ಬುಧವಾರ, ಜನವರಿ 29, 2020
29 °C
28ರಂದು ರಾಜ್ಯಮಟ್ಟದ ದೇವಾಂಗ ನೇಕಾರರ ಬೃಹತ್ ಸಮಾವೇಶ

ನೇಕಾರರ ಅಭಿವೃದ್ಧಿ ಅನುದಾನಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ಪಟ್ಟಣದ ಜೂನಿಯರ್ ಕಾಲೇಜಿನ ಆವರಣದಲ್ಲಿ ಇದೇ 28 ಮತ್ತು 29ರಂದು ರಾಜ್ಯಮಟ್ಟದ ದೇವಾಂಗ ನೇಕಾರರ ಬೃಹತ್ ಸಮಾವೇಶ ನಡೆಯಲಿದೆ ಎಂದು ದೇವಾಂಗ ಸಮುದಾಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋ ತಿಪ್ಪೇಶ್ ತಿಳಿಸಿದ್ದಾರೆ.ಸಮಾವೇಶದ ವಿವರಣೆ ನೀಡುವ ಸಲುವಾಗಿ ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ದಿನಗಳ ಕಾಲ ನಡೆಯುವ ನೇಕಾರರ ಸಮಾವೇಶದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು, ಶಿಕ್ಷಣ ತಜ್ಞರು, ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಪಾಲ್ಗೊಳ್ಳಲಿದ್ದಾರೆ. ಎರಡನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.50 ಸಾವಿರ ಜನರ ನಿರೀಕ್ಷೆ : ದೇವಾಂಗ, ಪಟ್ಟಸಾಲಿ, ಪದ್ಮಸಾಲಿ, ತೊಗಟವೀರ, ಕುರುವಿನಶೆಟ್ಟಿ ಸೇರಿದಂತೆ ದೇವಾಂಗ ಸಮುದಾಯದಲ್ಲಿ ಐದಾರು ಉಪ ಪಂಗಡಗಳಿದ್ದು, ಅವರನ್ನೆಲ್ಲ ಒಂದೆಡೆ ಸೇರಿಸುವ ಜೊತೆಗೆ ಸಂಘಟನೆಯನ್ನು ಬಲಗೊಳಿಸುವುದು ಸಮಾವೇಶದ ಉದ್ದೇಶ ಎಂದು ತಿಪ್ಪೇಶ್ ತಿಳಿಸಿದರು.ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ.  ಇವರೆಲ್ಲರಿಗೂ ಊಟ, ವಸತಿ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಹೊಸದುರ್ಗ ಪಟ್ಟಣದ ಎಲ್ಲ ಕಲ್ಯಾಣ ಮಂಟಪಗಳು, 20 ಸಮುದಾಯ ಭವನಗಳು, 150 ಕೊಠಡಿಗಳು, ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿರುವ ಸಮುದಾಯ ಭವನಗಳು, ಶಾಲಾ ಕಾಲೇಜುಗಳು, ವಸತಿ ನಿಲಯಗಳನ್ನು ವಸತಿ ವ್ಯವಸ್ಥೆಗಾಗಿ ಬಿಡಿಸಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಸಾಣೇಹಳ್ಳಿ ಮಠ ಸೇರಿದಂತೆ, ಪಟ್ಟಣದಲ್ಲಿರುವ ಎಲ್ಲ ಮಠದ ಸ್ವಾಮೀಜಿಗಳು ಸಹಕಾರ ನೀಡುತ್ತಿರುವುದರಿಂದ ಊಟ ವಸತಿ ವ್ಯವಸ್ಥೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ’ ಎಂದು ಸಮ್ಮೇಳನದ ಅಧ್ಯಕ್ಷ ಗೋವಿಂದರಾಜು ವಿವರಿಸಿದರು.ನೇಕಾರರ ಅಭಿವೃದ್ಧಿಗೆ ಚರ್ಚೆ: ಸಮಾವೇಶದಲ್ಲಿ ದೇವಾಂಗ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಕುರಿತು ಚರ್ಚೆ ನಡೆಯಲಿದೆ.  ನೇಕಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲಾಗುತ್ತದೆ. ಹರಿದು ಹಂಚಿ ಹೋಗಿರುವ ನೇಕಾರ ಸಮುದಾಯವನ್ನು ಒಗ್ಗೂಡಿಸುವ ಜೊತೆಗೆ, ಸಮುದಾಯದ ನೌಕರರನ್ನು ಒಂದೇ ಸೂರಿನಡಿ ತರುವ ಪ್ರಯತ್ನ ಮಾಡಲಾಗುತ್ತದೆ. ಸಮುದಾಯದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮಾಹಿತಿ ಪಡೆದುಕೊಳ್ಳುವುದು, ಮಕ್ಕಳ ಭವಿಷ್ಯಕ್ಕಾಗಿ  ಸಮುದಾಯ ಹೇಗೆ ತೊಡಗಿಸಿಕೊಳ್ಳಬೇಕೆಂಬ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ದೇವಾಂಗ ಸಮುದಾಯದ ಕಾರ್ಯಾಧ್ಯಕ್ಷ ಡಿ.ಆರ್. ನಾಘೇಶಪ್ಪ, ಕಾರ್ಯದರ್ಶಿ ಎಸ್.ಸುರೇಶ್ ಮತ್ತಿತರರು ಹಾಜರಿದ್ದರು.ಶೇ 2ರ ಮೀಸಲಿಗೆ ಒತ್ತಾಯ

‘ರಾಜ್ಯ ಸರ್ಕಾರ ನೇಕಾರರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ₨ 60 ಕೋಟಿ ಅನುದಾನವನ್ನು ಮುಂದಿನ ವರ್ಷದ ಬಜೆಟ್‌ನಲ್ಲಿ ₨ 200 ಕೋಟಿಗೆ ಹೆಚ್ಚಿಸಬೇಕು ಎಂದು ನೇಕಾರರ ಸಮಾವೇಶದಲ್ಲಿ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಪ್ಪೇಶ್ ವಿವರಿಸಿದರು.

‘ಮಹಾರಾಷ್ಟ್ರ ಮಾದರಿಯಲ್ಲಿ ನೇಕಾರ ಸಮುದಾಯಕ್ಕೆ ಶೇ  2ರಷ್ಟು ಮೀಸಲಾತಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಪತ್ತಿನ ಸಹಕಾರ ಬ್ಯಾಂಕ್‌ಗಳಲ್ಲಿರುವ ನೇಕಾರರ ₨ 25,000 ವರೆಗಿನ ಸಾಲವನ್ನು ಮನ್ನಾ ಮಾಡಬೇಕು. ದೇವಾಂಗ ಸಮುದಾಯದ ಚಟುವಟಿಕೆ ನಡೆಸಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 15 ಎಕರೆ ಜಮೀನು ನೀಡುವುದು’ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಮಾಜದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು ಎಂದರು.‘ದೇವಾಂಗ ಸಮುದಾಯ ಸದ್ಯ ಪ್ರವರ್ಗ 2ಎ ನಲ್ಲಿದೆ. ಆದರೆ ಆ ಪ್ರವರ್ಗದಲ್ಲಿ ಬೇರೆ ಬೇರೆ ಸಮುದಾಯಗಳು ಬರುವುದರಿಂದ, ನಮ್ಮ ಸಮುದಾಯಕ್ಕೆ ಯಾವುದೇ ಸೌಲಭ್ಯ ದೊರೆಯುವುದಿಲ್ಲ. ಆದ್ದರಿಂದ ಸರ್ಕಾರ ದೇವಾಂಗ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿ ನೀಡಬೇಕು’ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)