ಬುಧವಾರ, ಮೇ 12, 2021
18 °C

ನೇಣು ಹಾಕಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಹೆಣ್ಣೂರು ಸಮೀಪದ ಅಶ್ವತ್ಥನಗರದಲ್ಲಿ ಭಾನುವಾರ ರಾತ್ರಿ ಸಂಧ್ಯಾ (19) ಎಂಬ ವಿದ್ಯಾರ್ಥಿನಿ ನೇಣು ಹಾಕಿಕೊಂಡಿದ್ದು, ನಂದಿನಿಲೇಔಟ್‌ನ ಒಂದನೇ ಬ್ಲಾಕ್‌ನಲ್ಲಿ ಮಲ್ಲಿಕಾರ್ಜುನ್ (35) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಟ್ಟಡದ ಒಳಾಂಗಣ ವಿನ್ಯಾಸ (ಫ್ಯಾಬ್ರಿಕ್) ಕೆಲಸ ಮಾಡುವ ಪಾರ್ಥೀವನ್ ಮತ್ತು ಅಮುದ ದಂಪತಿಯ ಮಗಳಾದ ಸಂಧ್ಯಾ, ರಿಚ್‌ಮಂಡ್ ರಸ್ತೆಯಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಂ ಓದುತ್ತಿದ್ದರು. ಊಟ ಮುಗಿಸಿಕೊಂಡು ರಾತ್ರಿ 9 ಗಂಟೆ ಸುಮಾರಿಗೆ ತಂಗಿ ದಿವ್ಯ ಜತೆ ಕೋಣೆಗೆ ಹೋದ ಸಂಧ್ಯಾ, ತಂಗಿ ಮಲಗಿದ ನಂತರ ನೇಣು ಹಾಕಿಕೊಂಡಿದ್ದಾರೆ. ಬೆಳಿಗ್ಗೆ ಐದು ಗಂಟೆಗೆ ದಿವ್ಯ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.`ಮಗಳು, ಗೆಳತಿಯ ಅಕ್ಕನ ಮದುವೆಗೆ ಒಂದು ದಿನ ಮುಂಚಿತವಾಗಿ ಹೋಗುವುದಾಗಿ ಹೇಳಿದ್ದಳು. ಆದರೆ, ಅದಕ್ಕೆ ಒಪ್ಪದ ನಾವು, ಮದುವೆ ದಿನವೇ ಹೋಗಬೇಕೆಂದು ಸೂಚಿಸಿದ್ದೆವು. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು' ಎಂದು ಸಂಧ್ಯಾ ಪೋಷಕರು ಪೊಲೀಸ್ ವಿಚಾರಣೆಯಲ್ಲಿ ತಿಳಿಸಿದ್ದಾರೆ.ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ನಂದಿನಿಲೇಔಟ್ ಒಂದನೇ ಬ್ಲಾಕ್‌ನಲ್ಲಿ ಮಲ್ಲಿಕಾರ್ಜುನ್ ಎಂಬುವರು ನೇಣು ಹಾಕಿಕೊಂಡಿದ್ದಾರೆ. ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ರಾತ್ರಿಯೇ ಮನೆಯಲ್ಲಿ ನೇಣು ಹಾಕಿಕೊಂಡಿರುವ ಸಾಧ್ಯತೆ ಇದೆ. ಮೃತರ ತಂದೆ ಬೆಳಿಗ್ಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂದಿನಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವರದಕ್ಷಿಣೆ ಕಿರುಕುಳ: ಸಾವು

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ನಂಜಾಂಬ ಅಗ್ರಹಾರದ ನಿವಾಸಿ ಮಮತಾ (25) ಎಂಬುವರು ಭಾನುವಾರ ರಾತ್ರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಆಟೊ ಚಾಲಕ ಬೈರೇಗೌಡ ಎಂಬುವರ ಪತ್ನಿಯಾದ ಮಮತಾ, ಮೇ 26ರಂದು ಮನೆಯಲ್ಲೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಈ ವೇಳೆ ಸ್ಥಳೀಯರು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಮತಾ, ಭಾನುವಾರ ರಾತ್ರಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.`ಬೈರೇಗೌಡ, ವರದಕ್ಷಿಣೆ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಮಮತಾಳ ಅಕ್ಕ-ಭಾವ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೆಂಪೇಗೌಡನಗರ ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.