ಶನಿವಾರ, ಮೇ 28, 2022
26 °C

ನೆಲೋಗಿ ಠಾಣೆಯಲ್ಲಿ ಲಾಕಪ್ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಜೇವರ್ಗಿ: ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಆರೋಪಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಬುಧವಾರ ನಡೆದಿದೆ.

 ತಾಲ್ಲೂಕಿನ ಇಟಗಾ ಗ್ರಾಮದ ಗಂಗಣ್ಣ ಶರಣಪ್ಪ ಪೂಜಾರಿ (32) ಎಂಬಾತನನ್ನು ಮಂಗಳವಾರ ಠಾಣೆಗೆ ವಿಚಾರಣೆಗೆಂದು ಕರೆತರಲಾಗಿತ್ತು. ಠಾಣೆಯ ಲಾಕಪ್‌ನಲ್ಲಿ ಆತನ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಪೊಲೀಸ್ ದೌರ್ಜನ್ಯದಿಂದಲೇ ಈತ ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ.

 ವ್ಯಕ್ತಿಯ ಕುತ್ತಿಗೆಗೆ ನೇಣು ಬಿಗಿದಿದ್ದರೂ ಕಾಲುಗಳು ನೆಲಕ್ಕೆ ತಾಗಿದ್ದರಿಂದ ಇದು ಲಾಕಪ್ ಸಾವು ಎಂದು ಮೆಲ್ನೋಟಕ್ಕೆ ಕಂಡು ಬರುತ್ತಿದೆ.ಘಟನೆ ವಿವರ
: ಐದು ವರ್ಷಗಳ ಹಿಂದೆ ಸ್ವಂತ ಅಕ್ಕನ ಮಗಳಾದ ಮಹಾದೇವಿ (ಮಲ್ಲಮ್ಮ)ಯೊಂದಿಗೆ ಗಂಗಣ್ಣನ ವಿವಾಹವಾಗಿತ್ತು. ಮೊದಲ ಪುತ್ರಿ ಜನಿಸಿದ ನಂತರ ಎರಡನೇ ಬಾರಿ ಅವಳು ಗರ್ಭಿಣಿಯಾಗಿದ್ದಳು. ಪತ್ನಿಯ ಶೀಲವನ್ನು ಶಂಕಿಸಿದ ಗಂಗಣ್ಣ ಗರ್ಭಿಣಿ ಪತ್ನಿಯನ್ನು 13 ದಿನಗಳ ಹಿಂದೆ ಕೊಲೆ ಮಾಡಿ ಇಟಗಾ-ಗಾಣಗಾಪುರ ಬ್ಯಾರೇಜ್‌ನಲ್ಲಿ ಗೋಣಿ ಚೀಲದಲ್ಲಿ ಕಟ್ಟಿ ಭೀಮಾ ನದಿಗೆ ಎಸೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಫೆ.28ರಂದು ಆತನನ್ನು ಬಂಧಿಸಿ ಠಾಣೆಗೆ ಕರೆ ತಂದು ವಿಚಾರಿಸಿದಾಗ “ಪತ್ನಿ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದಲ್ಲ. ನಾನೇ ಆಕೆಯನ್ನು ಕೊಲೆ ಮಾಡಿದ್ದೇನೆ” ಎಂದು ಗಂಗಣ್ಣ ತಿಳಿಸಿದ್ದಾನೆಂದು ಪಿಎಸ್‌ಐ ಎಚ್.ಆರ್.ನಡಗಡ್ಡಿ ‘ಪ್ರಜಾವಾಣಿ’ ಗೆ ತಿಳಿಸಿದರು.

“ಮಧ್ಯರಾತ್ರಿ ಪೊಲೀಸರ ಕಣ್ತಪ್ಪಿಸಿ ಠಾಣೆಯಲ್ಲಿಯೇ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫೆ.28ರಂದು ಗಂಗಣ್ಣನನ್ನು ವಿಚಾರಣೆಗೆ ಠಾಣೆಗೆ ಕರೆ ತರಲಾಗಿತ್ತು. ಆದರೆ ಅಂದು ವಿಚಾರಣೆ ನಡೆಸಿರಲಿಲ್ಲ. ಮಂಗಳವಾರ ಜೇವರ್ಗಿ ಸಿಪಿಐ ಸಂತೋಷ ಬನ್ನೆಟ್ಟಿ, ಠಾಣೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು” ಎಂದು ಪೊಲೀಸ್ ಮೂಲ  ಹೇಳಿವೆ.

ನೆಲೋಗಿ ಠಾಣೆಯಲ್ಲಿ ಲಾಕಪ್ ಸಾವು ಸಂಭವಿಸಿದೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ಠಾಣೆ ಮುಂದೆ ಜನಜಂಗುಳಿ ನೆರೆದಿತ್ತು.ಜೇವರ್ಗಿ ಜೆಎಂಎಫ್‌ಸಿ ನ್ಯಾಯಾಧೀಶ ವಿ.ಪ್ರಕಾಶ ಶವದ ಪಂಚನಾಮೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ಯಲು ಸೂಚಿಸಿದರು. ಗಂಗಣ್ಣನ ಶವವನ್ನು ಠಾಣೆ ಹೊರಗಡೆ ತಂದಾಗ ಆತನ ತಂದೆ, ತಾಯಿ, ಮತ್ತು ಬಂಧುಗಳ ರೋದನ ಮುಗಿಲು ಮುಟ್ಟಿತ್ತು. ಗಂಗಪ್ಪನಿಗೆ ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಎರಡು ವರ್ಷದ ಪುತ್ರಿ ಇದ್ದಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.