ನೇಕಾರ ಕಲ್ಯಾಣಕ್ಕೆ ಕ್ರೆಡಿಟ್ ಕಾರ್ಡ್

7

ನೇಕಾರ ಕಲ್ಯಾಣಕ್ಕೆ ಕ್ರೆಡಿಟ್ ಕಾರ್ಡ್

Published:
Updated:

ವಿಜಯಪುರ: ಕೈಮಗ್ಗ ನೇಕಾರರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಹಾಗೂ ಹಿಂದಿನ ಸಾಲ ಮನ್ನಾ ಮಾಡಿ ಹೊಸ ಸಾಲ ನೀಡುವಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸದಸ್ಯ ಬಿ.ರಾಜಣ್ಣ ಹೇಳಿದರು.ಬಿಎಂಎಸ್ ಸಮುದಾಯ ಭವನದಲ್ಲಿ ಬುಧವಾರ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜವಳಿ ಖಾತೆ ಪ್ರಾಯೋಜಿಸಿದ್ದ ತಾಲ್ಲೂಕು ಮಟ್ಟದ 1ದಿನದ ಕಾರ್ಯಾಗಾರ ಉದ್ಘಾಟಿಸಿದ ಅವರು, ನೇಕಾರರ ಕಲ್ಯಾಣಕ್ಕಾಗಿ ಇರುವ 3,884 ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಅನುಷ್ಠಾನಕ್ಕೆ ಕಾರ್ಯಕ್ರಮ ಘೋಷಿಸಿದೆ ಎಂದರು.ಕೇಂದ್ರ ಸರ್ಕಾರವು ರೇಷ್ಮೆ ಆಮದು ಸುಂಕವನ್ನು ಶೇ.30ರಿಂದ ಸೇ.25 ಕ್ಕೆ ಇಳಿಸಿದ್ದು, ಈ ಕಾರಣದಿಂದ ರೇಷ್ಮೆ ಬೆಲೆ ರಾಷ್ಟ್ರ ಮಟ್ಟದಲ್ಲಿ ಕಡಿಮೆಯಾಗಿರುವುದರಿಂದ ಇದರ ಅನುಕೂಲವನ್ನು ನೇಕಾರರು ಬಳಸಿಕೊಳ್ಳಬೇಕೆಂದು ತಿಳಿಸಿದರು.ಜವಳಿ ಅಭಿವೃದ್ಧಿ ಆಯುಕ್ತ ವೆಂಕಟೇಶ್ ಮಾತನಾಡಿ, 2010ರ ಮಾರ್ಚ್‌ನಂತೆ ಕೈಮಗ್ಗ ನೇಕಾರರ ಸಹಕಾರ ಸಂಘಗಳು ಹಾಗೂ ನೇಕಾರರ ವೈಯಕ್ತಿಕ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡುವ ಉದ್ದೇಶ ಹೊಂದಿದೆ ಎಂದರು.ದೇಶದಲ್ಲಿನ 3 ಲಕ್ಷ ನೇಕಾರರಿಗೆ 16 ಸಾವಿರ ನೇಕಾರರ ಸಹಕಾರ ಸಂಘಗಳ ಮೂಲಕ ಬಂಡವಾಳ ವೃದ್ಧಿಗಾಗಿ 3521 ಕೋಟಿ ರೂಪಾಯಿ, ಹೊಸ ಸಾಲಗಳ ಮೇಲೆ ಶೇ.3 ರ ದರದಲ್ಲಿ ಬಡ್ಡಿಯ ಸಹಾಯಧನಕ್ಕಾಗಿ ರೂ.180 ಕೋಟಿ ಮೀಸಲಿರಸಲಾಗಿದೆ ಎಂದರು.ಬೆಂಗಳೂರಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್(ನಬಾರ್ಡ್) ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ನಾಜಿಯಾ ನಿಜಾಮುದ್ದೀನ್, ನೇಕಾರರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಒದಗಿಸಲು ನಿಗದಿತ ಅರ್ಜಿ ನಮೂನೆಗಳನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ  ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‌ನ ಸಹಾಯಕ ನಿರ್ದೇಶಕ ಲಿಂಗರಾಜು ಮಾತನಾಡಿ, 3 ವರ್ಷಗಳ ಅವಧಿಗೆ ಶೇ. 3 ರಷ್ಟು ಬಡ್ಡಿ ನೀಡಲು ಹಾಗೂ 2 ಲಕ್ಷ ರೂಪಾಯಿಗಳ ಗರಿಷ್ಠ ಮೊತ್ತದ ಕೈಮಗ್ಗ ನೇಕಾರರ ಕ್ರೆಡಿಟ್ ಕಾರ್ಡ್‌ಗಳ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ಪುರಸಭಾಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ, ಜೆಡಿಎಸ್ ಮುಖಂಡ ನಂಜಪ್ಪ, ದೇವನಹಳ್ಳಿ ಪುರಸಭಾ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ, ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಉಪನಿರ್ದೇಶಕ ಸುಂದರ್ ಲಾಲ್, ದೇವನಹಳ್ಳಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ವಿಜಯ್‌ಕುಮಾರ್, ಕೆನರಾ ಬ್ಯಾಂಕ್ ವಿಜಯಪುರ ಶಾಖೆ ವ್ಯವಸ್ಥಾಪಕ ಮರಿಸ್ವಾಮಿ ಮತ್ತಿತರು ಉಪಸ್ಥಿತರಿದ್ದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಎಸ್. ಪ್ರಕಾಶ್ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಆರ್. ಲಿಂಗರಾಜುವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry