ಭಾನುವಾರ, ಜೂಲೈ 12, 2020
29 °C

ನೆರೆ ಸಂತ್ರಸ್ತರಿಗೆ 60 ಸಾವಿರ ಆಸರೆ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಆಸರೆ ಯೋಜನೆಯಡಿ 60 ಸಾವಿರ ಮನೆಗಳನ್ನು ದಾನಿಗಳ ನೆರವಿನೊಂದಿಗೆ ರಾಜ್ಯ ಸರ್ಕಾರ ನಿರ್ಮಿಸುತ್ತಿದ್ದು, ಮಾರ್ಚ್ ವೇಳೆಗೆ 40 ಸಾವಿರ ಮನೆ ಪೂರ್ಣಗೊಳ್ಳಲಿವೆ. ಆಗಸ್ಟ್ ತಿಂಗಳಲ್ಲಿ 60 ಸಾವಿರ ಮನೆಗಳನ್ನೂ ಸಂತ್ರಸ್ತರಿಗೆ ಕಲ್ಪಿಸಲಾಗುವುದು ಎಂದು ರಾಜ್ಯ ವಸತಿ ಖಾತೆ ಸಚಿವ ವಿ ಸೋಮಣ್ಣ ಹೇಳಿದರು.ಶುಕ್ರವಾರ ಇಲ್ಲಿಗೆ ಸಮೀಪದ ಕಟಕನೂರು ಗ್ರಾಮದಲ್ಲಿ ಚಿಕ್ಕಮಂಚಾಲಿ, ತಲಮಾರಿ, ಬಿಚ್ಚಾಲಿ ಗ್ರಾಮದ ನೆರೆ ಸಂತ್ರಸ್ತರಿಗೆ ಸಿಸ್ಕೋ ಸಂಸ್ಥೆಯು ನಿರ್ಮಿಸಿದ 500 ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.2009ರಲ್ಲಿನ ಪ್ರವಾಹ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿತ್ತು. ಅನೇಕ ದಾನಿಗಳು ಸರ್ಕಾರದೊಂದಿಗೆ ಸಂತ್ರಸ್ತರ ನೆರವಿಗೆ ಧಾವಿಸಿದವು. ಮಾನವೀಯತೆಗೆ ಮತ್ತೊಂದು ಹೆಸರಾಗಿ ಸಿಸ್ಕೋ ಸಿಸ್ಟಮ್ಸ್ ಸಂಸ್ಥೆಯು ಸಂತ್ರಸ್ತರಿಗೆ ಸುಮಾರು ನಾಲ್ಕು ಸಾವಿರ ಮನೆ ನಿರ್ಮಿಸಲು ಮುಂದಾಗಿದ್ದು ಗಮನಾರ್ಹ ಸಂಗತಿ. ಇಲ್ಲಿನ ಮಕ್ಕಳ ಶೈಕ್ಷಣಿಕ ಏಳ್ಗೆಗೆ, ಆರೋಗ್ಯ ಸೇವಾ ಸುಧಾರಣೆ ವಿಶೇಷ ಗಮನಹರಿಸುವ ಮೂಲಕ ಕಾಳಜಿ ಮೆರೆದಿದೆ ಎಂದು ಪ್ರಶಂಸಿಸಿದರು.ನೆರೆ ಸಂತ್ರಸ್ತರಿಗೆ ಆಸರೆ ಯೋಜನೆ ರೂಪಿಸಿ ಮನೆ ದೊರಕಿಸುವ ಗಟ್ಟಿ ನಿರ್ಧಾರ ಕೈಗೊಂಡವರು ಮುಖ್ಯಮಂತ್ರಿಯವರು. ದಾನಿ ಸಂಸ್ಥೆಗಳ ನೆರವಿನಡಿ ಆ ಗುರಿ ಸಾಧಿಸಲಾಗುತ್ತಿದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಹೇಳಿದರು.ಸಿಸ್ಕೋ ಸಂಸ್ಥೆಯ ಜಾಗತಿಕ ಘಟಕದ ಮುಖ್ಯಸ್ಥ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಮ್ ಎಲ್‌ಫ್ರಿಂಕ್ ಮಾತನಾಡಿ, ಈಗಾಗಲೇ 500 ಮನೆ ಹಸ್ತಾಂತರಿಸಲಾಗಿದೆ. ಈಗ 500 ಮನೆ ಹಸ್ತಾಂತರಿಸಲಾಗುತ್ತಿದೆ. ಸಂತ್ರಸ್ತರಿಗೆ ಮನೆ ನಿರ್ಮಿಸುವ ಜೊತೆಗೆ ಇಲ್ಲಿನ ಆರೋಗ್ಯ ಕೇಂದ್ರ, ಗುಣಮಟ್ಟದ ಶಿಕ್ಷಣ, ಇಲ್ಲಿನ ಆಯ್ದ ಶಾಲೆಗಳಲ್ಲಿ ಇಂಗ್ಲಿಷ್ ಭಾಷೆ ಕಲಿಕೆಗೆ ವ್ಯವಸ್ಥೆ ಮಾಡಿದೆ ಎಂದು ನುಡಿದರು.ನೆರೆ ಸಂತ್ರಸ್ತರಿಗೆ 2010ರ ಜನವರಿಯಲ್ಲಿ ಮನೆ ನಿರ್ಮಾಣ ಕಾರ್ಯ ಕೈಗೊಂಡು ಈಗ ಸಾವಿರ ಮನೆ ಹಸ್ತಾಂತರಿಸಲಾಗಿದೆ  ಎಂದು ಸಿಸ್ಕೋ ಸಂಸ್ಥೆಯ ಭಾರತ ಘಟಕದ ವ್ಯವಸ್ಥಾಪಕ ನಿರ್ದೇಶಕ ಮತ್ತು ಉಪಾಧ್ಯಕ್ಷ ಅರವಿಂದ ಸೀತಾರಾಮನ್ ಹೇಳಿದರು. 110 ಕಂಪ್ಯೂಟರ್‌ಗಳನ್ನು ಈ ಭಾಗದ 11 ಶಾಲೆಗಳಿಗೆ ಸಂಸ್ಥೆಯ ಸಮುದಾಯ ಯೋಜನೆಯಡಿ ಒದಗಿಸಿ ತಂತ್ರಜ್ಞಾನದ ಮೂಲಕ ಶಿಕ್ಷಣ ದೊರಕಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಈ ಯೋಜನೆ ವಿಸ್ತರಿಸಲಾಗುವುದೆಂದು ತಿಳಿಸಿದರು.  ಶಾಸಕ ರಾಜಾ ರಾಯಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸಂಸದ ಎಸ್ ಪಕ್ಕೀರಪ್ಪ, ಶಾಸಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.