ಶುಕ್ರವಾರ, ಮಾರ್ಚ್ 5, 2021
17 °C
ನಾಲ್ವರು ಬಲಿ, ನೂರಕ್ಕೂ ಹೆಚ್ಚು ಕುಟುಂಬ ಸ್ಥಳಾಂತರ

ನೆರೆ ಹಾವಳಿ: ನಲುಗಿದ ಕರಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರೆ ಹಾವಳಿ: ನಲುಗಿದ ಕರಾವಳಿ

ಮಂಗಳೂರು: ಪಶ್ಚಿಮ ಘಟ್ಟ ಮತ್ತು ತಪ್ಪಲಿನ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು ಉಕ್ಕಿ ಹರಿದಿವೆ. ಕರಾವಳಿಯ ನದಿಗಳಲ್ಲಿ ಏಕಾಏಕಿ ಕಾಣಿಸಿಕೊಂಡ ಪ್ರವಾಹ ಗುರುವಾರ ನಾಲ್ಕು ಜೀವಗಳನ್ನು ಬಲಿ ಪಡೆದಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.ಸಾವಿರಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದು, 100ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಸಾವಿರಾರು ಎಕರೆ ಕೃಷಿಭೂಮಿ ಜಲಾವೃತಗೊಂಡಿದೆ.ಬಂಟ್ವಾಳ ತಾಲ್ಲೂಕಿನ ಅಮ್ಮುಂಜೆಯಲ್ಲಿ ಇಬ್ಬರು, ಮಂಗಳೂರು ತಾಲ್ಲೂಕಿನ ಹರೇಕಳ ಹಗೂ ಬೆಳ್ತಂಗಡಿ ತಾಲ್ಲೂಕಿನ ನಾವೂರಿನಲ್ಲಿ ತಲಾ ಒಬ್ಬರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.ಅಮ್ಮುಂಜೆ: ಇಬ್ಬರು ನೀರುಪಾಲು

ಬಂಟ್ವಾಳ:
ತಾಲ್ಲೂಕಿನ ಪೊಳಲಿ ಸಮೀಪದ ಅಮ್ಮುಂಜೆ ಮುಹಿಯುದ್ದೀನ್ ಜುಮ್ಮಾ ಮಸೀದಿ  ಹಿಂಬದಿಯ ಗದ್ದೆಗೆ ನುಗ್ಗಿದ ಫಲ್ಗುಣಿ ನದಿಯ ಪ್ರವಾಹದಲ್ಲಿ ಸ್ಥಳೀಯ ಯುವಕರಿಬ್ಬರು ಕೊಚ್ಚಿಹೋಗಿದ್ದಾರೆ.ಮಸೀದಿಯ ಉಪಾಧ್ಯಕ್ಷ ಅಬೂಬಕ್ಕರ್ ಅವರ ಪುತ್ರ ಮೊಹಮ್ಮದ್ ಇಝಾದ್ (19) ಮತ್ತು ದಿ. ಇಬ್ರಾಹಿಂ ಅವರ ಪುತ್ರ ರಝಾಕ್ (20) ಮೃತರು. ಇಝಾದ್ ಮಂಗಳೂರಿನ ನೀರುಮಾರ್ಗದ ಖಾಸಗಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ನ ಎರಡನೇ ವರ್ಷದ ವಿದ್ಯಾರ್ಥಿ. ವೃತ್ತಿಯಲ್ಲಿ  ಪೇಂಟರ್ ಆಗಿರುವ ರಝಾಕ್, ತಾಯಿ ಮತ್ತು ಸಹೋದರರನ್ನು ಸಲಹುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಸೀದಿ ಹಿಂಬದಿಯ ಗದ್ದೆ ನಡುವೆ ಹಾದು ಹೋಗಿರುವ ರಸ್ತೆಗೆ ಫಲ್ಗುಣಿ ನೀರು ನುಗ್ಗಿತ್ತು.ಈ ನೀರಿನಲ್ಲಿ ಮುಳುಗಿದ್ದ ತೆಂಗಿನ ಮರದ ತುಂಡಿನಲ್ಲಿ ಕುಳಿತು ನಾಲ್ವರು ಯುವಕರು ಆಡುತ್ತಿದ್ದರು. ರಝಾಕ್ ಮತ್ತು ಇಝಾದ್ ನೀರಿಗೆ ಬಿದ್ದರು. ಜತೆಗಿದ್ದ ದೊಂಪದ ಮನೆ ನಿವಾಸಿ ಆಷ್ಪಾಕ್ ಮತ್ತು ಬಸ್ ಚಾಲಕ ಮುಂಡಬೆಟ್ಟು ನಿವಾಸಿ ಹಸನ್ ಅವರು ನೀರಿಗೆ ಬಿದ್ದ ಯುವಕರನ್ನು ಬದುಕಿಸಲು ಪ್ರಯತ್ನಿಸಿದರು. ನಾಲ್ವರು ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡರು. ತಕ್ಷಣವೇ ಸ್ಥಳೀಯ ನಿವಾಸಿಗಳಾದ ಉಮರಬ್ಬ, ಜುಬೇದ್ ಮತ್ತು ಸಿದ್ದಿಕ್ ಅವರು ಬಾವಿಯ ಹಗ್ಗ ಎಸೆದು ಇಬ್ಬರನ್ನು ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದರು.ಅಷ್ಟರಲ್ಲಿ ರಝಾಕ್ ಮತ್ತು ಇಝಾದ್ ಕಣ್ಮರೆಯಾಗಿದ್ದರು. ಬಂಟ್ವಾಳ ಮತ್ತು ಮಂಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ನಾಡದೋಣಿ ಮೂಲಕ ಸ್ಥಳೀಯರೊಂದಿಗೆ ಸೇರಿಕೊಂಡು ಹುಡುಕಾಟ ಮಾಡಿದರೂ ಪ್ರಯೋಜನ ಆಗಲಿಲ್ಲ.

ಬಳಿಕ ನುರಿತ ಈಜುಗಾರರು ಸಂಜೆವರೆಗೆ ಹುಡುಕಾಟ ನಡೆಸಿ ಇಬ್ಬರ ಮೃತದೇಹಗಳನ್ನೂ  ಪತ್ತೆಹಚ್ಚಿದರು. ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡ ರಾಜೇಶ ನಾಯ್ಕ, ಮಸೀದಿ ಅಧ್ಯಕ್ಷ ಖಾದರ್, ಜಿಲ್ಲಾಧಿಕಾರಿ ಎನ್.ಪ್ರಕಾಶ್, ಎಸ್ಪಿ ಅಭಿಷೇಕ್ ಗೋಯಲ್ ಮತ್ತಿತರರು ಭೇಟಿ ನೀಡಿದರು.ಹರೇಕಳ: ಯುವಕ ನೀರುಪಾಲು

ಮುಡಿಪು:
ಹರೇಕಳ ಗ್ರಾಮದ ಯುವಕರೊಬ್ಬರು ಗುರುವಾರ ನೇತ್ರಾವತಿ ನದಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟರು. 

ಹರೇಕಳ ಗ್ರಾಮದ ದೆಬ್ಬೇಲಿ ನಿವಾಸಿ ಖಾದರ್ ಅವರ ಪುತ್ರ ಕಲಂದರ್ (21) ಮೃತರು. ಎಲೆಕ್ಟ್ರಿಷಿಯನ್ ಆಗಿರುವ ಕಲಂದರ್ ಕೊಜಪಾಡಿಯಲ್ಲಿ ನೇತ್ರಾವತಿ ನದಿ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ನದಿಗೆ ಬಿದ್ದರು.   ನೆರೆಯಿಂದಾಗಿ ನದಿಯಲ್ಲಿ ಕೆಸರು ತುಂಬಿಕೊಂಡಿದ್ದು, ಅದರಲ್ಲಿ ಕಲಂದರ್ ಸಿಲುಕಿಕೊಂಡರು. ಸ್ಥಳೀಯರು ಯುವಕನನ್ನು ಮೇಲೆತ್ತಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ನೀರಿನಲ್ಲಿ ಮುಳುಗಿ ಅವರು ಮೃತಪಟ್ಟರು.ನಾವೂರು: ಯುವಕ ಸಾವು

ಉಜಿರೆ:
ಬೆಳ್ತಂಗಡಿ ತಾಲ್ಲೂಕಿನ ನಾವೂರು ಗ್ರಾಮದ ಪರಾರಿ ಮನೆ ನಿವಾಸಿ ಮಹಾಬಲ ಮೂಲ್ಯ (26) ಗುರುವಾರ ಬೆಳಿಗ್ಗೆ ನದಿಗೆ ಹಾಕಿದ ಪಾಪು (ಮರದ ತುಂಡು) ಮೇಲೆ ಹೋಗುವಾಗ ಆಯ ತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ್ದರು.ಬಂಟ್ವಾಳ: 100ಕ್ಕೂ ಅಧಿಕ ಮನೆ ತೆರವು

ಬಂಟ್ವಾಳ:
ಭಾರಿ ಮಳೆಯಿಂದ ಉಂಟಾದ ಪ್ರವಾದಿಂದಾಗಿ ಬಂಟ್ವಾಳ ತಾಲ್ಲೂಕಿನಾದ್ಯಂತ ಸುಮಾರು 100ಕ್ಕೂ ಮಿಕ್ಕಿ ಮನೆಗಳನ್ನು ಗುರುವಾರ ತೆರವುಗೊಳಿಸಲಾಯಿತು.ತಾಲ್ಲೂಕಿನ ಬಡ್ಡಕಟ್ಟೆ, ಭಂಡಾರಿಬೆಟ್ಟು, ಬಸ್ತಿಪಡ್ಪು, ಜಕ್ರಿಬೆಟ್ಟು, ನಾವೂರ, ಕಂಚಿಕಾರಪೇಟೆ, ಜೈನರಪೇಟೆ, ಪಾಣೆಮಂಗಳೂರು, ಗೂಡಿನಬಳಿ, ಆಲಡ್ಕ, ಬರಿಮಾರು, ಕಡೇಶ್ವಾಲ್ಯ, ತಲಪಾಡಿ, ಶಾಂತಿಅಂಗಡಿ, ಜುಮಾದಿಗುಡ್ಡೆ, ನಂದರಬೆಟ್ಟು ಮತ್ತಿತರ ಕಡೆಗಳಲ್ಲಿ ನೂರಾರು ಮನೆಗಳಿಗೆ ನೆರೆನೀರು ನುಗ್ಗಿದೆ.ಇವುಗಳಲ್ಲಿ ಸುಮಾರು 25ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ. ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರ ಮನೆಯೂ ಜಲಾವೃತಗೊಂಡಿದೆ. ಅನೇಕ ಕಡೆ ಕಿರುಸೇತುವೆಗಳು ಮುಳುಗಡೆಯಾಗಿದ್ದು, ಭಂಡಾರಿಬೆಟ್ಟು ನೆರೆ ವಿಮೋಚನಾ ರಸ್ತೆ ಸೇತುವೆ ಬದಿ ಕುಸಿದಿದೆ. 16 ವರ್ಷಗಳ ಬಳಿಕ ಬಂಟ್ವಾಳ ಭಾರಿ ನೆರೆ ಉಂಟಾಗಿದೆ.ಮಳೆ ಪ್ರಮಾಣ

ಪುತ್ತೂರು      219.3 ಮಿ.ಮೀ

ಬೆಳ್ತಂಗಡಿ      204.6 ಮಿ.ಮೀ

ಸುಳ್ಯ       118.6 ಮಿ.ಮೀ

ಬಂಟ್ವಾಳ       96.2 ಮಿ.ಮೀ

ಮಂಗಳೂರು   51.3 ಮಿ.ಮೀರೈಲು ಮತ್ತೆ ಆರಂಭ

ಮಂಗಳೂರು:
ಸಕಲೇಶಪುರ ಬಳಿಯ ದೋಣಿಗಲ್ ಬಳಿ ಭೂಕುಸಿತದಿಂದ ಸ್ಥಗಿತಗೊಂಡಿದ್ದ ಬೆಂಗಳೂರು- ಮಂಗಳೂರು ನಡುವಿನ ರೈಲು ಸಂಚಾರ ಗುರುವಾರ ಮತ್ತೆ ಆರಂಭಗೊಂಡಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.ಶಾಲೆ-ಕಾಲೇಜಿಗೆ ಇಂದು ರಜೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

ಬುಧವಾರ ಸಂಜೆ  ಇಲ್ಲಿ ಸಚಿವ ಯು.ಟಿ. ಖಾರದ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ತಿಳಿಸಿದ್ದಾರೆ.ಕಿಂಡಿ ಅಣೆಕಟ್ಟೆ ಮುಳುಗಡೆ

