ನೆಲ್ಯಾಡಿ: ಅನಿಲ ಸೋರಿಕೆ, ತಪ್ಪಿದ ದುರಂತ

7

ನೆಲ್ಯಾಡಿ: ಅನಿಲ ಸೋರಿಕೆ, ತಪ್ಪಿದ ದುರಂತ

Published:
Updated:

ನೆಲ್ಯಾಡಿ (ಉಪ್ಪಿನಂಗಡಿ): ಎಂಆರ್‌ಪಿಎಲ್‌ನಿಂದ (ಮಂಗಳೂರು) ಬೆಂಗಳೂರು ಕಡೆಗೆ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪೆರಿಯಶಾಂತಿ ಎಂಬಲ್ಲಿ ಉರುಳಿಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ  ಮಂಗಳವಾರ ಬೆಳಿಗ್ಗೆ ನಡೆದಿದೆ.ಮೃತ ಚಾಲಕನನ್ನು ತಮಿಳುನಾಡಿನ ನಾಮಕಲ್ ನಿವಾಸಿ ಧನಶೇಖರ್ ಅಲಿಯಾಸ್ ಶರವಣ (35) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಟ್ಯಾಂಕರ್‌ನ ವಾಲ್ವ್ ತುಂಡಾಗಿ ಭಾರಿ ಪ್ರಮಾಣದಲ್ಲಿ ಗ್ಯಾಸ್ ಸೋರಿಕೆಯಾಗಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತ್ವರಿತ ರಕ್ಷಣಾ ಕಾರ್ಯ ಕೈಗೊಂಡು, ಸಂಭವನೀಯ ಭಾರಿ ದುರಂತ ತಪ್ಪಿಸಿದರು.ಬೆಳಿಗ್ಗೆ 6.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಟ್ಯಾಂಕರ್ ರಸ್ತೆಯಿಂದ ಸುಮಾರು 20 ಮೀಟರ್ ದೂರದಲ್ಲಿ ಚರಂಡಿಗೆ ಬಿದ್ದಿದೆ. ಟ್ಯಾಂಕರ್‌ನ 3 ವಾಲ್ವ್ ಪೈಕಿ 1 ವಾಲ್ವ್ ತುಂಡಾಗಿ ಗ್ಯಾಸ್ ಸೋರಿಕೆಯಾಗಿದೆ. ಗ್ಯಾಸ್ ಸೋರಿಕೆ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಇಕ್ಕಡೆಯಲ್ಲಿ 2ಕಿ.ಮೀ. ವರೆಗೆ ಸಂಚಾರ ತಡೆಹಿಡಿದರು.

 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ 13 ಅಗ್ನಿಶಾಮಕ ದಳ ವಾಹನ ಮತ್ತು 80 ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಅನಾಹುತ ತಪ್ಪಿಸುವಲ್ಲಿ ಶ್ರಮಿಸಿದರು. ದ.ಕ. ಜಿಲ್ಲಾ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ ಎಚ್.ಎಸ್. ವರದರಾಜ್ ಮತ್ತು ಚಿ. ಬಸವಣ್ಣ ಸ್ಥಳಕ್ಕೆ ಆಗಮಿಸಿದ್ದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ವರದರಾಜ್, ಟ್ಯಾಂಕರ್‌ನಲ್ಲಿ ಒಟ್ಟು 18 ಟನ್ ಅಡುಗೆ ಅನಿಲ ಇದೆ. ಅನಿಲ ಸೋರಿಕೆ ಆಗುತ್ತಿರುವುದರಿಂದ ನೀರು ಹಾಯಿಸಲಾಗುತ್ತದೆ. ಈ ಪ್ರದೇಶದಲ್ಲಿ 2 ಕಿ.ಮೀ. ಅಂತರದಲ್ಲಿ ಮನೆಗಳಲ್ಲಿ ಬೆಂಕಿ ಉರಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.ಬೆಂಗಳೂರು ಕಡೆ ಹೋಗುವ ಬಸ್ ಸಹಿತ ಇತರ ವಾಹನಗಳನ್ನು ಕಡಬ-ಸುಬ್ರಹ್ಮಣ್ಯ ರಸ್ತೆಯಾಗಿ ಮತ್ತು ಲಾರಿ ಮತ್ತಿತರ ಭಾರೀ ವಾಹನಗಳನ್ನು ಚಾರ್ಮಾಡಿ ರಸ್ತೆಯಾಗಿ ತೆರಳುವಂತೆ ವ್ಯವಸ್ಥೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry