ಗುರುವಾರ , ಮಾರ್ಚ್ 4, 2021
19 °C
ನೀರಿನ ಸೋರಿಕೆ ತಡೆಗೆ ಜಲಮಂಡಳಿ ತಂತ್ರ* ಹಳೆಯ ಸಂಗ್ರಹಾಗಾರಗಳ ಮೇಲೆ ದೃಷ್ಟಿ

ನೆಲಮಟ್ಟದ ಜಲಾಗಾರಗಳ ಪುನರುಜ್ಜೀವನ

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ನೆಲಮಟ್ಟದ ಜಲಾಗಾರಗಳ ಪುನರುಜ್ಜೀವನ

ಬೆಂಗಳೂರು: ಕಾವೇರಿ ನೀರಿನ ಸೋರಿಕೆ ತಡೆಯಲು  ನೆಲಮಟ್ಟದ ಜಲಾಗಾರಗಳ  (ಜಿಎಲ್‌ಆರ್‌) ಪುನರುಜ್ಜೀವನ ಮಾಡಲು ಜಲಮಂಡಳಿ ನಿರ್ಧರಿಸಿದೆ.ನಗರಕ್ಕೆ ಪ್ರತಿನಿತ್ಯ 140 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲಿ ಶೇ 46ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಸೋರಿಕೆ ತಡೆಗೆ ಹಲವು ಉಪಕ್ರಮಗಳನ್ನು ಕೈಗೊಂಡ ಬಳಿಕವೂ   ಹೆಚ್ಚಿನ ಪ್ರಯೋಜನೆ ಆಗಿಲ್ಲ.ಜಲಾಗಾರಗಳಲ್ಲಿ ಶೇ 4ರಷ್ಟು (ದಿನಕ್ಕೆ 6 ಕೋಟಿ ಲೀಟರ್‌) ನೀರು ಸೋರಿಕೆಯಾಗುತ್ತಿದೆ ಎಂದು ಪ್ರಾಥಮಿಕ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಈ ಕಾರಣದಿಂದ ಜಲಾಗಾರಗಳ ದುರಸ್ತಿ ಮಾಡಲು ತೀರ್ಮಾನಿಸಿದೆ.ಜಲಮಂಡಳಿ ಒಟ್ಟು 81 ಜಲಾಗಾರಗಳನ್ನು ಹೊಂದಿದೆ. ಈ ಪೈಕಿ ಟಿ.ಕೆ.ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ 15 ನೆಲಮಟ್ಟದ ಸಂಗ್ರಹಾಗಾರಗಳು ಇವೆ. ಕಾವೇರಿ ನೀರು ಶುದ್ಧೀಕರಣಗೊಂಡು ನಗರಕ್ಕೆ ಪೂರೈಕೆಯಾಗುವುದು ಇಲ್ಲಿಂದಲೇ.ತಿಪ್ಪಗೊಂಡನಹಳ್ಳಿ ಜಲಾಶಯದ ವ್ಯಾಪ್ತಿಯಲ್ಲಿ 5 ಸಂಗ್ರಹಾಗಾರಗಳು ಇದ್ದು,  ಈ ಜಲಾಶಯದಿಂದ ನಗರಕ್ಕೆ ನೀರು ಪೂರೈಕೆ ಸ್ಥಗಿತಗೊಂಡು ಕೆಲವು ವರ್ಷಗಳೇ ಕಳೆದಿವೆ. ಹೀಗಾಗಿ ಇಲ್ಲಿನ ಜಲಾಗಾರಗಳು ಕೆಲಸ ನಿಲ್ಲಿಸಿವೆ. ನಗರದ ವಿವಿಧ ಭಾಗಗಳಲ್ಲಿರುವ 61 ಜಿಎಲ್‌ಆರ್‌ಗಳ ಮೂಲಕ ಕಾವೇರಿ ನೀರು ಪೂರೈಸಲಾಗುತ್ತಿದೆ. ಸುಮಾರು 10 ಜಲಾಗಾರಗಳು ಸ್ವಾತಂತ್ರ್ಯಪೂರ್ವದಲ್ಲೇ ನಿರ್ಮಾಣವಾಗಿವೆ.ಕಾವೇರಿ ಮೊದಲನೇ ಹಂತದ ಯೋಜನೆ ಆರಂಭವಾಗಿ 50 ವರ್ಷಗಳು, ಎರಡನೇ ಹಂತದ ಯೋಜನೆ ಆರಂಭವಾಗಿ 40 ವರ್ಷಗಳು ಕಳೆದಿವೆ.   40 ವರ್ಷ ದಾಟಿದ ಜಿಎಲ್‌ಆರ್‌ಗಳು 30 ಇವೆ. ಇವುಗಳಲ್ಲಿ ಸೋರಿಕೆ ಪ್ರಮಾಣ ಹೆಚ್ಚು.ಕಾವೇರಿ ನಾಲ್ಕನೇ ಹಂತ, ನಾಲ್ಕನೇ ಹಂತ ಎರಡನೇ ಘಟ್ಟದ ಯೋಜನೆ ವೇಳೆ ನಿರ್ಮಾಣವಾದ ಜಿಎಲ್‌ಆರ್‌ಗಳಲ್ಲಿ ಸೋರಿಕೆ ಕಂಡುಬಂದಿಲ್ಲ. ಹೀಗಾಗಿ ಹಳೆಯ ನೀರಿನ ಸಂಗ್ರಹಾಗಾರಗಳ ಕಡೆಗೆ ಜಲಮಂಡಳಿ ದೃಷ್ಟಿ ನೆಟ್ಟಿದೆ. ಈಗಾಗಲೇ ಪ್ರಾಯೋಗಿಕವಾಗಿ ಹಳೆಯ ಜಿಎಲ್‌ಆರ್‌ಗಳ ತಪಾಸಣೆ ಕೈಗೆತ್ತಿಕೊಂಡಿದೆ. ಎಂ.ಎನ್‌. ಕೃಷ್ಣ ರಾವ್‌ ಉದ್ಯಾನದ ಸಂಗ್ರಹಾಗಾರದಲ್ಲಿ ಶೇ 22, ಮಲ್ಲೇಶ್ವರದಲ್ಲಿ ಶೇ 14, ಕೇತಮಾರನಹಳ್ಳಿಯಲ್ಲಿ ಶೇ 2, ಹೈಗ್ರೌಂಡ್ಸ್‌ನಲ್ಲಿ ಶೇ 23ರಷ್ಟು ನೀರು ಸೋರಿಕೆಯಾಗುತ್ತಿರುವುದು ಬೆಳಕಿಗೆ ಬಂದಿದೆ.‘ಜಲ ಸಂಗ್ರಹಾಗಾರಗಳ ಒಳ ಹರಿವು ಹಾಗೂ ಹೊರಹರಿವಿನ ಆಧಾರದಲ್ಲಿ ತಪಾಸಣೆ ಮಾಡಲಾಗುತ್ತಿದೆ. ಆರಂಭದಲ್ಲಿ  ಕಾರ್ಯನಿರ್ವಾಹಕ ಎಂಜಿನಿಯರ್‌ಗಳು  ತಪಾಸಣೆ ನಡೆಸಲಿದ್ದಾರೆ.ಬಳಿಕ ತಜ್ಞರ ನೆರವು ಪಡೆಯಲಾಗುತ್ತದೆ. ಅವರ ಸಲಹೆಯಂತೆ ಅತ್ಯುತ್ತಮ ಮಾದರಿ ಅಳವಡಿಸಿಕೊಂಡು ಅವುಗಳ ಪುನರುಜ್ಜೀವನ ಮಾಡಲಾಗುತ್ತದೆ’ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.‘10–15 ವರ್ಷಗಳ ಹಿಂದೆ ನಿರ್ಮಾಣವಾದ ಜಿಎಲ್‌ಆರ್‌ಗಳ ಸ್ಥಿತಿ ಚೆನ್ನಾಗಿದೆ. ಹಳೆಯವುಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಿದೆ. ಇದಕ್ಕೆ ಅಂದಾಜು ₹20 ಕೋಟಿ ಬೇಕಾಗುತ್ತದೆ. ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದಿಂದ (ಕೆಯುಐಡಿಎಫ್‌ಸಿ) ಸಾಲ ಪಡೆಯಲು ಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.ಅಂಕಿ ಅಂಶಗಳು

140 ಕೋಟಿ ಲೀಟರ್‌

-ನಗರಕ್ಕೆ ನಿತ್ಯ ಪೂರೈಕೆಯಾಗುವ ಕಾವೇರಿ ನೀರು46%

-ಲೆಕ್ಕಕ್ಕೆ ಸಿಗದ ಕಾವೇರಿ ನೀರು

81

-ಜಲಮಂಡಳಿಯ ಜಲಾಗಾರಗಳು6

-ಜಲಾಗಾರಗಳಲ್ಲಿ ಸೋರಿಕೆ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.