ನೆವ ಬಿಡಿ, ಕೆಲಸ ಮಾಡಿ: ಡಿಸಿ ಕಿವಿಮಾತು

7

ನೆವ ಬಿಡಿ, ಕೆಲಸ ಮಾಡಿ: ಡಿಸಿ ಕಿವಿಮಾತು

Published:
Updated:

ತುರುವೇಕೆರೆ: ಜಿಲ್ಲಾಧಿಕಾರಿ ಸತ್ಯಮೂರ್ತಿ ಮಂಗಳವಾರವಿಡೀ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಕರ್ತವ್ಯಲೋಪ­ವೆಸಗಿದ ಹಲವು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.ಮಂಗಳವಾರ ಬೆಳಿಗ್ಗೆ ತಾಲ್ಲೂಕು ಕಚೆೇರಿಗೆ ಆಗಮಿಸಿದ ಜಿಲ್ಲಾಧಿಕಾರಿ, ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಿದರು. ಕೃಷಿ ಇಲಾಖೆಯ ಅಧಿಕಾರಿಗಳು ಬೀಜ ಬಿತ್ತನೆಯಾದ ಪ್ರದೇಶದ ಬಗ್ಗೆ ನೀಡಿದ ಮಾಹಿತಿ ಗೊಂದಲಕ್ಕೆಡೆ ಮಾಡಿಕೊಟ್ಟಿತು.ಹಲವೆಡೆ ಹುರುಳಿ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಲಾಗಿದೆ. ಆದರೆ ಎಲ್ಲೂ ಹುರುಳಿ ಬಿತ್ತನೆ ಆಗಿಲ್ಲ. ನಾನು ಕ್ಷೇತ್ರ ಪ್ರವಾಸ ಮಾಡಿದ್ದೇನೆ. ಕೃಷಿ ಇಲಾಖೆ ನೀಡಿರುವ ಮಾಹಿತಿ ಅಪೂರ್ಣ­ವಾಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ಷೇಪ ವ್ಯಕ್ತಪಡಿಸಿ­ದಾಗ ಕೃಷಿ ಇಲಾಖೆಯ ಅಧಿಕಾರಿಗಳು ಮುಜುಗರಕ್ಕೊಳಗಾದರು. ಕ್ಷೇತ್ರ ಸಂದರ್ಶಿಸಿ ಕರಾರುವಾಕ್ಕಾದ ಮಾಹಿತಿ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಡಿಸಿ ಆದೇಶಿಸಿದರು.ಸೋಮವಾರದ ‘ಪ್ರಜಾವಾಣಿ’­ಯಲ್ಲಿ ಪ್ರಕಟವಾಗಿದ್ದ ದಬ್ಬೇಘಟ್ಟ ರಸ್ತೆಯ ದುಸ್ಥಿತಿ ಸಭೆಯಲ್ಲಿ ಚರ್ಚೆಗೆ ಬಂದಿತು. ಪಟ್ಟಣ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆಯ ನಡುವೆ ರಸ್ತೆ ವಿಸ್ತರಣೆಯ ಬಗ್ಗೆ ಭಿನ್ನಾಭಿಪ್ರಾಯವಿದೆ. ಪ.ಪಂ ಅಧಿಕಾರಿ­ಗಳು ನಿಷ್ಠುರ ಕ್ರಮ ಕೈಗೊಳ್ಳದೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಎಂದು  ಶಾಸಕರು ತರಾಟೆಗೆ ತೆಗೆದುಕೊಂಡರು.ರಸ್ತೆ ವಿಸ್ತರಣೆ ಕಾಮಗಾರಿಗೆ  ಪ.ಪಂ ಅಧಿಕಾರಿಗಳು, ಲೋಕೋಪ­ಯೋಗಿ ಇಲಾಖೆಯ ಬಗ್ಗೆ ಸಮನ್ವ­ಯತೆ ಇಲ್ಲದೆ 8 ತಿಂಗಳ ಹಿಂದೆ ಹಣ ಬಿಡುಗಡೆಯಾಗಿದ್ದರೂ ಕಾಮಗಾರಿ ಪ್ರಾರಂಭವಾಗದ  ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಯ ಇಕ್ಕೆಲೆಗಳ ಕಟ್ಟಡ ಒಡೆಯಲು ಈ ಕೂಡಲೇ ಕಟ್ಟಡದ ಮಾಲೀಕರಿಗೆ ತಿಳಿವಳಿಕೆ ನೀಡಿ, ಪರಿಹಾರ ನಿಗದಿ ಮಾಡಿ, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಲಹೆ ನೀಡಿದರು.