ನೇತ್ರದಾನ ಜಾಗೃತಿಗೆ ಹಿಮ್ಮುಖ ನಡಿಗೆ

7

ನೇತ್ರದಾನ ಜಾಗೃತಿಗೆ ಹಿಮ್ಮುಖ ನಡಿಗೆ

Published:
Updated:

ಕಾರವಾರ: ನೇತ್ರದಾನ ಜಾಗೃತಿಗಾಗಿ ಮುಂಬೈನ ಪ್ರಭಾದೇವಿ ನಿವಾಸಿ ತುಕಾರಾಮ್ ಚಂಗು ಮೋಕಲ್, ತಮ್ಮ ಮೂವರು ಸ್ನೇಹಿತರೊಂದಿಗೆ ಮುಂಬೈನಿಂದ ಕೇರಳ ರಾಜ್ಯದ ಕಾಸರಗೋಡಿನವರೆಗೆ ಅಂದಾಜು 1085 ಕಿಲೋಮೀಟರ್ ಹಿಮ್ಮುಖ ನಡಿಗೆ ಕೈಗೊಂಡಿದ್ದಾರೆ. ಗೋವಾ ಗಡಿಯ ಮೂಲಕ ಶುಕ್ರವಾರ ರಾತ್ರಿ ಕಾರವಾರಕ್ಕೆ ಆಗಮಿಸಿದ ತುಕಾರಾಮ ಮೋಕಲ್, ರಾಜೇಂದ್ರಪ್ರಸಾದ ಶರ್ಮಾ, ಪ್ರಶಾಂತ್ ಪಾಟೀಲ ಹಾಗೂ ಸೂರ್ಯಕಾಂತ್ ಪಾಟೀಲ ತಾಲ್ಲೂಕಿನ ಮಾಜಾಳಿಯಲ್ಲಿ ರಾತ್ರಿ ಉಳಿದು, ಶನಿವಾರ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅವರನ್ನು ಭೇಟಿ ಮಾಡಿ ಕೆಲಹೊತ್ತು ಕಳೆದು ಪ್ರಯಾಣ ಬೆಳೆಸಿದರು.ತುಕುರಾಮ್ ಮೋಕಲ್ ಹಿಮ್ಮುಖವಾಗಿ ನಡೆದರೆ ಅವರೊಂದಿಗಿರುವ ಮೂವರು ಸಾಮಾನ್ಯರಂತೆ ನಡೆದು ತುಕಾರಾಮ್ ಅವರಿಗೆ ಮಾರ್ಗದರ್ಶನ ನೀಡುತ್ತಾರೆ. ಡಿ. 26ರಿಂದ ಇವರು ಹಿಮ್ಮುಖ ನಡಿಗೆ ಪ್ರಾರಂಭಿಸಿದ್ದು, ಒಂದು ತಿಂಗಳೊಳಗೆ ನಡಿಗೆ ಪೂರ್ಣಗೊಳಿಸುವ ಗುರಿ ಹೊಂದಿದ್ದಾರೆ. ‘ಶಿಲೇದಾರ ಪಾಯಿ ಪ್ರವಾಸಿ’ ಸಂಘ ಕಟ್ಟಿಕೊಂಡಿರುವ ತುಕಾರಾಮ 1990ರಲ್ಲಿ ಪ್ರಥಮ ಬಾರಿಗೆ ಮುಂಬೈನಿಂದ ರಾಯಗಡಕ್ಕೆ ಹಿಮ್ಮುಖ ನಡಿಗೆ ಕೈಗೊಂಡರು. ನಂತರ ಸಮಾಜಕ್ಕೇನಾದರು ಕೊಡುಗೆ ನೀಡಬೇಕು ಎಂದು ನೇತ್ರದಾನ ಜಾಗೃತಿ ಮೂಡಿಸಲು 1995ರಲ್ಲಿ ಮುಂಬೈನಿಂದ ಪ್ರತಾಪಗಡ, 2001 ಮುಂಬೈನಿಂದ ಅಹಮದಾಬಾದ್, 2006ರಲ್ಲಿ ಮುಂಬೈನಿಂದ ಗೋವಾ, 2007ರಲ್ಲಿ ಮುಂಬೈನಿಂದ ಬೆಳಗಾವಿ, 2008ರಲ್ಲಿ ಮುಂಬೈನಿಂದ ಇಂದೋರ್‌ಗೆ ಹಿಮ್ಮುಖ ನಡಿಗೆ ಕೈಗೊಂಡಿದ್ದಾರೆ.ಮುಂಬೈನಿಂದ ಕಾರವಾರದ ವರೆಗೆ ಒಟ್ಟು 550 ಕಿಲೋಮೀಟರ್ ದೂರ ನಡೆದು ಬಂದಿರುವ ತುಕಾರಾಮ್, ಪ್ರತಿದಿನ 30ರಿಂದ 35 ಕಿಲೋಮೀಟರ್ ನಡೆದು ವಿಶ್ರಾಂತಿ ಪಡೆಯುತ್ತಾರೆ. ಹಿಮ್ಮುಖವಾಗಿಯೂ ಸಾಮಾನ್ಯರಂತೆ ವೇಗವಾಗಿ ನಡೆಯುವ 51 ವರ್ಷದ ತುಕಾರಾಮ್ ಅವರಿಗೆ ಹಾಗೂ ಅವರ ಸ್ನೇಹಿತರಿಗೆ ದಾರಿ ಮಧ್ಯೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಕಾಡಿಲ್ಲ.ದಾರಿ ನಡುವೆ ಶಾಲಾ-ಕಾಲೇಜು ಸಿಕ್ಕರೆ ಅಲ್ಲಿಗೆ ತೆರಳಿ ನೇತ್ರದಾನ ಬಗ್ಗೆ ಕೆಲಹೊತ್ತು ಭಾಷಣ ಮಾಡಿ ಮುಂದೆ ಹೋಗುತ್ತಾರೆ. ರಾಷ್ಟ್ರೀಯ ಹೆದ್ದಾರಿ-17ರಲ್ಲಿ ತುಕಾರಾಮ ಹಿಮ್ಮುಖವಾಗಿ ನಡೆಯುತ್ತಿರುವುದನ್ನು ವಾಹನ ಸವಾರರು, ಪಾದಚಾರಿಗಳು ನೋಡುತ್ತ ಮುಂದೆ ಹೋಗುತ್ತಿರುವ ಸಾಮಾನ್ಯವಾಗಿತ್ತು. “ಸಾಮಾನ್ಯರಂತೆ ನಡೆಯುತ್ತ ಹೋದರೆ ಜನರ ಆಕರ್ಷಣೆ ಕಡಿಮೆ. ಹಿಮ್ಮುಖವಾಗಿ ನಡೆದರೆ ಜನರು ನೋಡಿ ಹತ್ತಿರ ಬರುತ್ತಾರೆ. ಆಗ ನೇತ್ರದಾನದ ಬಗ್ಗೆ ಅವರಿಗೆ ಮಾಹಿತಿ ನೀಡುತ್ತೇವೆ.ಯಾವುದೇ ದಾಖಲೆ ಅಥವಾ ಸಾಧನೆ ಮಾಡಬೇಕು ಎನ್ನುವ ಇರಾದೆ ನನಗಿಲ್ಲ’ ಎನ್ನುತ್ತಾರೆ ತುಕಾರಾಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry