ಸೋಮವಾರ, ಮೇ 17, 2021
21 °C

ನೆಲೆ ಕಾಣದ ಮಠದ ಹಸು-ಕರುಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಟ್ಟೂರು: ಇಲ್ಲಿನ ಆರಾಧ್ಯ ದೈವ ಕೊಟ್ಟೂರೇಶ್ವರ ಸ್ವಾಮಿಗೆ ಭಕ್ತರು ತಮ್ಮ ಇಷ್ಟಾರ್ಥ ನೆರವೇರಿದ ನಂತರ ಭಕ್ತಿ ಪೂರ್ವಕವಾಗಿ ಹಸು ಮತ್ತು ಕರುಗಳನ್ನು ದೇವಸ್ಥಾನಕ್ಕೆ ಅರ್ಪಿಸುವುದು ವಾಡಿಕೆ. ಹಾಗೆ ಭಕ್ತರು ನೀಡಿದ ದೇಣಿಗೆಯ ಮಠದ ಹಸುಗಳ ರಕ್ಷಣೆ, ಪಾಲನೆ, ಪೋಷಣೆಗೆ ಪ್ರತ್ಯೇಕ ವ್ಯವಸ್ಥೆ ಇದೆ. ಗ್ರಾಮಸ್ಥರೆಲ್ಲರೂ ಅವುಗಳ ಪೋಷಕರು. ಇದು ಶ್ರೀಮಠದ ಸಂಪ್ರದಾಯ.ದೇಣಿಗೆಯಾಗಿ ಬಂದ ಹಸು ಮತ್ತುಕರುಗಳಿಗೆ ದೇವಾಲಯದವರು `ಲಿಂಗಮುದ್ರೆ~ ಹಾಕುವರಯ, ಅಲ್ಲಿಂದ ಹಸು-ಕರುಗಳು ದೇವಸ್ಥಾನದ ಸ್ವತ್ತು. ಸ್ವಚ್ಛಂದವಾಗಿ ಯಾರದೇ  ಹೊಲಗಳಲ್ಲಿ ಮೇಯಬಹುದು. ಮಠದ ಹಸುಗಳಾದ್ದರಿಂದ ಯಾರೂ ಅಡ್ಡಿ ಪಡಿಸುವುದಿಲ್ಲ.ಭಕ್ತರು ಇಲ್ಲಿನ ಊರಮ್ಮ ದೇವಿಗೂ ಹಸು-ಕರುಗಳನ್ನು ಬಿಡುವುದುಂಟು. ಭಕ್ತರು ಬಿಟ್ಟ ಹಸು-ಕರುಗಳು ಹತ್ತು-ಇಪ್ಪತ್ತು, ಮೂವತ್ತು ಹೀಗೆ ಹೆಚ್ಚುತ್ತಲೇ ಇದೆ. ಅವುಗಳಿಗೆ ನಿರ್ಧಿಷ್ಟ ನೆಲೆ ಇಲ್ಲ. ಹತ್ತು, ಹದಿನೈದು ಹಸು-ಕರುಗಳು ಗುಂಪಾಗಿ ಸುತ್ತುತ್ತವೆ. ಎಲ್ಲೆಂದರಲ್ಲಿ ಮಲಗುತ್ತವೆ. `ಲಿಂಗಮುದ್ರೆ~ ಹಾಕಿದ್ದಷ್ಟೇ ಲೆಕ್ಕ. ಉಳಿದಂತೆ ಅವು ಎಷ್ಟಿವೆ? ಎಲ್ಲಿವೆ? ಹೇಗಿವೆ ಎಂಬುದನ್ನು ದೇವಸ್ಥಾನದವರು ಗಮನಿಸುತ್ತಿಲ್ಲ.ದಷ್ಟಪುಷ್ಟವಾಗಿ ಬೆಳೆದ ಕೊಟ್ಟೂರೇಶ್ವರ ಸ್ವಾಮಿಯ ಹೋರಿಗಳು, ಹಸುಗಳು, ಕರುಗಳು ನಿಗೂಢವಾಗಿ ಕಣ್ಮರೆಯಾಗುತ್ತಿವೆ. ಕೆಲ ತಿಂಗಳ ಹಿಂದೆ ಮಠದ ಹೋರಿಯೊಂದನ್ನು ರಾತ್ರಿ ಸಮಯದಲ್ಲಿ ಅಪಹರಿಸಲು ಯತ್ನಿಸಿದಾಗ ಸಾರ್ವಜನಿಕರು ಅಡ್ಡಿಪಡಿಸಿದ ಬಿಡಿಸಿದ ಪ್ರಸಂಗವೂ ನಡೆಯಿತು. ಈ ಘಟನೆ ಕುರಿತು ಶ್ರೀಮಠದ ಧರ್ಮಸ್ಥ ಮಂಡಳಿ ಮೌನವಹಿಸಿತು.ಈ ಹಿಂದಿದ್ದ ಧರ್ಮಾಧಿಕಾರಿ ಡಾ. ಎ.ಎಂ. ನಾಗಭೂಷಣ, ಮಠದ ಹಸುಕರುಗಳಿಗೆ ಗೋಶಾಲೆ ಮಾಡುವ ಚಿಂತನೆ ಇದೆ ಎಂದಿದ್ದರು. ಇದುವರೆಗೆ ಆಗಿಲ್ಲ. ಸದ್ಯ ಅರಸೀಕೆರೆ ನಾಗರಾಜಯ್ಯ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಭಕ್ತರು ಮಠಕ್ಕೆ ಅರ್ಪಿಸುವ ಹಸು- ಕರುಗಳಿಗೆ ಗೋಶಾಲೆ ಆರಂಭಿಸಬೇಕು. ಇದರಿಂದ ಗೊಬ್ಬರ, ಹೈನು ಉತ್ಪನ್ನ, ಹೋರಿ-ಹಸುಗಳ ಮಾರಾಟದಿಂದ ಮಠದ ಆದಾಯವೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಧರ್ಮಸ್ಥ ಮಂಡಳಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬಾರದೇಕೆ ಎಂಬುದು ಭಕ್ತರು ಕೇಳುವ ಪ್ರಶ್ನೆ.ಗೋಶಾಲೆ ಆರಂಭಿಸಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಮಠದ ದನಗಳಿಂದ ಸಂಚಾರಕ್ಕೆ ವ್ಯತ್ಯಯವಾಗುವುದು, ನಿಗೂಢ ಕಣ್ಮರೆಯಾಗುವುದು ತಪ್ಪಿ, ಮಠಕ್ಕೆ ಶಾಶ್ವತ ಆಸ್ತಿಯಾಗಿ ಬೆಳೆಯಲಿದೆ ಎಂಬುದು ಭಕ್ತರ ಸಲಹೆ. ಈ ಕುರಿತು ಧಮಸ್ಥ ಮಂಡಳಿಗೂ ಭಕ್ತರು ಮನವಿ ಮಾಡಿದ್ದಾರೆ.

ಉಜ್ಜಿನಿ ರುದ್ರಪ್ಪ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.