ಅಕ್ರಮ ಮರಳು ಸಾಗಣೆ ಮಟ್ಟ ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ ಅವರು, ಕಳೆದ ವರ್ಷ ವಶಕ್ಕೆ ಪಡೆದಿರುವ ಸುಮಾರು 250 ಲೋಡ್ ಮರಳನ್ನು ಈವರೆಗೆ ಹರಾಜು ಹಾಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಕೂಡಲೇ ಹಾಲಿ ದರದಲ್ಲಿ ಮರಳನ್ನು ಹರಾಜು ಹಾಕಿ ಸಾರ್ವಜನಿಕರಿಗೆ ವಿತರಿಸುವಂತೆ ಸೂಚಿಸಿದರು.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ವಿದ್ಯಾರ್ಥಿ­ನಿಲಯ­ಗಳ ನಿರ್ವಹಣೆ­ಯಲ್ಲಿ ಬೇಜವಾಬ್ದಾರಿ­ಯಿಂದ ವರ್ತಿಸುತ್ತಿ­ರುವ ಬಗ್ಗೆ  ತರಾಟೆಗೆ ತೆಗೆದು­ಕೊಂಡರು. ಹಲವು ಅಧಿಕಾರಿಗಳು ಕಡತ ಡಿಸಿ ಕಚೇರಿಯಲ್ಲಿ ಪೆಂಡಿಂಗ್ ಇದೆ ಎಂದು ನೆವ ಹೇಳುತ್ತಿರುತ್ತಿರುತ್ತಾರೆ. ಯಾವುದೇ ಕಡತ ನೆನೆಗುದಿಗೆ ಬಿದ್ದಿದ್ದರೆ ದಾಖಲೆ­ಗಳೊಂದಿಗೆ ಸಾಬೀತು ಮಾಡಬೇಕು. ಸುಳ್ಳು ನೆಪಗಳನ್ನು ಹೇಳಿದರೆ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಮಾದಿಗ ದಂಡೋರದ ಚಿದಾನಂದ್, ತಾ.ಪಂ. ಸದಸ್ಯ ವೆಂಕಟರಾಮಯ್ಯ, ದಲಿತ ಮುಖಂಡ ಬೀಚನಹಳ್ಳಿ ರಾಮಣ್ಣ, ರಾಮಚಂದ್ರಯ್ಯ ಹಾಗೂ ಹಲವು ಸಂಘ, ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ತಾಲ್ಲೂಕಿನ ಕುಂದು ಕೊರತೆ ಕುರಿತು ಮನವಿ ಸಲ್ಲಿಸಿದರು.ನ್ಯಾಫೆಡ್ ಸೆ.16ರಿಂದ ಕೊಬ್ಬರಿ ಖರೀದಿ ನಿಲ್ಲಿಸುವುದಾಗಿ ತಿಳಿದು ಬಂದಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಲಿದೆ. ಕೊಬ್ಬರಿ ಖರೀದಿ ಮುಂದುವರೆಸಬೇಕು  ಎಂದು ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.ನಂತರ ಸುದ್ದಿಗಾರರೊಂದಿಗೆ ಮಾತ­ನಾಡಿದ ಜಿಲ್ಲಾಧಿಕಾರಿ ಸತ್ಯಮೂರ್ತಿ, ಅಧಿಕಾರಿ­ಗಳು ಪದೇ ಪದೇ ತುಮಕೂರಿಗೆ ಬರುವುದರಿಂದ ಸ್ಥಳೀಯ­­ವಾಗಿ ಜನಸಾಮಾನ್ಯರ ಕೆಲಸ  ನೆನೆಗುದಿಗೆ ಬೀಳುತ್ತದೆ. ಈ ಹಿನ್ನಲೆಯಲ್ಲಿ ಶ್ರಮ ಹಾಗೂ ಸಮಯ ಉಳಿಸಲು ಮತ್ತು ವಿವಿಧ ಇಲಾಖೆ­ಗಳೊಂದಿಗೆ ಸಮನ್ವಯತೆ ಕಾಯ್ದು­ಕೊಳ್ಳಲು ಕಂದಾಯ, ಶಿಕ್ಷಣ, ಸಮಾಜ ಕಲ್ಯಾಣ, ಕೃಷಿ ಮತ್ತು ತೋಟಗಾರಿಕೆ, ಆಹಾರ ಮೊದಲಾದ ಜನರ ಆದ್ಯತೆಯ ಇಲಾಖೆಗಳ ಕಾರ್ಯದಕ್ಷತೆ ಹೆಚ್ಚಿಸಲು ಇದೊಂದು ವಿನೂತನ ಪ್ರಯೋಗ. ಮುಂದೆ ಸಾರ್ವಜನಿಕ ಸಭೆ ನಡೆಸಿ ಕುಂದು ಕೊರತೆ ಆಲಿಸಲಾಗುವುದು ಎಂದರು.

ತಹಶಿೀಲ್ದಾರ್ ಜಿ.ಪಿ.ಮಂಜೇಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry