ನೆಲಕಚ್ಚಿದ ಟೊಮೆಟೊ ದರ: ರೈತರಲ್ಲಿ ಆತಂಕ

7

ನೆಲಕಚ್ಚಿದ ಟೊಮೆಟೊ ದರ: ರೈತರಲ್ಲಿ ಆತಂಕ

Published:
Updated:
ನೆಲಕಚ್ಚಿದ ಟೊಮೆಟೊ ದರ: ರೈತರಲ್ಲಿ ಆತಂಕ

ಹರಪನಹಳ್ಳಿ: ನೆತ್ತಿ ಸುಡುವ ಬಿರು ಬಿಸಿಲು ಮತ್ತು ಬದುಕನ್ನೇ ಅತಂತ್ರಗೊಳಿಸಿರುವ ಬರದಿಂದಾಗಿ ಬಯಲುಸೀಮೆಯ ಟೊಮೆಟೊ ಬೆಳೆಗಾರರು ಮತ್ತೊಂದು ಸಂಕಷ್ಟದ ಉರುಳಿಗೆ ಸಿಲುಕಿಕೊಂಡಿದ್ದಾರೆ.ಪಾತಾಳಕ್ಕೆ ಕುಸಿದಿರುವ ಬೆಲೆಯಿಂದಾಗಿ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರೀ ಪ್ರಮಾಣದ ಆರ್ಥಿಕ ನಷ್ಟಕ್ಕೆ ತುತ್ತಾಗುವ ಭೀತಿ ರೈತರ ಮೇಲೆ ಆವರಿಸಿಕೊಂಡಿದೆ.ತಾಲ್ಲೂಕಿನ ಕಸಬಾ ಹೋಬಳಿಯ ಬಹುತೇಕ ರೈತರು ಟೊಮೆಟೊ ಬೆಳೆಯನ್ನೇ ಅವಲಂಬಿಸಿದ್ದಾರೆ. ಹರಪನಹಳ್ಳಿ ಪಟ್ಟಣ ಸೇರಿದಂತೆ ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮಳೆಯಾಶ್ರಿತ ಭೂಪ್ರದೇಶದಲ್ಲಿ ಟೊಮೆಟೊ ಪ್ರಮುಖ ವಾಣಿಜ್ಯ ಬೆಳೆ. ಕೆಲ ರೈತರು 10-15ಎಕರೆ ಭೂ ಪ್ರದೇಶದಲ್ಲಿ ಟೊಮೆಟೊ ನಾಟಿ ಮಾಡಿದ್ದರೆ, ಇನ್ನೂ ಕೆಲ ರೈತರು ಕನಿಷ್ಠ ಮೂರ‌್ನಾಲ್ಕು ಎಕರೆಯಷ್ಟಾದರೂ ಟೊಮೆಟೊ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.ಸುಮಾರು 3ಸಾವಿರ ಎಕರೆ ವಿಸ್ತೀರ್ಣದಷ್ಟು ಟೊಮೆಟೊ ಬೆಳೆ ವ್ಯಾಪ್ತಿಸಿಕೊಂಡಿದೆ.

ಮಹಾರಾಷ್ಟ್ರದ ಸೊಲ್ಲಾಪುರ, ವಿಜಾಪುರ, ಮುದ್ದೆಬಿಹಾಳ್, ಕುಷ್ಟಗಿ, ಸಿಂಧನೂರು, ಇಳಕಲ್ಲು, ಗಂಗಾವತಿ, ಹೊಸಪೇಟೆ ಸೇರಿದಂತೆ ಆಂಧ್ರಪ್ರದೇಶದವರೆಗೂ ಇಲ್ಲಿಂದ ನಿತ್ಯವೂ ಸಹಸ್ರಾರು ಟೊಮೆಟೊ ತುಂಬಿದ ಬುಟ್ಟಿಗಳು ಸಾಗಾಣಿಕೆಯಾಗುತ್ತಿದೆ.ತುಂತುರು ಮಳೆಗೂ ಟೊಮೆಟೊ ಕೈಹಿಡಿಯುವ ಬೆಳೆ ಎಂದು ಭಾವಿಸಿದ ಬಹುತೇಕ ರೈತರು, ಕೃಷಿ ಕ್ಷೇತ್ರ ವಿಸ್ತರಿಸಿದರು. ಮುಂಗಾರಿನಲ್ಲಿ ಸುರಿದ ತುಂತುರು ಮಳೆ ಟೊಮೆಟೊ ಕೃಷಿಗೆ ಹೇಳಿ ಮಾಡಿಸಿದಂತಾಯಿತು. ಫಸಲು ಬೆಳೆಗಾರನ ನಿರೀಕ್ಷೆಗೂ ಮೀರಿ ಇಳುವರಿ ಕೊಟ್ಟಿತು. ಟೊಮೆಟೊ ಕಟಾವ್ ಮಾಡಿಕೊಂಡು, ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಬೆಲೆ ಕುಸಿತ ಕಾಣಿಸಿಕೊಂಡಿತು. ಈ ಹಿಂದೆ ಪ್ರತಿ ಬುಟ್ಟಿಗೆ (18-20ಕೆ.ಜಿ.) ರೂ  250ರಿಂದ ರೂ400-500ರ ತನಕ ಮಾರಾಟವಾಗುತ್ತಿದ್ದ ಬೆಲೆ, ಈಗ ಬುಟ್ಟಿಗೆ ಕೇವಲ ರೂ10ರಿಂದ ರೂ20 ರಷ್ಟು ಮಾರಾಟವಾಗುತ್ತಿದೆ!.ಮಳೆಯ ಕಣ್ಣಾಮುಚ್ಚಾಲೆಯ ನಡುವೆಯೂ ಫಸಲು ಸಮೃದ್ಧವಾಗಿ ಬೆಳೆದು, ಬೆಳೆಗಾರನ ಕೈಹಿಡಿದಿದೆ. ಆದರೆ, ಬೆಲೆ ಕುಸಿತದಿಂದ ಹಾಕಿದ ಬಂಡವಾಳ ಕೈಗೆ ಸಿಗದಂತ ಸ್ಥಿತಿ ನಿರ್ಮಾಣವಾಗಿದೆ. ಈ ಬೆಲೆಗೆ ಹಣ್ಣು ಮಾರಾಟ ಮಾಡಿದರೆ, ಬಿಡಿಸಿದ ಕೂಲಿಗೂ ಸಾಲುತ್ತಿಲ್ಲ. ಹಾಗೇ ಗಿಡದಲ್ಲಿ ಬಿಟ್ಟರೇ ಹಣ್ಣು ಕೊಳೆತು ಸೋರಲು ಆರಂಭಿಸುತ್ತದೆ.ಇದರಿಂದ ಮಣ್ಣಿಗೆ ಉಳಿ ಅಡರಿ, ಫಲವತ್ತತೆ ಕುಸಿಯುತ್ತದೆ. ಹೀಗಾಗಿ ಕೈಗೆ ಸಿಕ್ಕಷ್ಟೇ ಸಿಗಲಿ ಎಂದು ರೈತರು ಹಣ್ಣು ಬಿಡಿಸುತ್ತಾರೆ. ಕೊನೆಗೆ ಕೂಲಿಗಾದರೂ ಆಗಲಿ ಎಂದು ಅನಿವಾರ್ಯವಾಗಿ ಮಾರಾಟ ಮಾಡುತ್ತಾರೆ ಎಂದು ಸಂಕಟ ತೋಡಿಕೊಳ್ಳುತ್ತಾರೆ ಎರಡೂವರೆ ದಶಕದಿಂದ ಟೊಮೆಟೊ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪಟ್ಟಣದ ಕರೀಂಸಾಹೇಬ್ ಹಾಗೂ ಉಪ್ಪಾರಗೇರಿಯ ಮೂರುಮುದ್ದಿ ನಾಗರಾಜ.ದುಬಾರಿ ಸಸಿಗಳು, ರಸಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಅಗತ್ಯ ವಸ್ತುಗಳ ದುಪ್ಪಟ್ಟು ನಿರ್ವಹಣೆಯಲ್ಲಿಯೂ ಟೊಮೆಟೊ ಈ ಭಾಗದ ರೈತರ ನೆಚ್ಚಿನ ಕೃಷಿಯಾಗಿದೆ. ಆದರೆ, ಬೆಲೆ ಕುಸಿತ ಬೆಳೆಗಾರನನ್ನು ಹಿಂಡಿ-ಹಿಪ್ಪೆಮಾಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry