ಗುರುವಾರ , ಮೇ 13, 2021
40 °C

ನೆರೆ ಹಾನಿ: ಸ್ಟಷ್ಟ ಮಾಹಿತಿ ನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾನದಿ ಪ್ರವಾಹದ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡುವಂತೆ  ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ  ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ  ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು ನದಿಪಾತ್ರದ ಹಾನಿ ಕುರಿತು ಪ್ರವಾಹ ಕಡಿಮೆಯಾದ ಕೂಡಲೇ ಬೆಳೆ, ವಿದ್ಯುತ್ ಕಂಬ, ರಸ್ತೆ ಸೇತುವೆ ಇತ್ಯಾದಿಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿದರು.ಜಿಲ್ಲೆಯಲ್ಲಿ ವಿವಿಧ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಎಲ್ಲಾ ಮನೆಗಳ ನಿರ್ಮಾಣಕ್ಕೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.ನಿವೇಶನ ಗುರುತಿಸುವ ಕಾರ್ಯಕ್ಕೆ ನಿಗದಿತ ನಮೂನೆಯಲ್ಲಿ ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.ಜಿಲ್ಲೆಯಲ್ಲಿ ವಿದ್ಯುತ್  ಬೇಡಿಕೆ ಮತ್ತು ಪೂರೈಕೆಯ ಮಾಹಿತಿ ಪಡೆದ ಸಚಿವರು ವಿತರಣಾ ಕೇಂದ್ರದ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ನಿತಂತರ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲು ಮತ್ತು ರೈತರಿಗೆ ಅನುಕೂಲ ಕರ ವೇಳೆಯಲ್ಲಿ ವಿದ್ಯುತ್ ಸರಬರಾಜು ಮಾಡಲು ಹಾಗೂ ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿಗೆ ಬಾದಾಮಿ ಬಾಗಲಕೋಟೆ ಮತ್ತು ಮುಧೋಳದಲ್ಲಿ ಕೇಂದ್ರಗಳನ್ನು ಪ್ರಾರಂಭಿಸುವಂತೆ ಸೂಚಿಸಿದರು.ಸಾವಳಗಿ ಮತ್ತು ಇಂಗಳಗಿ ಗ್ರಾಮಗಳಿಗೆ ಹೆಚ್ಚಿನ ವಿದ್ಯುತ್ ತಂತಿ ವ್ಯವಸ್ಥೆ ಮಾಡಬೇಕು, ಪ್ರವಾಹದ ಹಿನ್ನೆಲೆಯಲ್ಲಿ ಹಾಳಾದ ಟ್ರಾನ್ಸ್‌ಫಾರ್ಮರ್‌ಗಳ ಬಗ್ಗೆ ಮಾಹಿತಿ ನೀಡಲು ಸಚಿವರು ತಿಳಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮಗಳಿಂದ ಗಂಗಾಕಲ್ಯಾಣ ಯೋಜನೆಯಡಿ ಕೊರೆಯಲಾದ ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಿಳಿಸಿದರು.ಜಿಲ್ಲೆಯಲ್ಲಿ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಿಳಿಸಿದ ಸಚಿವರು ಜಿಲ್ಲೆಯ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸ್ಥಳದಲ್ಲೇ ದೂರವಾಣಿ ಮೂಲಕ ತಿಳಿಸಿದರು. ಪಡಿತರ ವ್ಯವಸ್ಥೆ

ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆ ಸಮರ್ಕವಾಗಿರುವಂತೆ ನೋಡಿಕೊಳ್ಳಲು ಹಾಗೂ ಎಲ್.ಪಿ.ಜಿ. ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.  ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿಗೆ ವಹಿಸಲಾಗಿರುವ ಮನೆಗಳನ್ನು ಶೀಘ್ರ ಪೂರ್ಣ ಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಗೆ ಸೂಚಿಸಿದರು.ಜಿಲ್ಲಾದ್ಯಂತ ಕೃಷಿ ಚಟುವಟಿಕೆಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಳಕೆ ಮಾಡುತ್ತಿರುವ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನಗಳ ಚಾಲಕರಿಗೆ ಪರವಾನಗಿ ಪತ್ರ ನೀಡಲು ಗ್ರಾಮೀಣ ಪ್ರದೇಶದಲ್ಲಿ ಕ್ಯಾಂಪ್ ಮಾಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮತ್ತು ಎಲ್ಲಾ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಸಚಿವರು ಹೇಳಿದರು.ಜಿಲ್ಲೆಯಲ್ಲಿ ಹೆಚ್ಚಿನ ಸ್ಥಳಾವಕಾಶ ಇರುವ ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದ ಅವರು ವಿದ್ಯಾರ್ಥಿನಿಲಯಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ತಿಳಿಸಿದರು.ಅಕ್ಟೋಬರ್‌ನಲ್ಲಿ  ಪ್ರಗತಿ ಪರಿಶೀಲನೆ ನಡೆಸುವ ಮುನ್ನ ಪ್ರಮುಖ ಇಲಾಖಾ ಅಧಿಕಾರಿಗಳ ಸಭೆ ಕರೆಯಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.ವಿಧಾನಸಭಾ ಕ್ಷೇತ್ರವಾರು ವಸತಿ ಯೋಜನೆಯ ಕಾಮಗಾರಿಗಳ ಪಟ್ಟಿಮಾಡಲು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನ್ನವರ, ಉಪಾಧ್ಯಕ್ಷ ಹೂವಪ್ಪ ರಾಠೋಡ, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ,  ಶ್ರಿಕಾಂತ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ಎಸ್.ಜಿ. ನ್ಯಾಮಗೌಡ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಮುಖ್ಯ ಕಾರ್ಯನಿರ್ವಹನಾಧಿಕಾರಿ ಡಾ. ಜೆ.ಸಿ. ಪ್ರಕಾಶ, ಅಪರ ಜಿಲ್ಲಾಧಿಕಾರಿ ಎಸ್.ಜಿ. ವಾಲಿ, ಉಪಕಾರ್ಯದರ್ಶಿ ಹಿರೇಮಠ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.