ನೇಕಾರರಿಗೆ `ಕೆಎಸ್‌ಎಫ್‌ಸಿ' ಸಾಲ: ಸರ್ಕಾರ ಚಿಂತನೆ

7

ನೇಕಾರರಿಗೆ `ಕೆಎಸ್‌ಎಫ್‌ಸಿ' ಸಾಲ: ಸರ್ಕಾರ ಚಿಂತನೆ

Published:
Updated:

ಬೆಂಗಳೂರು: ರಾಜ್ಯದ ನೇಕಾರರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) ಮೂಲಕ ಶೇ 3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕಿಸಿಕೊಡುವ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ  ಚರ್ಚಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಹೇಳಿದರು.ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರಾಜ್ಯ ನೇಕಾರರ ಚಿಂತನ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ನೇಕಾರರಿಗೆ ಸಾಲ ನೀಡಲು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳು ಮುಂದೆ ಬರುತ್ತಿಲ್ಲ. ಈ ಬ್ಯಾಂಕುಗಳ ನಿಯಮಗಳು ಬಹಳ ಕಠಿಣವಾಗಿದ್ದು, ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ನೇಕಾರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕಾರಜೋಳ, ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರದ ಅಧೀನದಲ್ಲಿ ಕಾರ್ಯ ನಿರ್ವಹಿಸುವುದರಿಂದ ಅವುಗಳ ಮೇಲೆ ರಾಜ್ಯ ಸರ್ಕಾರದ ಹಿಡಿತವಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಅಧೀನದಲ್ಲಿರುವ ಕೆಎಸ್‌ಎಫ್‌ಸಿ ಮೂಲಕವೇ ನೇಕಾರರಿಗೆ ಸಾಲ ನೀಡುವ ಬಗ್ಗೆ ಚಿಂತನೆ ನಡೆದಿದೆ. ಈ ವಿಷಯವನ್ನು ಮುಂದಿನ ಬಜೆಟ್‌ನಲ್ಲಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.ಸಬ್ಸಿಡಿ ದರದಲ್ಲಿ ವಿದ್ಯುತ್ ಚಾಲಿತ ಕೈಮಗ್ಗ ಯಂತ್ರಗಳನ್ನು ಆಯಾ ಭಾಗದಲ್ಲಿರುವ ನೇಕಾರರ ಕುಟುಂಬಗಳ ಆಧಾರದ ಮೇಲೆ ನೀಡುವುದು, ಜವಳಿ ನೀತಿಯನ್ನು ಪುನರ್‌ಪರಿಶೀಲಿಸುವುದು, ಸಾಲದ ಮೊತ್ತ ಹೆಚ್ಚಿಸುವುದು, ಸಾಲ ನೀಡುವಾಗ ಅನುಸರಿಸಲಾಗುತ್ತಿರುವ ವಿಳಂಬ ನೀತಿ ಸರಿಪಡಿಸುವುದು ಸೇರಿದಂತೆ ನೇಕಾರರ ಎಲ್ಲ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.ಬಿಬಿಎಂಪಿ ಸದಸ್ಯ ಎ.ಎಲ್. ಶಿವಕುಮಾರ್ ಮಾತನಾಡಿ, ಅತ್ಯಂತ ಹಿಂದುಳಿದ ವರ್ಗಗಳಲ್ಲಿ ನೇಕಾರರೂ ಸೇರಿದ್ದಾರೆ. ಆದರೆ ಅವರಿಗೆ ಸರ್ಕಾರದಿಂದ ಹಿಂದುಳಿದ ಜಾತಿಗಳಿಗೆ ಸಿಗುವ ಸೌಲಭ್ಯಗಳೂ ಸಿಗುತ್ತಿಲ್ಲ. ರೈತರಿಗೆ ಸಿಗುವ ಅನುಕೂಲಗಳೂ ಲಭ್ಯವಾಗುತ್ತಿಲ್ಲ ಎಂದರು.ಶಾಸಕ ದೊಡ್ಡನಗೌಡ ಪಾಟೀಲ್, ನೇಕಾರರ ಸಂಘದ ಮುಖಂಡ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ರಾಜ್ಯ ಘಟಕ ಉಪಾಧ್ಯಕ್ಷ  ನಿರ್ಮಲ ಕುಮಾರ್ ಸುರಾನ ಮತ್ತಿತರರು ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry