ಮಂಗಳವಾರ, ಜೂನ್ 15, 2021
21 °C

ನೇತಾಜಿಯ ಭವಿಷ್ಯ ನಿರ್ಧರಿಸಲಿರುವ ಮುಸ್ಲಿಮರು

ದಿನೇಶ್ ಅಮಿನ್ ಮಟ್ಟು / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ಕಾಲದಲ್ಲಿ ರಾಮ್‌ಪುರದಲ್ಲಿ ಸುತ್ತಾಡುತ್ತಿದ್ದಾಗ ಸಿಕ್ಕಿದ್ದ ಸಮಾಜವಾದಿ ಪಕ್ಷದ ಹೆಚ್ಚಿನ ಕಾರ್ಯಕರ್ತರು `ನೇತಾಜಿ ಬದಲ್‌ಗಯಾ...ಬಹೂತ್ ಬದಲ್‌ಗಯಾ~ (ನೇತಾಜಿ ಬದಲಾಗಿದ್ದಾರೆ, ಬಹಳ ಬದಲಾಗಿದ್ದಾರೆ~) ಎಂದು ಹೇಳುತ್ತಿದ್ದುದನ್ನು ಕೇಳಿದ್ದೆ. ಚಿತ್ರನಟಿ ಜಯಪ್ರದಾ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ರಾಮ್‌ಪುರಕ್ಕೆ ಈ ಬಾರಿ ನಾನು  ಹೋಗಿಲ್ಲ.


ಆಶ್ಚರ್ಯ ಎಂದರೆ ಕಳೆದ ವಾರ ಆಗ್ರಾ-ಆಲಿಗಡ ಪ್ರದೇಶದಲ್ಲಿ  ಸುತ್ತಾಡುತ್ತಿದ್ದಾಗ ಅದೇ ಪಕ್ಷದ ಕಾರ್ಯಕರ್ತರು  `ಹಮಾರಾ ನೇತಾಜಿ ಬದಲ್‌ಗಯಾ~ಎನ್ನುತ್ತಿದ್ದರು. ಕಳೆದ ಬಾರಿ ಸಿಟ್ಟಿನಿಂದ `ಬದಲ್‌ಗಯಾ~ ಎಂದು ಹೇಳುತ್ತಿದ್ದವರು ಈ ಬಾರಿ ಖುಷಿಯಿಂದ ಹೇಳುತ್ತಿದ್ದಾರೆ, ಇಷ್ಟೆ ವ್ಯತ್ಯಾಸ.  ಸಮಾಜವಾದಿ ಪಕ್ಷ `ಗೆಲ್ಲುವ ಕುದುರೆ~ ಎಂದು ಎಲ್ಲರೂ ಅಂದುಕೊಳ್ಳಲು  ಅಭಿಮಾನಿಗಳು `ನೇತಾಜಿ~ ಎಂದು ಕರೆಯುವ ಮುಲಾಯಂಸಿಂಗ್ ಯಾದವ್ ಅವರಲ್ಲಿನ ಬದಲಾವಣೆ~ಯೂ ಕಾರಣ.ಯೌವ್ವನದ ದಿನಗಳಲ್ಲಿ ಸಮಾಜವಾದಿಯಾಗಿ ಶಿಸ್ತಿನ ಜೀವನ ನಡೆಸಿದ್ದ ಮುಲಾಯಂಸಿಂಗ್ ಇಳಿವಯಸ್ಸಿನಲ್ಲಿ ಹಾದಿ ತಪ್ಪಿಬಿಟ್ಟಿದ್ದರು. ಅಮರ್‌ಸಿಂಗ್ ಎಂಬ ರಾಜಕೀಯ ದಲ್ಳಾಳಿಯ ಮೂಲಕ ಬಾಲಿವುಡ್ ನಟ-ನಟಿಯರು ಮತ್ತು ಕೆಲವು ಉದ್ಯಮಿಗಳ ಸಹವಾಸ ಬೆಳೆಸಿ ಅನುಯಾಯಿಗಳಿಂದ ದೂರವಾಗಿ ಬಿಟ್ಟಿದ್ದರು.ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ `ಗೂಂಡಾರಾಜ್~ ಎಂಬ ಕುಖ್ಯಾತಿಗೊಳಗಾಗಿದ್ದ ತಮ್ಮ ಆಡಳಿತದಿಂದಾಗಿ ಅವರು ಹಿನ್ನಡೆ ಅನುಭವಿಸಿದ್ದರು. ಲೋಕಸಭಾ ಚುನಾವಣೆಯ ಕಾಲದಲ್ಲಿ  ಬಾಬ್ರಿಮಸೀದಿ ಧ್ವಂಸದ `ಖಳನಾಯಕ~ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ಸಿಂಗ್ ಜತೆಗಿನ ಮೈತ್ರಿಯಿಂದಾಗಿ ಮುಸ್ಲಿಮರ ವಿಶ್ವಾಸ ಕಳೆದುಕೊಂಡಿದ್ದರು.  ಕೊನೆಯ ಸುತ್ತಿನ ಮತದಾನ ನಡೆಯುವ ಮೊರದಾಬಾದ್, ರಾಮ್‌ಪುರ,ಬರೇಲಿ ಅಮ್ರೊಹಿ ಮೊದಲಾದ ಜಿಲ್ಲೆಗಳನ್ನೊಳಗೊಂಡ ರೋಹಿಲ್‌ಖಂಡ ಪ್ರದೇಶದಲ್ಲಿ ಶೇಕಡಾ 40ರಿಂದ 50ರಷ್ಟು ಮುಸ್ಲಿಮರಿದ್ದಾರೆ. ಇದರಿಂದಾಗಿ ಇದು ಸಮಾಜವಾದಿ ಪಕ್ಷದ ಕೋಟೆಯೆಂದೇ ಹೇಳಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಯಪ್ರದಾ ಸ್ಪರ್ಧಿಸಿದ್ದ ರಾಮ್‌ಪುರ ಬಿಟ್ಟರೆ ಈ ಭಾಗದ ಬಹುತೇಕ ಲೋಕಸಭಾ ಸ್ಥಾನಗಳನ್ನು ಸಮಾಜವಾದಿ ಪಕ್ಷ ಕಳೆದುಕೊಂಡಿತ್ತು.ಇದಕ್ಕೆ ಕಾರಣವಾಗಿದ್ದು ಸಮಾಜವಾದಿ ಪಕ್ಷದ ರಾಜಕೀಯ ಬುನಾದಿಯಾದ ಯಾದವ್-ಮುಸ್ಲಿಮ್ ಕೂಟದಲ್ಲಿ ಕಾಣಿಸಿಕೊಂಡಿದ್ದ ಬಿರುಕು. ಇದನ್ನು ಕಟ್ಟಲು ಮುಲಾಯಂಸಿಂಗ್‌ಗೆ ಪ್ರಾರಂಭದ ದಿನಗಳಿಂದಲೇ ನೆರವಾಗಿದ್ದವರು ಅಜಮ್‌ಖಾನ್. ಜನ `ರಾಮ್-ರಹೀಮ್~ ಎಂದು ಜನ ಕರೆಯುವಷ್ಟು ಅವರು ಆಪ್ತಮಿತ್ರರಾಗಿದ್ದವರು.ಅಮರ್‌ಸಿಂಗ್ ಎಂಬ ರಾಜಕೀಯ ದಲ್ಲಾಳಿಯ ಸಂಗಕ್ಕೆ ಬಿದ್ದ ಮುಲಾಯಂ ಗೆಳೆಯ ಖಾನ್ ಅವರನ್ನು ದೂರ ಮಾಡಿದ್ದರು, ಇವೆಲ್ಲ ಕಾರಣಗಳಿಂದಾಗಿ ಮುಲಾಯಂಸಿಂಗ್ ಅವರ ರಾಜಕೀಯ ಮುಗಿಯಿತು ಎಂದು ಬಹಳಷ್ಟು ಮಂದಿ ಶ್ರದ್ದಾಂಜಲಿ ಅರ್ಪಿಸಿಬಿಟ್ಟಿದ್ದರು.ರಾಜಕೀಯವನ್ನು `ಸಾಧ್ಯತೆಯ ಕಲೆ~ಎಂದು ಹೇಳುವುದು ಇದಕ್ಕೆ ಇರಬೇಕು. ಒಮ್ಮಮ್ಮೆ ಆಗಬೇಕಾಗಿರುವುದೆಲ್ಲ ಸರಿಯಾದ ಕಾಲಕ್ಕೆ  ಘಟಿಸಿಬಿಡುತ್ತವೆ. ಮುಲಾಯಂಸಿಂಗ್ ಅವರಿಗೆ ಏನನಿಸಿತೋ ಏನೋ, ಒಂದು ನಿರ್ಧಾರಕ್ಕೆ ಬಂದು ಎಲ್ಲ ಹೊಸಸ್ನೇಹಿತರಿಂದ  ಕಳಚಿಕೊಂಡುಬಿಟ್ಟರು.