ಮಳವೂರು: ಮತ್ತೆ ಒಡೆದ ನದಿದಂಡೆ


ಪಶ್ಚಿಮ ಘಟ್ಟ ತಪ್ಪಲಿನಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ನದಿಗಳು ಉಕ್ಕಿ ಹರಿಯುತ್ತಿವೆ. ಮಳವೂರಿನ ಫಲ್ಗುಣಿ ನದಿ ಉಕ್ಕಿ ಹರಿದ ಪರಿಣಾಮ ನಗರದ ಹೊರವಲಯದ ಮಳವೂರು ಕಿಂಡಿ ಅಣೆಕಟ್ಟು ಗುರುವಾರ ಸಂಪೂರ್ಣ ಮುಳುಗಡೆಯಾಗಿದೆ.ನೀರಿನ ಪ್ರವಾಹದ ರಭಸಕ್ಕೆ ಅಣೆಕಟ್ಟು ಪ್ರದೇಶದಲ್ಲಿ ನದಿ ದಂಡೆ ಎರಡು ಕಡೆ ಒಡೆದು ಪಕ್ಕದ ಪಡುಶೆಡ್ಡೆಯ ತೋಟ ಹಾಗೂ ಕೃಷಿ ಗದ್ದೆಗಳು ಜಲಾವೃತವಾಗಿವೆ. ಈ ಪ್ರದೇಶದ ಸುಮಾರು ಮೂರು ಮನೆಗಳು ಮುಳುಗಡೆಯಾಗಿವೆ. 30ಕ್ಕೂ ಅಧಿಕ ಮನೆಗಳು ಮುಳುಗಡೆ ಭೀತಿ ಎದುರಿಸುತ್ತಿವೆ.ನೂತನವಾಗಿ ನಿರ್ಮಿಸಿದ ಮಳವೂರು ಕಿಂಡಿ ಅಣೆಕಟ್ಟೆಯ ದಂಡೆ ಕಳೆದ ವರ್ಷ ಮಳೆನೀರಿನ ಪ್ರವಾಹಕ್ಕೆ ಒಡೆದು ಹೋಗಿತ್ತಲ್ಲದೇ ಎರಡು ಮನೆಗಳೂ ಭಾಗಶಃ ನದಿಪಾಲಾಗಿದ್ದವು. ಬಳಿಕ ಅಲ್ಲಿ ಕಾಂಕ್ರೀಟ್ ದಂಡೆಯನ್ನು ದುರಸ್ತಿಗೊಳಿಸಲಾಗಿತ್ತು. `ಈ ಅಣೆಕಟ್ಟೆಯ ವಿನ್ಯಾಸವೇ ಸರಿ ಇಲ್ಲ. ಅಣೆಕಟ್ಟೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಸ್ಥಳವೂ ಸೂಕ್ತವಾದುದಲ್ಲ. ಪ್ರವಾಹದಲ್ಲಿ ತೇಲಿಬರುವ ಕಸಕಡ್ಡಿ, ಮರಮಟ್ಟುಗಳು ಅಣೆಕಟ್ಟೆಯಲ್ಲಿ ಸಿಲುಕಿಕೊಂಡಾಗ ನೀರಿನ ಹರಿವಿಗೆ ತಡೆಯಾಗುತ್ತದೆ. ಹಾಗಾಗಿ  ನೀರು ಸಹಜವಾಗಿಯೇ ಪಕ್ಕದ ಕೃಷಿ ಭೂಮಿಗೆ ನುಗ್ಗುತ್ತದೆ. ನದಿ ದಂಡೆಯನ್ನು ಎತ್ತರಿಸುವಂತೆ ಕೋರಿದ್ದರೂ ಸರ್ಕಾರವಾಗಲೀ, ಗುತ್ತಿಗೆದಾರರಾಗಲಿ ಕಿವಿಕೊಟ್ಟಿಲ್ಲ' ಎಂದು ದೂರುತ್ತಾರೆ ಸ್ಥಳೀಯರಾದ ವಿಕ್ಟರ್ ಪಡುಶೆಡ್ಡೆ.

`ಕೃತಕ ನೆರೆಯ ಬಗ್ಗೆ ನಮಗೆ ಭೀತಿ ಇಲ್ಲ.  ಆದರೆ ನದಿ ದಂಡೆ ಒಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.ನೂರಾರು ಮನೆ ಜಲವೃತ: ನಗರದ ಕುದ್ರೊಳಿ, ಜೆಪ್ಪಿನಮೊಗರು, ಮುಳಿಹಿತ್ಲು, ಅಡ್ಯಾರ್, ವಳಚ್ಚಿಲ್ ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ವಳಚ್ಚಿಲ್‌ನಲ್ಲಿ ಗುಡ್ಡ ಕುಸಿದಿದೆ. ಜೆಪ್ಪಿನ ಮೊಗರು ಹಾಗೂ ವಳಚ್ಚಿಲ್ ಪ್ರದೇಶದ ನೂರಾರು ಕುಟುಂಬಗಳನ್ನು ದೋಣಿಯ ಮೂಲಕ ಸ್ಥಳಾಂತರಿಸಲಾಯಿತು.ರಕ್ಷಣಾ ಕಾರ್ಯಕ್ಕೆ ಕಂದಾಯ ಇಲಾಖೆಯ ಎರಡು, ಅಗ್ನಿ ಶಾಮಕ ಇಲಾಖೆಯ ಒಂದು, ಗೃಹರಕ್ಷಕ ದಳದ 2 ಬೋಟು, ಖಾಸಗಿ ಬೋಟು ಪಡೆಯಲಾಗಿದೆ. ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಯಾವುದೇ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮಾನಿಟರಿಂಗ್ ಸಮಿತಿಗಳನ್ನು ರಚಿಸಲಾಗಿದೆ.ಜನರು ಆತಂಕಕ್ಕೆ ಒಳಗಾಗಬಾರದು. ತುರ್ತು ಸಂದರ್ಭದಲ್ಲಿ ನೆರವಿಗಾಗಿ 1077 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಗತ್ಯ ಇರುವ ಕಡೆ ಗಂಜಿಕೇಂದ್ರ ತೆರೆಯಲಾಗಿದೆ' ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ್  ತಿಳಿಸಿದ್ದಾರೆ.ತುಂಬಿ ಹರಿಯುತ್ತಿದೆ ತುಂಬೆ ಅಣೆಕಟ್ಟೆ

ಬಂಟ್ವಾಳ: ತಾಲ್ಲೂಕಿನಲ್ಲಿ ಬುಧವಾರದಿಂದೀಚೆಗೆ 96.11ಮಿ.ಮೀ.ಮಳೆಯಾಗಿದ್ದು, ನೇತ್ರಾವತಿ ನದಿನೀರಿನ ಮಟ್ಟ ಗರಿಷ್ಟ (9 ಮೀಟರ್) ದಾಟಿ 10.2ಮೀ. ತಲುಪಿದೆ. 13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿ 32.5ಅಡಿ ಎತ್ತರಕ್ಕೆ ರಭಸದಿಂದ ನೆರೆನೀರು ಉಕ್ಕಿ ಹರಿಯುತ್ತಿದೆ.ಗುರುವಾರ ಸಂಜೆ ವೇಳೆಗೆ ನೆರೆನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ತಹಸೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿಪ್ರಜಾವಾಣಿಗೆ ತಿಳಿಸಿದ್ದಾರೆ.1997 ಮತ್ತು 2005ರಲ್ಲಿ ಇಂತಹ ನೆರೆನೀರು ಕಾಣಿಸಿಕೊಂಡಿದ್ದು, ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸರಕಾರಿ ಬಸ್ ಮತ್ತಿತರ ವಾಹನಗಳು ಬಂಟ್ವಾಳ ಮೂಡುಬಿದ್ರೆ ರಸ್ತೆ ಮೂಲಕ ಸಂಚರಿಸಿವೆ.ತಾಲ್ಲೂಕಿನ ಬಹುತೇಕ ಶಾಲಾ ಕಾಲೇಜಿಗೆ ಗುರುವಾರ ರಜೆ ಘೋಷಿಸಲಾಗಿದ್ದು, ಭಂಡಾರಿಬೆಟ್ಟು ಮತ್ತಿತರ ಕಡೆಗಳಲ್ಲಿ ವಿದ್ಯುತ್ ತಂತಿ ಮತ್ತು ಕಂಬಕ್ಕೆ ಮರಬಿದ್ದು ಮೆಸ್ಕಾಂ ಇಲಾಖೆಗೂ ಅಪಾರ ನಷ್ಟ ಸಂಭವಿಸಿದೆ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ  ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗಿದೆ.ಬಂಟ್ವಾಳ ಪೇಟೆಯ ಬಹುತೇಕ ಅಂಗಡಿಗಳಿಗೆ ನೀರು ನುಗ್ಗಿ, ಇಲ್ಲಿನ ಕೆಲವೊಂದು ದೇವಸ್ಥಾನ, ಮಸೀದಿ ಮತ್ತು ಶಾಲೆಗಳಿಗೂ ನೀರು ತುಂಬಿರುವುದು ಕಂಡು ಬಂದಿದೆ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ ಮತ್ತಿತರರು ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.