ಭಾನುವಾರ, ಮೇ 16, 2021
26 °C

ನೇಕಾರ ಸಮುದಾಯ ಭವನಕ್ಕೆ 50 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿ ನೇಕಾರ ಸಮುದಾಯ ಭವನಗಳ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ~ ಎಂದು ಸಚಿವ ಜಗದೀಶ್ ಶೆಟ್ಟರ್ ಇಲ್ಲಿ ಭರವಸೆ ನೀಡಿದರು.ನೇಕಾರರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ನೇಕಾರರ ರಾಷ್ಟ್ರೀಯ ಸೇವಾ ಟ್ರಸ್ಟ್ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಸರ್ಕಾರ ಬಜೆಟ್‌ನಲ್ಲಿ ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ಕಾಗಿ 50 ಕೋಟಿ ಹಣ ಮೀಸಲಿಟ್ಟಿದೆ. ಆದರೆ ತಾಂತ್ರಿಕ ಕಾರಣಗಳಿಂದ ಹಣ ಬಿಡುಗಡೆಯಾಗಿಲ್ಲ. ನೇಕಾರರ ಸಮಸ್ಯೆಗಳೂ ಸೇರಿದಂತೆ ಹಣ ಬಿಡುಗಡೆ ಮಾಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ~ ಎಂದು ಆಶ್ವಾಸನೆ ನೀಡಿದರು.ಕೊರಗು ಇದೆ: ಇಳಕಲ್ ಸೀರೆಗೆ ತನ್ನದೇ ಆದ ಮಹತ್ವ ಹಾಗೂ ಜನಪ್ರಿಯತೆ ಇತ್ತು. ಕೈಮಗ್ಗದಲ್ಲಿ ನೇಯುತ್ತಿದ್ದ ಇಳಕಲ್ ಸೀರೆಗಳು ಇಂದು ಕಡಿಮೆಯಾಗುತ್ತಿವೆ. ಹಿಂದೆ ಈ ಸೀರೆ ತೊಟ್ಟ ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ವಿಶೇಷ ಗೌರವ ನೀಡಲಾಗುತ್ತಿತ್ತು. ತಂತ್ರಜ್ಞಾನದ ಪ್ರಭಾವದಿಂದ ಈ ಸೀರೆಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಕೊರಗು ನನಗಿದೆ ಎಂದು ನೊಂದು ನುಡಿದರು.ಅಖಿಲ ಭಾರತ ಕೈಮಗ್ಗ ಮತ್ತು ಕರಕುಶಲ ಮಂಡಳಿ ನಿರ್ದೇಶಕ ಎಲ್.ಆರ್.ಅನಂತ್ ಮಾತನಾಡಿ, `45 ವರ್ಷಗಳಿಂದ ನೇಕಾರ ಸಮುದಾಯಗಳು ಹೋರಾಟ ಮಾಡುತ್ತಿವೆ.  ರಾಜ್ಯದ 40 ಲಕ್ಷ ಜನಸಂಖ್ಯೆಯಲ್ಲಿ 20 ಲಕ್ಷ ಜನ ಬಡವರಿದ್ದಾರೆ. ಇಳಕಲ್ ಸೀರೆಗಳನ್ನು ಮಾರುತ್ತಿದ್ದವರು ಬೀದಿ ಪಾಲಾಗಿದ್ದಾರೆ~ ಎಂದು ವಿಷಾದಿಸಿದರು.ಸರ್ಕಾರದ 120 ನಿಗಮ ಮಂಡಳಿಗಳ ಪೈಕಿ ಕೇವಲ 6 ನಿಗಮ ಮಂಡಳಿಗಳು ಮಾತ್ರ ಲಾಭದಲ್ಲಿವೆ. ಉಳಿದ ಮಂಡಳಿಗಳು ಸಾಲದ ಸುಳಿಯಿಂದ ಮುಚ್ಚಿಹೋಗುವ ಸ್ಥಿತಿಯಲ್ಲಿವೆ ಎಂದರು.ಉಪ ಮೇಯರ್ ಎಸ್.ಹರೀಶ್ ಮಾತನಾಡಿ, `ನೇಕಾರರ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಈ ಬಾರಿ ಉಪ ಮೇಯರ್ ನಿಧಿಯಿಂದ 50 ಲಕ್ಷ ರೂಪಾಯಿ ನೀಡುವುದಾಗಿ ಪ್ರಕಟಿಸಿದರು. ಈಗಾಗಲೇ ಒಬ್ಬ ವಿದ್ಯಾರ್ಥಿಗೆ ರೂ. 10 ಲಕ್ಷ ನೀಡಲಾಗಿದೆ. ಆರ್ಥಿಕವಾಗಿ ತೊಂದರೆಯುಳ್ಳ ವಿದ್ಯಾರ್ಥಿಗಳು ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆದುಕೊಳ್ಳಬಹುದು ಎಂದು ಹೇಳಿದರು.ನೇಕಾರರಿಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಸುಲಭವಾಗಿ ಸಿಗಬೇಕು. ನೇಕಾರರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಲಾಗಿದ್ದು ಮತ್ತೆ ಪುನರಾರಂಭ ಮಾಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಚಿವ ಜಗದೀಶ್ ಶೆಟ್ಟರ್‌ಗೆ ಇದೇ ವೇಳೆ ಮನವಿ ಪತ್ರ ಸಲ್ಲಿಸಲಾಯಿತು. ಅಕ್ಕಲಕೋಟೆ ಶಿವಶರಣ ಮಠದ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಬಿಬಿಎಂಪಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಲ್.ಶಿವಕುಮಾರ್, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ನೇಕಾರರ ರಾಷ್ಟ್ರೀಯ ಸೇವಾ ಟ್ರಸ್ಟ್ ಅಧ್ಯಕ್ಷ ರಘು ಎಸ್.ಶೆಟ್ಟಿಗಾರ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.