ಶುಕ್ರವಾರ, ಡಿಸೆಂಬರ್ 6, 2019
19 °C

ನೇಚರ್ ಫೆಸ್ಟ್‌ನಲ್ಲಿ ನೈಸರ್ಗಿಕ ಆಹಾರ

Published:
Updated:
ನೇಚರ್ ಫೆಸ್ಟ್‌ನಲ್ಲಿ ನೈಸರ್ಗಿಕ ಆಹಾರ

ಸಿಲಿಕಾನ್‌ಸಿಟಿಯ ಬಹುತೇಕ ಮಂದಿಗೆ ಪಿಜ್ಜಾ, ಬರ್ಗರ್, ಸ್ಯಾಂಡ್‌ವಿಚ್ ಇನ್ನಿತರೆ ಜಂಕ್‌ಫುಡ್‌ಗಳು ಇಂದು ನಿತ್ಯದ ಆಹಾರವಾಗಿವೆ. ಬದಲಾದ ಜೀವಶೈಲಿಯಂತೆ ಆಹಾರ ಕ್ರಮವೂ ಬದಲಾಗಿದೆ. ಎಲ್ಲಂದರಲ್ಲಿ ಜಂಕ್‌ಫುಡ್ ಮಳಿಗೆಗಳು ರಾರಾಜಿಸುತ್ತಿವೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ನವರಂಗ್ ಥಿಯೇಟರ್ ಸಮೀಪ ಇತ್ತೀಚೆಗೆ `ನೇಚರ್ ನೆಸ್ಟ್~ ಎಂಬ ಮಳಿಗೆ ಆರಂಭವಾಗಿದೆ. ಇದರ ವಿಶೇಷವೆಂದರೆ ಇಲ್ಲಿ ಸಿಗುವ ಎಲ್ಲಾ ಆಹಾರವೂ ನೈಸರ್ಗಿಕ ಮೂಲದ್ದು. ಇಲ್ಲಿ 18 ವಿಧದ ಸ್ವಾದದಲ್ಲಿ ಎಳನೀರು ಸಿಗುತ್ತದೆ.

`ಔಷಧದಂತೆ ಆಹಾರ ಸೇವಿಸಿ. ಇಲ್ಲವಾದಲ್ಲಿ ನಾಳೆ ಔಷಧಗಳೇ ನಿಮ್ಮ ಆಹಾರವಾದಿತು~ ಎಂಬ ಅಡಿ ಟಿಪ್ಪಣಿಯೊಂದಿಗೆ `ನೇಚರ್ ನೆಸ್ಟ್~ ಮಳಿಗೆ ಆರಂಭವಾಗಿದೆ. ಇಲ್ಲಿ ಹೆಸರು ಕಾಳು, ಕಡಲೆಕಾಳು, ಹಲಸಂದೆ ಮೊದಲಾದ ಮೊಳಕೆ ಕಾಳುಗಳಿಂದ ಮಾಡಿದ ತಿನಿಸುಗಳು ಕೂಡ ದೊರೆಯುತ್ತವೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಒಂದು ಚಿಟಿಕೆಯಷ್ಟೂ ಎಣ್ಣೆ, ಸಕ್ಕರೆ ಬೆರೆಸದ ಆಹಾರವನ್ನು ಮಾರಾಟ ಮಾಡಲಾಗುತ್ತದೆ. ಜೊತೆಗೆ ಹಣ್ಣುಗಳಿಂದಲೇ ಮಾಡಿದ 21 ಬಗೆಯ ಐಸ್‌ಕ್ರೀಂಗಳು, 21 ಬಗೆಯ ಫ್ರೂಟ್ ಸಲಾಡ್‌ಗಳು ಸಿಗುತ್ತವೆ.

ಸಂಜೆಯಾಗುತ್ತಿದ್ದಂತೆ ಬೃಹತ್ ಮಾಲ್‌ಗಳು, ರೆಸ್ಟೋರೆಂಟ್‌ಗಳು, ಕಾಫಿಶಾಪ್‌ಗಳು ತುಂಬಿರುತ್ತವೆ. ಫಾಸ್ಟ್‌ಫುಡ್‌ಗಾಗಿ ಕ್ಯೂ ನಿಂತು ಹಣತೆತ್ತು ಬರುತ್ತಾರೆ. ಕೆಲವು ಕಂಪೆನಿಗಳ ತಂಪು ಪಾನೀಯಗಳಂತೂ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲ ಅಂಶಗಳನ್ನು ಒಳಗೊಂಡಿರುವುದು ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ಎಳನೀರಿನಂಥ ಪೇಯವನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಹಿತವಾಗಿದ್ದು, ರೈತರಿಗೂ ಮಾರುಕಟ್ಟೆ ನೀಡಿದಂತಾಗುತ್ತದೆ ಎನ್ನುತ್ತಾರೆ ನೇಚರ್ ಡ್ರಿಂಕ್ ರಿಟೇಲ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಸಿ. ಗಿರೀಶ್.

