ಬುಧವಾರ, ನವೆಂಬರ್ 13, 2019
23 °C

ನೆರೆ-ಹೊರೆ ಸಾಹಿತ್ಯ ಕನ್ನಡಕ್ಕೆ: ಗುರುದತ್ತ

Published:
Updated:

ಬೆಂಗಳೂರು: `ನೆರೆ-ಹೊರೆಯ ಕೊಂಕಣಿ, ತುಳು ಭಾಷಾ ಸಾಹಿತ್ಯದಲ್ಲಿ ಉತ್ಕೃಷ್ಟ ಸಾಹಿತ್ಯ ಕೃತಿಗಳು ರಚನೆಯಾಗಿದ್ದು, ಕುವೆಂಪು ಭಾಷಾಭಾರತಿ ಪ್ರಾಧಿಕಾರ ಅವುಗಳನ್ನು ಕನ್ನಡಕ್ಕೆ ತರಲಿದೆ' ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪ್ರಧಾನ್ ಗುರುದತ್ತ ಅವರು ಪ್ರಕಟಿಸಿದರು.ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ ಮತ್ತು ಕರ್ನಾಟಕ ಲೇಖಕಿಯರ ಸಂಘ ಜತೆಯಾಗಿ ಭಾನುವಾರ ಏರ್ಪಡಿಸಿದ್ದ ಕನ್ನಡ ಅನುವಾದಿತ ಕೊಂಕಣಿ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ  ಮಾತನಾಡಿದರು. `ಜಗತ್ತಿನ ಬೇರೆ, ಬೇರೆ ದೇಶಗಳ ಕೃತಿಗಳನ್ನು ಕನ್ನಡಕ್ಕೆ ತರುವ ನಮಗೆ ಅಕ್ಕ- ಪಕ್ಕದ ಭಾಷೆಗಳೇ ಕಾಣುವುದಿಲ್ಲ' ಎಂದು ವಿಷಾದಿಸಿದ ಅವರು, `ಪ್ರತಿಯೊಂದು ಭಾಷೆಗೂ ತನ್ನದೇ ಆದ ಸಂಸ್ಕೃತಿ ಇದ್ದು, ಅಲ್ಲಿನ ಕೃತಿಗಳು ಕನ್ನಡಕ್ಕೆ ಬಂದರೆ, ಕನ್ನಡಿಗರಿಗೆ ಅದರ ಪರಿಚಯವಾಗಿ ಜ್ಞಾನದ ಹರವು ಹೆಚ್ಚಲಿದೆ' ಎಂದು ಅವರು ಪ್ರತಿಪಾದಿಸಿದರು.`ಕೊಂಕಣಿ ಸಮುದಾಯದಿಂದ ಬಂದ ಲೇಖಕರು ಕನ್ನಡಕ್ಕೆ ನೀಡಿದ ಕೊಡುಗೆ ಮಹತ್ತರವಾದುದು' ಎಂದು ಅವರು ಅಭಿಪ್ರಾಯಪಟ್ಟರು. ಗೋಕುಲದಾಸ ಪ್ರಭು ಅವರ `ಋತು ಸಂಕ್ರಮಣ ಮತ್ತು ಇತರ ಕತೆಗಳು' ಕೃತಿಯನ್ನು ಗೀತಾ ಶೆಣೈ ಸೊಗಸಾಗಿ ಅನುವಾದಿಸಿದ್ದು, ಸಮಕಾಲೀನ ಸಮಸ್ಯೆಗಳಿಗೆ ಸ್ಪಂದಿಸುವ ಇಲ್ಲಿನ ಕತೆಗಳು ಮನಸ್ಸನ್ನು ಹಿಂಡುತ್ತವೆ' ಎಂದರು.`ಆಧುನಿಕ ಕೊಂಕಣಿ ಕತೆಗಳು' ಕೃತಿ ಬಿಡುಗಡೆ ಮಾಡಿದ ಮತ್ತೊಬ್ಬ ಅತಿಥಿ ವಿವೇಕ ಶಾನಭಾಗ, `ಇನ್ನೊಂದು ಬಗೆಯ ಜೀವನ ಕ್ರಮವನ್ನು ಗ್ರಹಿಸಲು ಅನುವಾದಿತ ಕೃತಿಗಳು ಮಾಧ್ಯಮವಾಗಿವೆ. ಇಂತಹ ಕೃತಿಗಳಿಂದ ಆಯಾ ಭಾಷೆಯ ಅಂತರಂಗದ ಸಮಾಚಾರ ನಮ್ಮ ಸಂವೇದನೆಗೆ ನಿಲುಕಲಿದ್ದು, ಹೊಸ ಆಲೋಚನಾ ಕ್ರಮವೂ ಸೃಷ್ಟಿಯಾಗಲಿದೆ' ಎಂದರು.`ದೇಶ-ಕಾಲ ಪತ್ರಿಕೆಯ ಸಂಪಾದಕತ್ವದಿಂದ ಹಲವು ಭಾಷೆಗಳ ಸಂಪರ್ಕ ಸಾಧ್ಯವಾಗಿದ್ದು, ಹೊಸ ಹೊಳಹುಗಳು ಸಿಕ್ಕಿವೆ' ಎಂದು ವಿವರಿಸಿದರು. `ಕೊಂಕಣಿ ಒಂದು ಭಾಷೆ, ಹಲವು ಜಾತಿಗಳ ಗೂಡು. ಶ್ರೀಮಂತವಾದ ಅನುಭವಗಳು ಅಲ್ಲಿದ್ದು, ಅದರ ಪ್ರಯೋಜನ ಕನ್ನಡಿಗರಿಗೆ ಹೆಚ್ಚು, ಹೆಚ್ಚು ಸಿಗಬೇಕು' ಎಂದು ಆಶಿಸಿದರು.`ಋತು ಸಂಕ್ರಮಣ ಮತ್ತು ಇತರ ಕತೆಗಳು' ಲೇಖಕ ಗೋಕುಲದಾಸ ಪ್ರಭು, ತಾವು ಕತೆ ಬರೆಯಲು ಪ್ರೇರಣೆಯಾದ ಸಂಗತಿಗಳನ್ನು ನೆನಪು ಮಾಡಿಕೊಂಡರು. ಈ ಕತೆಗಳನ್ನು ಕನ್ನಡಕ್ಕೆ ತಂದ ಲೇಖಕಿ ಗೀತಾ ಶೆಣೈ, `ಮೂಲ ಕೃತಿಯಲ್ಲಿ ಇರುವ ಕೊಂಕಣಿ ಅಸ್ಮಿತೆಯನ್ನು ಯಥಾವತ್ತಾಗಿ ಕನ್ನಡಕ್ಕೆ ತರುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ' ಎಂದು ಹೇಳಿದರು. `ಹೊಟ್ಟೆಪಾಡಿಗಾಗಿ ನಾವು ಎಲ್ಲಿಯೇ ನೆಲೆಸಿದ್ದರೂ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಗೆ ಸಾಧ್ಯವಾದ ಸೇವೆ ಸಲ್ಲಿಸಬೇಕು' ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ದಯಾನಂದ ಪೈ, `ಭಾಷೆ ಪ್ರಗತಿಯಾದರೆ ಮಾತ್ರ ಜನಾಂಗ ಅಭಿವೃದ್ಧಿಯಾಗಲು ಸಾಧ್ಯ. ಬೇರೆ ಭಾಷೆ ದೂಷಿಸದೆ ನಮ್ಮ ಭಾಷೆ ಬೆಳೆಸುವಂತಹ ಕೆಲಸ ಆಗಬೇಕು' ಎಂದು ಹೇಳಿದರು. `ಕೊಂಕಣಿ ಕೃತಿಗಳನ್ನು ಅನುವಾದಿಸಲು ಲೇಖಕರು ಮುಂದೆ ಬಂದರೆ ಅಗತ್ಯ ಧನಸಹಾಯ ನೀಡುತ್ತೇನೆ' ಎಂದು ಘೋಷಿಸಿದರು. ಬಿಡುಗಡೆಯಾದ ಎರಡೂ ಕೃತಿಗಳ ತಲಾ 50 ಪ್ರತಿ ಅವರು ಕೊಂಡುಕೊಂಡರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ಕಾರ್ಯದರ್ಶಿ ಕೆ.ಸುಧಾಕರ ಶೆಟ್ಟಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ವೇದಿಕೆ ಮೇಲೆ ಹಾಜರಿದ್ದರು.

ಪ್ರತಿಕ್ರಿಯಿಸಿ (+)