ಹಳೆಯ ಗೆಳೆಯ ಅಜಮ್‌ಖಾನ್ ಅವರನ್ನು ಮರಳಿ ಕರೆಸಿಕೊಂಡರು, ಕಲ್ಯಾಣ್‌ಸಿಂಗ್ ಅವರನ್ನೂ ಬಿಟ್ಟುಬಿಟ್ಟರು. ಅಷ್ಟರಲ್ಲಿ ಮಗ ಅಖಿಲೇಶ್ ಸಿಂಗ್ ಸರಿಯಾದ ಕಾಲಕ್ಕೆ ಬಂದು ಅಪ್ಪನಿಗೆ ಆಸರೆಯಾಗಿ ನಿಂತ. ಈ ಮೂಲಕ  ಜೀವದಾನ ಪಡೆದ ಮುಲಾಯಂಸಿಂಗ್ ಹೊಸ ಹುರುಪಿನಿಂದ ತನ್ನ ರಾಜಕೀಯ ಜೀವನದ ಎರಡನೆ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಅನುಕೂಲಕರವಾದ ಹಲವು ಅಂಶಗಳಿವೆ. ಮೊದಲನೆಯದಾಗಿ ಐದು ವರ್ಷಗಳ ಕಾಲ ವಿರೋಧಪಕ್ಷದ ಸ್ಥಾನದಲ್ಲಿ ಕೂತಿದ್ದ ಸಮಾಜವಾದಿ ಪಕ್ಷ ಕಳೆದ ವಿಧಾನಸಭಾ ಚುನಾವಣೆಯ ಕಾಲದ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿಲ್ಲ. ಇದರಿಂದಾಗಿ ಕಳೆದ ಬಾರಿ ರಕ್ಷಣಾತ್ಮಕವಾಗಿದ್ದ ಪ್ರಚಾರ ಈ ಬಾರಿ ಆಕ್ರಮಣಕಾರಿಯಾಗಿದೆ.ಎರಡನೆಯದಾಗಿ ಮತದಾರರಲ್ಲಿ ಶೇಕಡಾ  50ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ 40 ವರ್ಷದೊಳಗಿನ ಯುವ ಮತದಾರರನ್ನು ಸೆಳೆಯುವ ಯುವನಾಯಕತ್ವ ಅಖಿಲೇಶ್‌ಸಿಂಗ್ ಮೂಲಕ ಪಕ್ಷಕ್ಕೆ ಸಿಕ್ಕಿಬಿಟ್ಟಿದೆ. ಮಗನ ಮಾತಿಗೆ ಮಣಿದು  ಇಂಗ್ಲಿಷ್ ಮತ್ತು ಕಂಪ್ಯೂಟರ್ ಬಗೆಗಿನ ವಿರೋಧವನ್ನು ಮುಲಾಯಂ ಕೈಬಿಟ್ಟಿರುವ ಕಾರಣ ಪುರಾತನ ಕಾಲದ ಪಕ್ಷ ಎಂಬ ಇಮೇಜ್ ನಿಧಾನವಾಗಿ ಅಳಿಸಿಹೋಗುತ್ತಿದೆ.ಈಗ ಅಪ್ಪ ತನ್ನ ಹಳೆಯ ಮತದಾರರನ್ನು ಹುಡುಕಿಕೊಂಡು ಹೋಗಿ ಜತೆಯಲ್ಲಿ ಕರೆದುಕೊಂಡು ಬರುತ್ತಿದ್ದರೆ, ಮಗ ಹೊಸ ಮತದಾರರನ್ನು ತಂದು ಸೇರಿಸುತ್ತಿದ್ದಾರೆ.  ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳು ಪಕ್ಷದಲ್ಲಿದ್ದರೂ ಡಿ.ಪಿ.ಯಾದವ್‌ನಂತಹ ಕುಖ್ಯಾತರನ್ನು ಹೊರಗಿಡುವ ಮೂಲಕ ಅಖಿಲೇಶ್‌ಸಿಂಗ್ ನೀಡಿದ ಸಂದೇಶದಿಂದಾಗಿ ಅದಕ್ಕೆ ಇದ್ದ `ಗೂಂಡಾಗರ್ದಿ ಕಾ ಪಾರ್ಟಿ~ ಎಂಬ ಕಳಂಕವೂ ಕಡಿಮೆಯಾಗಿದೆ.ನಾಲ್ಕನೆಯದಾಗಿ ಈ ಚುನಾವಣೆಯಲ್ಲಿ ಬಹುಜನಸಮಾಜ ಪಕ್ಷವೊಂದನ್ನು ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಸದಸ್ಯಬಲವನ್ನು ಹೆಚ್ಚಿಸಿಕೊಳ್ಳಲಿರುವುದು ಖಾತರಿಯಾದರೂ ಸಮಾಜವಾದಿ ಪಕ್ಷಕ್ಕೆ ಹೆಚ್ಚಿನ ಅನುಕೂಲ ಇದೆ.ಕಾಂಗ್ರೆಸ್ ತನ್ನ ಖಾತೆಯನ್ನು 22 ಸದಸ್ಯರು ಮತ್ತು ಶೇಕಡಾ 8ರಷ್ಟು ಮತಗಳಿಂದ ಹಾಗೂ  ಬಿಜೆಪಿ 51 ಸದಸ್ಯರು ಮತ್ತು ಶೇಕಡಾ 16ರಷ್ಟು ಮತಗಳಿಂದ ಪ್ರಾರಂಭಿಸಬೇಕಾದರೆ ಸಮಾಜವಾದಿ ಪಕ್ಷ 97 ಸದಸ್ಯರು ಮತ್ತು ಶೇಕಡಾ 25.93ರಷ್ಟು ಮತಗಳಿಂದ ಪ್ರಾರಂಭಿಸಲಿದೆ.2002ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 25.37ರಷ್ಟು ಮತಗಳಿಂದ 143 ಸ್ಥಾನಗಳಿಸಿದ್ದ ಸಮಾಜವಾದಿ ಪಕ್ಷ ಕಳೆದ ಚುನಾವಣೆಯಲ್ಲಿ ಮತಗಳಿಕೆಯನ್ನು ಶೇಕಡಾ ಅರ್ಧದಷ್ಟು ಹೆಚ್ಚಿಸಿಕೊಂಡರೂ ಸದಸ್ಯರ ಸಂಖ್ಯೆ ಮಾತ್ರ 97ಕ್ಕೆ ಇಳಿದಿತ್ತು.ಇದಕ್ಕೆ ಮುಖ್ಯ ಕಾರಣ ಈ ಪಕ್ಷದ ಬಹಳಷ್ಟು ಅಭ್ಯರ್ಥಿಗಳು ಐದು ಸಾವಿರಮತಗಳೊಳಗಿನ ಅಂತರದಲ್ಲಿ ಸೋತಿರುವುದು. ಈ ರೀತಿ ಕಳೆದುಕೊಂಡ ನಿರ್ಣಾಯಕ ಮತಗಳು ಮುಸ್ಲಿಮರದ್ದು ಎಂದು ಸಮಾಜವಾದಿ ಪಕ್ಷ ತಿಳಿದುಕೊಂಡಿದೆ.ಆದುದರಿಂದ ರಾಜ್ಯದ ಸರಾಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಮ್ ಜನಸಂಖ್ಯೆ ಇರುವ 130 ಕ್ಷೇತ್ರಗಳಲ್ಲಿ ಸರಾಸರಿ ನಾಲ್ಕೈದು ಸಾವಿರ ಮುಸ್ಲಿಮ್ ಮತದಾರರು ಪಕ್ಷವನ್ನು ಮರಳಿ ಬೆಂಬಲಿಸಿದರೆ ನಿರಾಯಾಸವಾಗಿ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ವಿಶ್ವಾಸ ಆ ಪಕ್ಷದ್ದು. ಮೇಜಿನ ಮೇಲಿನ ಲೆಕ್ಕಾಚಾರ ಈ ಪಕ್ಷದ ಪರವಾಗಿಯೇ ಇದೆ.ಆದರೆ ಮೀಸಲಾತಿಯ ಆಶ್ವಾಸನೆಯೂ ಸೇರಿದಂತೆ ಓಲೈಕೆಯ ಎಲ್ಲ ತಂತ್ರಗಳನ್ನೂ ಹೂಡಿರುವ ಕಾಂಗ್ರೆಸ್ ಕೂಡಾ ಮುಸ್ಲಿಮ್ ಮತದಾರರ ಮೇಲೆಯೇ ಕಣ್ಣಿಟ್ಟಿದೆ. ಇದರ ಜತೆಗೆ ಹತ್ತಾರು ಸ್ಥಳೀಯ ಮುಸ್ಲಿಮ್ ಪಕ್ಷಗಳು ಒಂದಷ್ಟು ಮತಗಳನ್ನು ತಿಂದುಹಾಕಲಿವೆ.ಇದರಿಂದಾಗಿ ಮುಲಾಯಂಸಿಂಗ್ ನಿರೀಕ್ಷಿಸಿದಷ್ಟು ಮುಸ್ಲಿಮ್ ಮತಗಳು ಅವರ ಬುಟ್ಟಿಗೆ ಬಂದು ಬೀಳದೆ ಹೋದರೆ? ಈ ಪ್ರಶ್ನೆಗೆ ಪಕ್ಷದ ನಾಯಕರಲ್ಲಿಯೂ ಉತ್ತರ ಇಲ್ಲ, ಹೆಚ್ಚುವರಿ ಮತಗಳನ್ನು ತಂದುಕೊಡಬಲ್ಲ ಬೇರೆ ಮೂಲಗಳೂ ಆ ಪಕ್ಷದಲ್ಲಿ ಇಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.