ರೈತ ಕುಟುಂಬದಲ್ಲಿ ಹುಟ್ಟಿದ ಗಿರೀಶ್ ರೈತರ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ದೊರೆಕಿಸಿಕೊಡಬೇಕೆಂಬ ಉದ್ದೇಶದಿಂದ ಹೊಸ ಕಲ್ಪನೆಯಲ್ಲಿ ಮಳಿಗೆ ಆರಂಭಿಸಿರುವುದಾಗಿ ಅವರು ಹೇಳುತ್ತಾರೆ.

ರೈತರಿಂದಲೇ ನೇರವಾಗಿ ಹಣ್ಣು, ಎಳನೀರು ಹಾಗೂ ತರಕಾರಿಗಳನ್ನು ಕೊಂಡು ಈ ಮಳಿಗೆಯಲ್ಲಿ ಮಾರಲಾಗುತ್ತದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಗ್ಯಾಸ್ಟ್ರಿಕ್, ಅಲರ್ಜಿ, ಸುಸ್ತು ಇನ್ನಿತರೆ ಕಾಯಿಲೆಗಳನ್ನು ದೂರವಾಗಿಸಲು ಶುಂಠಿ, ಪುದೀನಾ, ತುಳಸಿ, ಕಲ್ಲುನಾರು, ಮೆಣಸು, ನಿಂಬೆಯ ಸ್ವಾದದಲ್ಲಿ ಎಳನೀರು ಇಲ್ಲಿ ಲಭ್ಯವಿದೆ ಎಂಬುದು ಗಿರೀಶ್ ಅಭಿಪ್ರಾಯ.

ರಾಗಿ, ಬತ್ತ, ಗೋಧಿ, ಹತ್ತಿಕಾಳನ್ನು ನೆನೆಸಿ, ಅದಕ್ಕೆ ವಿವಿಧ ಬಗೆಯ ಹಣ್ಣುಗಳನ್ನು  ಸೇರಿಸಿ ಪುಡಿ ಮಾಡಿದ ರಸವನ್ನು ಬೇಯಿಸಿ `ಹರೀರಾ~ವೆಂಬ ಆಹಾರವನ್ನು ತಯಾರಿಸುತ್ತಾರೆ. ಇದು ಪಾಯಸದ ರೀತಿಯಲ್ಲಿದ್ದು, ಇಲ್ಲಿನ ವಿಶೇಷವಾಗಿದೆ.

ಈಗಾಗಲೇ ಜಯನಗರ 6ನೇ ಬ್ಲಾಕ್‌ನಲ್ಲಿ ಇವರ ಮೊದಲ ಮಳಿಗೆ ಆರಂಭವಾಗಿದೆ. ವಿದ್ಯಾರ್ಥಿಗಳಿಗೆ ಶೇ.10ರಷ್ಟು ರಿಯಾಯಿತಿ ಇದ್ದು, ಇಲ್ಲಿನ ಪದಾರ್ಥಗಳ ಬೆಲೆ ಎಲ್ಲರ ಕೈಗೆಟಕುವಂತಿವೆ ಎನ್ನುತ್ತಾರೆ ಗಿರೀಶ್.

ಸ್ಥಳ: ನೇಚರ್ ನೆಸ್ಟ್, ನವರಂಗ್ ಥಿಯೇಟರ್ ಸಮೀಪ, ಎಂ.ಸಿ. ಮೋದಿ ರಸ್ತೆ. ಬೆಳಿಗ್ಗೆ6ರಿಂದ ರಾತ್ರಿ 11ರವರೆಗೆ ಮಳಿಗೆ ತೆರೆದಿರುತ್ತದೆ. ಮಾಹಿತಿಗೆ: 42351727, 99169 19781

ಪ್ರತಿಕ್ರಿಯಿಸಿ (+)