ನೆಲಸಮಗೊಳಿಸುವುದೇ ಸೂಕ್ತ

7

ನೆಲಸಮಗೊಳಿಸುವುದೇ ಸೂಕ್ತ

Published:
Updated:

ಮಹಾರಾಷ್ಟ್ರ ಮುಖ್ಯಮಂತ್ರಿ ತಲೆದಂಡಕ್ಕೆ ಕಾರಣವಾದ ವಿವಾದಿತ ಆದರ್ಶ ವಸತಿ ಸೊಸೈಟಿಯ 31 ಅಂತಸ್ತುಗಳ ಕಟ್ಟಡವನ್ನು ‘ಅಕ್ರಮ’ ಎಂದು ಘೋಷಿಸಿರುವ ಕೇಂದ್ರ ಪರಿಸರ ಸಚಿವಾಲಯ ಅದನ್ನು ಮೂರು ತಿಂಗಳ ಒಳಗೆ ನೆಲಸಮ ಮಾಡುವುದಕ್ಕೆ ನೀಡಿರುವ ಆದೇಶ ಸಮಯೋಚಿತವಾಗಿದೆ.ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ವಸತಿ ಸಂಕೀರ್ಣವನ್ನು ವ್ಯರ್ಥವಾಗಿ ನೆಲಸಮಗೊಳಿಸುವುದರ ಔಚಿತ್ಯ ಚರ್ಚೆಗೆ ಆಸ್ಪದ ನೀಡಿದೆಯಾದರೂ ಇಂಥ ಒಂದು ಕಠಿಣ ಕ್ರಮ, ಸ್ವಾರ್ಥಕ್ಕಾಗಿ ದೇಶದ ಕಾನೂನುಗಳನ್ನು ಉಲ್ಲಂಘಿಸುತ್ತಿರುವ ಅಧಿಕಾರಸ್ಥರಿಗೆ ಪಾಠ ಕಲಿಸುವುದಕ್ಕೆ ಅವಶ್ಯಕವೇ ಆಗಿದೆ.ರಾಜಕಾರಣಿಗಳು, ಸೇನೆಯ ಕೆಲವು ವರಿಷ್ಠರು ಮತ್ತು ಅಧಿಕಾರಿಗಳು ಒಟ್ಟಾಗಿ ನಡೆಸಿದ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ಕಾನೂನು ಉಲ್ಲಂಘನೆಗಳ ಪ್ರತೀಕದಂತಿರುವ  ಈ ವಸತಿ ಸಮುಚ್ಚಯ ಕಾರ್ಗಿಲ್ ಹುತಾತ್ಮರ ಅವಲಂಬಿತರಿಗಾಗಿ ರೂಪುಗೊಂಡಿದ್ದು. ಆದರೆ ಯೋಧರ ಬಲಿದಾನವನ್ನು ಮುಂದೆ ಮಾಡಿಕೊಂಡು ಸ್ವಂತ ಆಸ್ತಿ ಮಾಡಿಕೊಳ್ಳಲು ಹೊರಟವರು ಈ ಭ್ರಷ್ಟರು. ಅಧಿಕಾರವಿರುವುದು ತಮಗೆ ಬೇಕಾದಂತೆ ಕಾನೂನುಗಳನ್ನು ತಿರುಚುವುದಕ್ಕೆ ಕೊಟ್ಟ ಪರವಾನಗಿ ಎಂದು ತಿಳಿದು ಅಕ್ರಮ ಎಸಗಿದ ಈ ಹಗರಣದ ಆರೋಪಿಗಳ ನಡವಳಿಕೆ ಕ್ಷಮೆಗೆ ಅರ್ಹವಲ್ಲ. ಅಕ್ಷಮ್ಯ ಅಪರಾಧ ಎಸಗಿರುವ ಈ ಹಗರಣದ ರೂವಾರಿಗಳು ಕಾನೂನು ಕ್ರಮಕ್ಕೆ ಒಳಪಡಲೇಬೇಕು.ಮನೆಗಳ ಹಂಚಿಕೆಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಸರ್ಕಾರದ ಉನ್ನತ ವ್ಯಕ್ತಿಗಳಲ್ಲದೆ, ಸೇನಾಧಿಕಾರಿಗಳು ಮತ್ತು ನಾಗರಿಕ ಅಧಿಕಾರಿಗಳು ಭಾಗಿಯಾಗಿರುವ ಈ ಪ್ರಕರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು  ಕೇಂದ್ರ ಸರ್ಕಾರದ ಕೆಲವು ಇಲಾಖೆಗಳೂ ಕರ್ತವ್ಯಬದ್ಧತೆಯನ್ನು ಪ್ರದರ್ಶಿಸಿಲ್ಲ.ಮೂಲನಕ್ಷೆಯಲ್ಲಿ ಆರು ಅಂತಸ್ತುಗಳಿಗೆ ಉದ್ದೇಶಿಸಿದ ಕಟ್ಟಡವನ್ನು ಪರವಾನಗಿಯನ್ನು ಪಡೆಯದೆ 31 ಅಂತಸ್ತುಗಳಿಗೆ ಹೆಚ್ಚಿಸಿದ್ದನ್ನು ರಾಜ್ಯದ ಹಾಗೂ ಕೇಂದ್ರದ ಯಾವ ಇಲಾಖೆಗಳೂ ಪ್ರಶ್ನಿಸಿಲ್ಲ. ಕರಾವಳಿ ನಿಯಂತ್ರಣ ವಲಯದ ವ್ಯಾಪ್ತಿಯಲ್ಲಿ 31 ಅಂತಸ್ತುಗಳ ವಸತಿ ಸಮುಚ್ಚಯ ರಾತ್ರೋರಾತ್ರಿ ಉದ್ಭವಿಸುವಂಥದ್ದಲ್ಲ.ಕೇಂದ್ರ ಪರಿಸರ ಇಲಾಖೆಯ ಗಮನಕ್ಕೆ ಬಾರದೆ ಮುಂಬೈ ಕಡಲ ತೀರದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಸಾಧ್ಯವೂ ಅಲ್ಲ. ಈ ಹೊಣೆಯಿಂದ ಕೇಂದ್ರ ಪರಿಸರ ಇಲಾಖೆಯೂ ತಪ್ಪಿಸಿಕೊಳ್ಳುವಂತಿಲ್ಲ. ಹಾಗೆ ನೋಡಿದರೆ ವಸತಿ ಸಮುಚ್ಚಯದ ಮನೆಗಳ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತದ ಆರೋಪಗಳು  ಬಯಲಿಗೆ ಬರದಿದ್ದರೆ ಇಡೀ ಹಗರಣವೇ ಮುಚ್ಚಿ ಹೋಗುತ್ತಿತ್ತೇನೋ.ಹುತಾತ್ಮ ಸೈನಿಕರಿಗಾಗಿ ರೂಪಿಸಿದ ವಸತಿ ಯೋಜನೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಫಲಾನುಭವಿಗಳಾಗಿದ್ದುದು ವಿವಾದಕ್ಕೆ ಕಾರಣವಾಯಿತು. ಹಗರಣ ಬಯಲಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದು ಯೋಗ್ಯ ನಿರ್ಧಾರ. ಆದರೆ ಇತರ ಆರೋಪಿಗಳು ತಪ್ಪಿಸಿಕೊಳ್ಳಲು ಆಸ್ಪದ ನೀಡಬಾರದು. ಅಕ್ರಮ ಕಟ್ಟಡ ನೆಲಸಮವಾದರೂ ಅದಕ್ಕೆ ಮೂಲ ಕಾರಣರಾದ ವ್ಯಕ್ತಿಗಳು ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲಾಗದು. ಹಾಗೆ ಮಾಡಿದರೆ ಮಾತ್ರ ಇಂಥ ಹಗರಣಗಳು ಮರುಕಳಿಸುವುದು ತಪ್ಪಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry