವಿನ ಹಸ್ತ ಚಾಚಿದ ಆಸ್ಪತ್ರೆ

Published:
Updated:

ನವದೆಹಲಿ (ಎಎಫ್‌ಪಿ): ಜಲಮಸ್ತಿಷ್ಕದಿಂದ (ತಲೆ ಬುರುಡೆಯಲ್ಲಿ ದ್ರವ ತುಂಬಿಕೊಂಡು ಹಣೆ ಊದಿಕೊಳ್ಳುವ ರೋಗ) ಬಳಲುತ್ತಿರುವ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಪರೀಕ್ಷಿಸಲು ಖಾಸಗಿ ಆಸ್ಪತ್ರೆಯೊಂದು ಮುಂದೆ ಬಂದಿದೆ.ತ್ರಿಪುರಾದ ರೂನಾ ಬೇಗಂ ಎಂಬ ಹೆಣ್ಣು ಮಗು ಬಲು ಅಪರೂಪದ ಹಾಗೂ ಚಿಕಿತ್ಸೆ ನೀಡಬಹುದಾದ ಕಾಯಿಲೆಯಾದ ಜಲಮಸ್ತಿಷ್ಕದಿಂದ (ಹೈಡ್ರೊಸೆಫಲಸ್) ಬಳಲುತ್ತಿದ್ದಾಳೆ.

ಆಕೆಯ ತಲೆಯ ಗಾತ್ರ ಸಾಮಾನ್ಯಕ್ಕಿಂತ ಎರಡು ಪಟ್ಟು ದೊಡ್ಡದಾಗಿದ್ದು,  ತುರ್ತಾಗಿ ಸರ್ಜರಿ ನಡೆಸುವ ಅಗತ್ಯವಿದೆ.  ಈಗ ದೆಹಲಿಯ ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರು  ಹೆಣ್ಣು ಮಗುವನ್ನು ಪರೀಕ್ಷಿಸಲು ಮುಂದೆ ಬಂದಿರುವುದು, ಆಕೆಯ ಬದುಕಿಗೆ ಹೊಸ ಆಶಾ ಕಿರಣ ಮೂಡುವಂತೆ ಮಾಡಿದೆ.ತ್ರಿಪುರಾದಲ್ಲಿ ಆರ್ಥಿಕವಾಗಿ ದುರ್ಬಲರಾದ ಪೋಷಕರೊಂದಿಗಿದ್ದ ರೂನಾ ಬೇಗಂ ಕಳೆದ ವಾರ ಎಎಫ್‌ಪಿ ಸುದ್ದಿಸಂಸ್ಥೆಯ ಛಾಯಾಗ್ರಾಹಕರೊಬ್ಬರ ಕಣ್ಣಿಗೆ ಬಿದ್ದಿದ್ದಳು.

ಛಾಯಾಚಿತ್ರ ಪ್ರಕಟಗೊಂಡ ಬಳಿಕ ಹಲವರು ಆಕೆಗೆ ನೆರವಾಗಲು ಮುಂದಾಗಿದ್ದರು. ನೆರವಿನ ರೂಪದಲ್ಲಿ ಬಂದ ಹಣವನ್ನು ಸಂಗ್ರಹಿಸುವುದಕ್ಕಾಗಿಯೇ ವೆಬ್‌ಸೈಟ್‌ವೊಂದನ್ನು ರೂಪಿಸಲಾಗಿತ್ತು.ಫೋರ್ಟಿಸ್ ಆಸ್ಪತ್ರೆಯ ಪ್ರಮುಖ ನರ ಶಸ್ತ್ರಚಿಕಿತ್ಸಾ ತಜ್ಞ ಸಂದೀಪ್ ವೈಶ್ಯಾ ಅವರು ಈಗ ರೂನಾ ಬೇಗಂಳನ್ನು ಶಸ್ತ್ರಕ್ರಿಯೆ ನಡೆಸಲು ಸಾಧ್ಯವಿದೆಯೇ ಎಂಬುದನ್ನೂ ಪರಿಶೀಲಿಸಲಿದ್ದಾರೆ. ಯಶಸ್ವಿ ಶಸ್ತ್ರಕ್ರಿಯೆ ನಡೆಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)