`ನೆರೆ-ಬರ' ಮಧ್ಯೆ ನಲುಗುತ್ತಿರುವ ಜನ-ಜಾನುವಾರು

7

`ನೆರೆ-ಬರ' ಮಧ್ಯೆ ನಲುಗುತ್ತಿರುವ ಜನ-ಜಾನುವಾರು

Published:
Updated:
`ನೆರೆ-ಬರ' ಮಧ್ಯೆ ನಲುಗುತ್ತಿರುವ ಜನ-ಜಾನುವಾರು

ಚಿಕ್ಕೋಡಿ:  ಕೃಷ್ಣಾ ಮತ್ತು ಉಪನದಿಗಳು ಒಂದು ಕಡೆ ಉಕ್ಕಿ ಹರಿಯುತ್ತಿವೆ. ಇನ್ನೊಂದೆಡೆ ಕೊಡ ನೀರಿಗಾಗಿ ಜನರು ಗಂಟೆಗಟ್ಟಲೆ ಟ್ಯಾಂಕರ್‌ಗಾಗಿ ಕಾದು ಕೂರಬೇಕಾದ ಅನಿವಾರ್ಯತೆ.ಇದು ಪಂಚನದಿಗಳು ಹರಿಯುವ ತಾಲ್ಲೂಕಿನಲ್ಲಿ ಪ್ರಸಕ್ತ ವರ್ಷ ಪ್ರಕೃತಿಯ ವೈರುಧ್ಯ. ತಾಲ್ಲೂಕಿನ ಸುಮಾರು 35 ಗ್ರಾಮಗಳು ನೆರೆಯ ಆತಂಕದಲ್ಲಿ ದಿನದೂಡುತ್ತಿದ್ದರೆ, 17 ಗ್ರಾಮಗಳಲ್ಲಿ ಹನಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರಸ್ತೆ ಬದಿ ನಿಲ್ಲುವ ಟ್ಯಾಂಕರ್‌ನಿಂದ ಕೊಡ ನೀರು ಪಡೆಯಲು ಜನರು ನೂಕಾಟ-ತಳ್ಳಾಟ ನಡೆಸಬೇಕಾದ ಅನಿವಾರ್ಯತೆಯೂ ಇದೆ. ಇನ್ನೊಂದೆಡೆ ನದಿ ತೀರದ ತೋಟದ ಮನೆಗಳಿಗೆ ನುಗ್ಗಿರುವ ನೀರಿನಿಂದ ಬಚಾವಾಗಲು ಸರಕು ಸರಂಜಾಮುಗಳೊಂದಿಗೆ ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.ಬೇಸಿಗೆಯಲ್ಲಿ ಕೃಷ್ಣೆ ಬತ್ತಿ ಹೋಗಿದ್ದಾಗ ಕುಡಿಯುವ ನೀರಿಗಾಗಿ ಕಳೆದ ಮೇನಲ್ಲಿ ಮಹಾರಾಷ್ಟ್ರದಿಂದ ಎರಡು ಟಿಎಂಸಿ ಅಡಿ ನೀರು ಬಿಡುಗಡೆ ಮಾಡಿಸಲು ಸರ್ಕಾರ ಹರಸಾಹಸಪಟ್ಟಿತ್ತು. ಆದರೆ, ಈಗ 'ಮಹಾ'ಮಳೆಯಿಂದ ಬೇಡವೆಂದರೂ ಹರಿದು ಬರುತ್ತಿರುವ ಭಾರಿ ಪ್ರಮಾಣದ ಕೃಷ್ಣೆ ಕ್ಷಣಕ್ಷಣಕ್ಕೂ ಮೈತುಂಬಿಕೊಂಡು ಹರಿಯುತ್ತಿದ್ದಾಳೆ.ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ತಾಲ್ಲೂಕಿನ ನಾಗರಮುನ್ನೋಳಿ ಹೋಬಳಿ ವ್ಯಾಪ್ತಿಯ ಕರೋಶಿ, ಉಮರಾಣಿ, ಇಟ್ನಾಳ, ಕುಂಗಟೋಳಿ, ಕಮತೇನಟ್ಟಿ,  ನಾಗರಮುನ್ನೋಳಿ ತೋಟಪಟ್ಟಿ, ಬೆಳಕೂಡ ಗ್ರಾಮ ಮತ್ತು ತೋಟಪಟ್ಟಿ, ಕರಗಾಂವ, ಬಂಬಲವಾಡ ತೋಟಪಟ್ಟಿ, ಖಜಗೌಡನಟ್ಟಿ, ಮಮದಾಪುರ ಕೆ.ಕೆ. ಮುಗಳಿ, ಬೆಣ್ಣಿಹಳ್ಳಿಗಳಲ್ಲಿ ನಿತ್ಯವೂ 19 ಟ್ಯಾಂಕರ್‌ಗಳ  ಹಾಗೂ ಚಿಕ್ಕೋಡಿ ಹೋಬಳಿ ವ್ಯಾಪ್ತಿಯ ಹಿರೇಕೋಡಿ, ಬಸವನಾಳಗಡ್ಡೆ, ಕಾಡಾಪುರ ಮತ್ತು ಕೇರೂರ ತೋಟಪಟ್ಟಿ ಗ್ರಾಮಗಳಿಗೆ ನಿತ್ಯವೂ 5 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂಬುದು ತಾಲ್ಲೂಕು ಆಡಳಿತ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry