ಸೋಮವಾರ, ಮೇ 23, 2022
21 °C
ಹೊಳಲ್ಕೆರೆ: ಕಾಮಗಾರಿ ಮುಗಿದರೂ ಹಂಚಿಕೆಯಾಗದ ವಾಣಿಜ್ಯ ಮಳಿಗೆಗಳು

ನೆಲೆ ಕಾಣದ ಗೂಡಂಗಡಿ ವ್ಯಾಪಾರಿಗಳ ಬದುಕು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳಲ್ಕೆರೆ: ಪಟ್ಟಣದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳು ಹಂಚಿಕೆಯಾಗದೆ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.ಕಳೆದ 8 ತಿಂಗಳ ಹಿಂದೆ ಬಸ್‌ನಿಲ್ದಾಣದ ಮುಂಭಾಗದಲ್ಲಿದ್ದ ಗೂಡಂಗಡಿಗಳನ್ನು ತೆರವು ಗೊಳಿಸಲಾಗಿತ್ತು. ತರಕಾರಿ, ಹಣ್ಣು, ಹೂವು, ಬೀಡಾ, ಹೋಟೆಲ್‌ಗಳು ಇಲ್ಲಿದ್ದವು. ಇದ್ದಕ್ಕಿದ್ದಂತೆ ಜೆಸಿಬಿಯಿಂದ ಅಂಗಡಿಗಳನ್ನು ನೆಲಸಮಗೊಳಿಸಿದಾಗ ಬೀದಿಪಾಲಾದ ವ್ಯಾಪಾರಿಗಳು ಎಲ್ಲೆಂದರಲ್ಲಿ ಅಂಗಡಿ ಹಾಕಿಕೊಂಡರು. ಆಗ ಶಾಸಕರಾಗಿದ್ದ ಎಂ. ಚಂದ್ರಪ್ಪ ಮೂರು ತಿಂಗಳಲ್ಲಿ ಇದೇ ಜಾಗದಲ್ಲಿ ಹೊಸ ಮಳಿಗೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ, ಮಳಿಗೆಯನ್ನೂ ನಿರ್ಮಿಸಿದರು. ಅಷ್ಟರಲ್ಲಿ ಚುನಾವಣೆ ಬಂದು, ಮಳಿಗೆ ಹಂಚಿಕೆ ಅಲ್ಲಿಗೇ ನಿಂತಿತು. ಈ ಜಾಗದಲ್ಲಿ ಸುಮಾರು 26 ಮಳಿಗೆಗಳನ್ನು ನಿರ್ಮಿಸಿದ್ದು, ಕಾಮಗಾರಿ ಮುಗಿದು ಹಂಚಿಕೆಗೆ ಸಿದ್ಧವಾಗಿವೆ. ಆದರೆ ಪಟ್ಟಣ ಪಂಚಾಯ್ತಿ ಮಾತ್ರ ಮಳಿಗೆ ವಿತರಣೆಗೆ ಮುಂದಾಗುತ್ತಿಲ್ಲ.ಬಳಕೆಯಾಗದ ಮಹಾತ್ಮಾಗಾಂಧಿ ಕಾಪ್ಲೆಕ್ಸ್: ಸುಮಾರು ರೂ2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಹಾತ್ಮಾ ಗಾಂಧಿ ವಾಣಿಜ್ಯ ಸಂಕಿರ್ಣದ ಕಟ್ಟಡ ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಕಳೆದಿದ್ದರೂ, ಸಾರ್ವಜನಿಕರಿಗೆ ಮುಕ್ತವಾಗಿಲ್ಲ. ಇದರಲ್ಲಿ ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಸುಮಾರು 36 ಮಳಿಗೆಗಳಿದ್ದು, ಎರಡನೇ ಅಂತಸ್ತಿನಲ್ಲಿ ಹೋಟೆಲ್ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಕಟ್ಟಡ ಉದ್ಘಾಟನೆಯಾಗಿ ನಾಲ್ಕೈದು ತಿಂಗಳು ಕಳೆದಿದ್ದರೂ ಮಳಿಗೆ ಹಂಚಿಕೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.ಈ ಕಟ್ಟಡದ ಹಿಂಭಾಗದಲ್ಲಿ 2008ರಲ್ಲಿ ನಿರ್ಮಿಸಿರುವ 15 ಮಳಿಗೆಗಳು ಬಳಕೆಯಾಗದೆ ವ್ಯರ್ಥವಾಗಿವೆ. ಎಲ್ಲಾ ಸೇರಿ ಸುಮಾರು 80 ಮಳಿಗೆಗಳು ಸಿದ್ಧವಾಗಿದ್ದರೂ ವಿತರಿಸಲು ವಿಳಂಬ ಮಾಡಲಾಗುತ್ತಿದೆ. ಎಲ್ಲಾ ಮಳಿಗೆಗಳನ್ನು ಹಂಚಿದರೆ ಪಟ್ಟಣದಲ್ಲಿ ಯಾರೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವ ಅಗತ್ಯ ಇರುವುದಿಲ್ಲ ಎನ್ನುತ್ತಾರೆ ವ್ಯಾಪಾರಿಗಳಾದ ನಾಗರಾಜು, ಸಯದ್ ಬಷೀರ್, ರಾಜು, ಚಂದ್ರು, ಸಯದ್ ಯಾಜಾನ್, ಸನಾವುಲ್ಲಾ, ಮಹಾಂತೇಶ ಮತ್ತಿತರರು.ಗೂಡಂಗಡಿ ತೆರವುಗೊಳಿಸುವಾಗ ಇಲ್ಲಿ ಇದ್ದ ವ್ಯಾಪಾರಿಗಳಿಗೇ ಮಳಿಗೆ ನೀಡುವುದಾಗಿ ಹೇಳಿದ್ದರು. ಗುರುತಿಗಾಗಿ ವ್ಯಾಪಾರಿಗಳ ಭಾವಚಿತ್ರಗಳನ್ನೂ ತೆಗೆದು ಕೊಂಡಿದ್ದರು. ಆದರೆ ಈಗ ಸರ್ಕಾರ, ಶಾಸಕರು ಬದಲಾಗಿದ್ದು, ಮಳಿಗೆಗಳನ್ನು ಹಿಂದಿನ ವ್ಯಾಪಾರಿಗಳಿಗೆ ಕೊಡುವರೋ, ಹೊಸದಾಗಿ ಹರಾಜು ಹಾಕುವರೋ ಗೊತ್ತಿಲ್ಲ. ಅಲ್ಲದೆ ಪಟ್ಟಣ ಪಂಚಾಯ್ತಿಗೆ ಹೊಸ ಸದಸ್ಯರು ಬಂದಿದ್ದು, ಅಧ್ಯಕ್ಷರ ಆಯ್ಕೆ ಆಗುವವರೆಗೆ ಮಳಿಗೆ ವಿತರಣೆ ನಡೆಯಲಾರದು ಎಂಬ ಆತಂಕ ವ್ಯಾಪಾರಿಗಳದ್ದು.ಸ್ಪಷ್ಟನೆಗಳು

ನಮಗೆ ಇನ್ನೂ ಗುತ್ತಿಗೆದಾರರು ಮಳಿಗೆಗಳನ್ನು ಹಸ್ತಾಂತರಿಸಿಲ್ಲ. ಮಹಾತ್ಮಾ ಗಾಂಧಿ ವಾಣಿಜ್ಯ ಸಂಕೀರ್ಣವೂ ನಮ್ಮ ಸುಪರ್ದಿಗೆ ಬಂದಿಲ್ಲ. ಈಗಾಗಲೇ ಮಳಿಗೆ ಹಸ್ತಾಂತರಿಸುವಂತೆ ಕೇಳಲಾಗಿದೆ. ಮಳಿಗೆಗಳು ನಮ್ಮ ವಶಕ್ಕೆ ಬಂದ ನಂತರ ಹಂಚಿಕೆ ಮಾಡಲಾಗುವುದು.

-ಉನ್ನಿಕುಮಾರ್, ಪ.ಪಂ. ಮುಖ್ಯಾಧಿಕಾರಿ.ಮಹಾತ್ಮಾಗಾಂಧಿ ವಾಣಿಜ್ಯ ಸಂಕೀರ್ಣದಲ್ಲಿ 36 ಮಳಿಗೆಗಳು ಬಳಕೆಗೆ ಸಿದ್ಧ ವಾಗಿವೆ. 2ನೇ ಮಹಡಿಯಲ್ಲಿ ಹೋಟೆಲ್‌ಗಾಗಿ ವಿನ್ಯಾಸ ಮಾಡಲಾಗುತ್ತಿತ್ತು. ಆದರೆ ಹಣ ಬಾರದ ಕಾರಣ ಕೆಲಸ ಸ್ಥಗಿತಗೊಳಿಸಲಾಗಿದೆ. ಕಟ್ಟಡದಲ್ಲಿ ಒಂದಿಷ್ಟು ಚಿಕ್ಕಪುಟ್ಟ ಕೆಲಸಗಳಿದ್ದು, ಅವು ಮುಗಿದ ತಕ್ಷಣವೇ ಪ.ಪಂ.ಗೆ ಕಟ್ಟಡ ಹಸ್ತಾಂತರಿಸಲಾಗುವುದು.

-ಶ್ರೀಧರ್, ಪಿಡಬ್ಲ್ಯೂಡಿ ಎಂಜಿನಿಯರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.