ನೆರೆಯ ಸಾಹಿತಿಗಳ ಪರಿಚಯವಿಲ್ಲ: ಎಚ್ಚೆಸ್ವಿ ವಿಷಾದ

7

ನೆರೆಯ ಸಾಹಿತಿಗಳ ಪರಿಚಯವಿಲ್ಲ: ಎಚ್ಚೆಸ್ವಿ ವಿಷಾದ

Published:
Updated:
ನೆರೆಯ ಸಾಹಿತಿಗಳ ಪರಿಚಯವಿಲ್ಲ: ಎಚ್ಚೆಸ್ವಿ ವಿಷಾದ

ಬೆಂಗಳೂರು:  `ಜಗತ್ತಿನ ಬೇರೆ ಬೇರೆ ಭಾಷೆಗಳ ಸಾಹಿತಿಗಳ ಬಗ್ಗೆ ತಿಳಿದಿರುವ ನಮಗೆ ನಮ್ಮ ಅಕ್ಕ ಪಕ್ಕದ ಭಾಷೆಗಳ ಶ್ರೇಷ್ಠ ಸಾಹಿತಿಗಳ ಪರಿಚಯವೇ ಇಲ್ಲದಿರುವುದು ದುರಂತ~ ಎಂದು ಹಿರಿಯ ಕವಿ ಡಾ. ಎಚ್. ಎಸ್.   ವೆಂಕಟೇಶಮೂರ್ತಿ ವಿಷಾದ ವ್ಯಕ್ತ ಪಡಿಸಿದರು.ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಸೋಮವಾರ ಆಕಾಶವಾಣಿ ಹಬ್ಬದ ಅಂಗವಾಗಿ ನಡೆದ `ಸಾಹಿತ್ಯ ಸೌರಭ~ ಬಹುಭಾಷಾ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, `ನಮಗೆ ಷೇಕ್ಸ್‌ಪಿಯರ್, ಬೋದಿಲೇರ್ ಸೇರಿದಂತೆ ಜಗತ್ತಿನ ಎಲ್ಲ ಶ್ರೇಷ್ಠ ಸಾಹಿತಿಗಳ ಬಗ್ಗೆಯೂ ತಿಳುವಳಿಕೆ ಇದೆ.

 

ಆದರೆ ನೆರೆಯ ಭಾಷೆಗಳಾದ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿನ ಸಾಹಿತಿಗಳ ಹೆಸರುಗಳ ಪರಿಚಯವೂ ಇಲ್ಲ. ಇದು ಪ್ರಾದೇಶಿಕ ಭಾಷೆಗಳಲ್ಲಿನ ಅಂತರವನ್ನು ಹೆಚ್ಚಿಸುತ್ತದೆ~ ಎಂದು ಅವರು ಅಭಿಪ್ರಾಯ ಪಟ್ಟರು.`ಭಾರತೀಯ ಭಾಷೆಗಳಲ್ಲಿ ವಿಭಿನ್ನತೆ ಮತ್ತು ಮಾಧುರ್ಯವಿದೆ. ದೇಶದ ಇತರೆ ಭಾಷೆಗಳ ಸಾಹಿತ್ಯವನ್ನೂ ಕನ್ನಡದ ಓದುಗ ಓದಿ ಅರ್ಥೈಸಿಕೊಳ್ಳುವ ದಿನಗಳು ಹತ್ತಿರವಾಗಬೇಕು. ಸುಗಮ ಸಂಗೀತ ಪ್ರಕಾರವು ಕನ್ನಡದ ಸಾಹಿತ್ಯ ಮತ್ತು ಸಂಗೀತದ ಕೊಡುಗೆ. ದೇಶದ ಇತರೆ ಭಾಷೆಗಳಲ್ಲಿ ಗೀತ ಗಾಯನದ ಪ್ರಕಾರ ವಿರಳ. ಸುಗಮ ಸಂಗೀತ ಅಪರೂಪದ ಕನ್ನಡ ಸಂಗೀತ ಸಂಸ್ಕೃತಿಯಾಗಿದೆ. ಇದನ್ನು ಇತರೆ ಭಾಷೆಗಳ ಜನರಿಗೂ ದಾಟಿಸಬೇಕು~ ಎಂದು ಅವರು ನುಡಿದರು.`ಹೊಸತನವಿದ್ದ ಕವಿತೆ ಒಳ್ಳೆಯ ಕವಿತೆ ಎಂಬ ಪರಿಭಾವನೆ ಸದ್ಯದ ಮಟ್ಟಿಗೆ ಉಳಿದುಕೊಂಡಿದೆ. ಕವಿತೆ ಬರೆಯಬಹುದು, ಆದರೆ ಕವಿತೆ ಎಂದರೇನು ಎಂದು ಬರೆಯುವುದು ಕಷ್ಟ.  ಕವಿತೆಯ ವ್ಯಾಕರಣ ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಕ್ಲೀಷೆಗಳನ್ನೂ ಮೀರಿ ನಾವೀನ್ಯತೆ ಹೊಂದಿದ ಕವಿತೆ ಹೆಚ್ಚು ಜನರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಎಂದೋ, ಯಾವುದೋ ವಸ್ತು ಮನಸ್ಸಿನಲ್ಲಿ ಉಳಿದು ಯಾವಾಗಲೋ ಕವಿತೆಯಾಗಿ ಮೂಡಿ ಬರುತ್ತದೆ. ಪ್ರತಿ ಕವಿತೆಯೂ ಹೊಸತನ ಹಾಗೂ ಅಂತರಂಗದಿಂದ ಮೂಡಿ ಬಂದಾಗ ಆ ಕವಿತೆಯ ಬಗ್ಗೆ ಕವಿಗೇ ಅಭಿಮಾನ ಹುಟ್ಟುತ್ತದೆ~ ಎಂದರು. ನಂತರ ತಮ್ಮ ಇತ್ತೀಚಿನ `ಕನ್ನಡಿಯ ಸೂರ್ಯ~ ಕವಿತೆಯನ್ನು ಅವರು ವಾಚಿಸಿದರು.ಕನ್ನಡ ಕವಿಗಳಾದ ಬಿ.ಆರ್.ಲಕ್ಷ್ಮಣ್‌ರಾವ್, ಜರಗನಹಳ್ಳಿ ಶಿವಶಂಕರ್, ಬಿ.ಟಿ.ಲಲಿತಾ ನಾಯಕ್, ಚೆನ್ನಣ್ಣ ವಾಲೀಕಾರ್, ಸವಿತಾ ನಾಗಭೂಷಣ, ಮಾಲತಿ ಪಟ್ಟಣಶೆಟ್ಟಿ, ಆರಿಫ್ ರಾಜಾ , ಎಸ್. ಮಂಜುನಾಥ್ ಕವಿತೆಗಳನ್ನು ವಾಚಿಸಿದರು.ಅತಿಥೇಯ ಭಾಷಾ ಕವಿಗಳಾದ ಇಂದಿರಾ ಬಾಲನ್ (ಮಲಯಾಳಂ), ಅಮೃತಾ ಪಾರ್ಥಸಾರಥಿ (ತಮಿಳು), ಡಿ.ರಾಜೇಶ್ವರಿ (ತೆಲುಗು), ಮಾಹಿರ್ ಮನ್ಸೂರ್ (ಉರ್ದು), ಡಾ.ಸವಿತಾ ಭಾರ್ಗವ್, ರತಿ ಸಕ್ಸೇನಾ ಮತ್ತು ಗ್ಯಾನ್‌ಚಂದ್ `ಮರ್ಮಜ್ಞ~ (ಹಿಂದಿ ಕವಿತೆಗಳು), ಡಾ.ಶಂಕರ್ (ಸಂಸ್ಕೃತ), ಮಂದೆರಾ ಜಯಪ್ಪಣ್ಣ (ಕೊಡವ), ಮಲಾರ್ ಜಯರಾಮ ರೈ (ತುಳು) ಮತ್ತು ಎಚ್.ಎಂ.ಪೆರುಮಾಳ್ (ಕೊಂಕಣಿ) ಕವಿತೆಗಳನ್ನು ವಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry