ಬುಧವಾರ, ಆಗಸ್ಟ್ 21, 2019
28 °C

ನೆರೆ ಹಾವಳಿ: ಡಿಸಿ ಪರಿಶೀಲನೆ

Published:
Updated:

ಆಲಮಟ್ಟಿ: ಆಲಮಟ್ಟಿ ಮುಂಭಾಗದ ಕೃಷ್ಣಾ ತೀರದ ಬಸವನಬಾಗೇವಾಡಿ ತಾಲ್ಲೂಕು ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಮಂಗಳವಾರ ಸಂಜೆ ವಿಜಾಪುರ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಅರಳದಿನ್ನಿ, ಮುದ್ದೇಬಿಹಾಳ ತಾಲ್ಲೂಕಿನ ಕಾಶೀನಕುಂಟಿ, ಯಲಗೂರ, ಯಲ್ಲಮ್ಮನಬೂದಿಹಾಳ, ಹೊಳೆ ಮಸೂತಿ ಗ್ರಾಮಗಳ ಜಲಾವೃತಗೊಂಡ ಜಮೀನುಗಳ ಸುತ್ತ ಸಂಚರಿಸಿ ಅಲ್ಲಿಯ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು.ನಂತರ ಮಾತನಾಡಿದ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲೆಯಲ್ಲಿ ಕೃಷ್ಣಾ ನದಿಯ ನೆರೆಹಾವಳಿ ಇಲ್ಲ, ಕೇವಲ ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಕೃಷ್ಣಾ ತೀರದ ಕೆಲ ಗ್ರಾಮಗಳ ಜಮೀನುಗಳು ಮಾತ್ರ ಜಲಾವೃತಗೊಳ್ಳುತ್ತವೆ ಎಂದರು.

ಪ್ರತಿ ವರ್ಷವೂ ಈ ರೀತಿಯ ಆತಂಕದ ಸ್ಥಿತಿ ಈ ಜಮೀನಿನ ರೈತರಿಗಿದ್ದು, ಈ ಕುರಿತು ವೈಜ್ಞಾನಿಕ ಆಧಾರದ ಮೇಲೆ ಅಧ್ಯಯನ ನಡೆಸಿ ಸರಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗುವುದು ಎಂದರು.ನೆರೆಹಾವಳಿ ಎದುರಿಸಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಅನೇಕ ಬಾರಿ ನದಿ ತೀರದ ಗ್ರಾಮಸ್ಥರಿಗೆ ಡಂಗುರ ಸಾರುವ ಮೂಲಕ ಎಚ್ಚರಿಕೆ ನೀಡಲಾಗಿದ್ದು, ಆಲಮಟ್ಟಿ ಜಲಾಶಯದಿಂದ ಹೆಚ್ಚು ನೀರು ಬಿಡುವ ಮೊದಲೇ ಆ ಗ್ರಾಮಸ್ಥರಿಗೆ ತಿಳಿಸಲಾಗಿದೆ ಎಂದರು. ಮುಂಜಾಗ್ರತೆಯ ಕ್ರಮವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಬೋಟ್‌ಗಳು, ನುರಿತ ಈಜುಗಾರರು ಸನ್ನದ್ಧರಾಗಿದ್ದಾರೆ ಎಂದರು.ಪರಿಹಾರ: ಜಲಾವೃತಗೊಂಡ ಜಮೀನಿನ ಹಾಗೂ ಅಲ್ಲಿ ಬೆಳೆದ ಬೆಳಗಳ ಬಗ್ಗೆ ನೀರಿನ ಅಬ್ಬರ ಕಡಿಮೆಯಾದ ಮೇಲೆ ಸಮರ್ಪಕ ಸಮೀಕ್ಷೆ ನಡೆಸಿ ಅಗತ್ಯ ಪರಿಹಾರ ನೀಡಲು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಿ, ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಹೇಳಿದರು.ಪ್ರವಾಹ ಭೀತಿಯ ಹಿನ್ನೆಲೆಯಲ್ಲಿ ದಿನದ 24 ಗಂಟೆಯೂ ಕಂಟ್ರೋಲ್ ರೂಮ್‌ನ್ನು ತೆಗೆಯಲಾಗಿದ್ದು, ನಿತ್ಯವೂ ಒಬ್ಬ ಕಂದಾಯ ಇಲಾಖೆಯ ಅಧಿಕಾರಿ ಕೃಷ್ಣಾ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಲು ಆದೇಶಿಸಲಾಗಿದೆ ಎಂದರು.

ತಹಶೀಲ್ದಾರ್ ಅಪರ್ಣಾ ಪಾವಟೆ, ಕಂದಾಯ ಇಲಾಖೆಯ ಇನ್ನೀತರ ಅಧಿಕಾರಿಗಳು, ರೈತರಾದ ಸಂಜೀವ ಪೂಜಾರಿ, ಯಲಗೂರದಪ್ಪ ಪೂಜಾರಿ, ಎ.ಎನ್. ಬಡಿಗೇರ ಸೇರಿದಂತೆ ಇನ್ನಿತರರು ಇದ್ದರು.ನೀರಿನ ಮಟ್ಟ ಇಳಿಕೆ: ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಟ್ಟಿದ್ದರೂ ಜಲಾವೃತಗೊಂಡಿದ್ದ ಭೂಮಿಯಿಂದ ನೀರಿನ ಮಟ್ಟ ಇಳಿಕೆಯಾಗುತ್ತಿರುವುದು ಸಂತಸ ಮೂಡಿಸಿದೆ.ಆಲಮಟ್ಟಿ ಜಲಾಶಯದ ಮುಂಭಾಗದ ನಾರಾಯಣಪುರ ಜಲಾಶಯದ ಹಿಂಭಾಗದ ಅರಳದಿನ್ನಿ, ಯಲಗೂರ ಗ್ರಾಮದ ಕೆಲ ಜಮೀನುಗಳಲ್ಲಿ ಹೊಕ್ಕಿದ್ದ ನೀರು ಬುಧವಾರ ಕಡಿಮೆಗೊಂಡು ಇಳಿಮುಖಗೊಂಡಿದೆ.ಬಸವನಬಾಗೇವಾಡಿ ಹಾಗೂ ಮುದ್ದೇಬಿಹಾಳ ತಾಲ್ಲೂಕು ಆಡಳಿತ ಜಂಟಿಯಾಗಿ ಅಣಕು ಕಾರ್ಯಾಚರಣೆ ನಡೆಸಿ ಬೋಟ್‌ನ್ನು ಕೃಷ್ಣಾ ತೀರದಲ್ಲಿ ನಿಲ್ಲಿಸಲಾಗಿದೆ. ಯಾವುದೇ ಆತಂಕದ ಸ್ಥಿತಿ ಎದುರಿಸಲು ಈ ಬೋಟ್ ಕಾರ್ಯಾಚರಣೆ ನಡೆಸಲು ಸದಾ ಸನ್ನದ್ಧವಾಗಿದೆ.ಆದರೇ ಇಲ್ಲಿಯವರೆಗೆ ಅದು ಕಾರ್ಯನಿರ್ವಹಿಸಿಯೇ ಇಲ್ಲ...! ಯಾಕೆಂದರೇ ಜಲಾಶಯದಿಂದ ನೀರು ಬಿಟ್ಟಾಗ ಇಲ್ಲಿಯವರೆಗೆ ಆಲಮಟ್ಟಿ ಮುಂಭಾಗದ ಯಾವುದೇ ಗ್ರಾಮಗಳು ಜಲಾವೃತಗೊಂಡಿಲ್ಲ. ಕೇವಲ ಜಮೀನುಗಳು ಮಾತ್ರ ಮುಳುಗಡೆಯಾಗುತ್ತವೆ. ಒಂದೇ ಒಂದು ಬಾರಿ ಮಾತ್ರ ಆಗಷ್ಟ 2005 ರಲ್ಲಿ ದಾಖಲೆಯ 4.5 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದರಿಂದ ಮಸೂತಿ ಗ್ರಾಮದ ಒಂದು ಬೀದಿಯಲ್ಲಿ ಮಾತ್ರ ನೀರು ಹೊಕ್ಕಿತ್ತು.

Post Comments (+)