ಸೋಮವಾರ, ಮೇ 17, 2021
28 °C

ನೇತ್ರದೋಷ ಮುಕ್ತ ಉತ್ತರ ಕರ್ನಾಟಕ ಯೋಜನೆ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ವಯೋಸಹಜವಾಗಿ ಅಥವಾ ಅನಿವಾರ್ಯ ಕಾರಣದಿಂದ ದೃಷ್ಟಿ ದೋಷಕ್ಕೆ ಒಳಗಾಗುವ ಉತ್ತರ ಕರ್ನಾಟಕದ ಬಡ ಜನತೆಗೆ ಪ್ರತಿ ಬುಧವಾರ ಜಿಲ್ಲೆಯ ತೋರಣಗಲ್ ಬಳಿಯ ಜೆಎಸ್‌ಡಬ್ಲ್ಯೂ ಸ್ಟೀಲ್ ಕಾರ್ಖಾನೆಯ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸೆ ಸೌಲಭ್ಯ ದೊರೆಯಲಿದೆ.ಕಳೆದ ಬುಧವಾರ ಇಂತಹ ಒಂದು ಯೋಜನೆಗೆ ಚಾಲನೆ ನೀಡಲಾಗಿದ್ದು, ಕಣ್ಣಿನ ಪೊರೆ ದೋಷದಿಂದ (ಕ್ಯಾಟರ‌್ಯಾಕ್ಟ್) ಬಳಲುವ ಬಡಜನತೆಗೆ ನೇತ್ರ ತಪಾಸಣೆ,  ಶಸ್ತ್ರಚಿಕಿತ್ಸೆ, ಮೂರು ದಿನಗಳ ಅವಧಿಯ ಆರೈಕೆ, ಔಷಧಿ, ಕಪ್ಪು ಕನ್ನಡಕ ವಿತರಣೆ ಯನ್ನು ಉಚಿತವಾಗಿ ಪೂರೈಸುವ ನಿರಂತರ ಶಿಬಿರವನ್ನು ಜೆಎಸ್‌ಡಬ್ಲ್ಯೂ ಪ್ರತಿಷ್ಠಾನದಿಂದ ಆರಂಭಿಸಲಾಗಿದೆ.ತಜ್ಞ ವೈದ್ಯರನ್ನೊಳಗೊಂಡ ತಂಡವು ರೋಗಿಗಳ ನೇತ್ರ ತಪಾಸಣೆ ನಡೆಸಿ, ಅಗತ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಿದೆ.ವಿಶೇಷವಾಗಿ ಬಳ್ಳಾರಿ ಜಿಲ್ಲೆಯನ್ನು ಕಣ್ಣಿನ ಪೊರೆ ದೋಷದಿಂದ  ಮುಕ್ತವನ್ನಾಗಿಸುಸಲೆಂದೇ ಕಳೆದ ವರ್ಷ ವಿಶೇಷ ಯೋಜನೆಯೊಂದನ್ನು ರೂಪಿಸಿದ್ದ ಪ್ರತಿಷ್ಠಾನದಿಂದ 2010ರಲ್ಲಿ 194 ಜನರಿಗೆ ಈ ಸೌಲಭ್ಯ ದೊರೆತಿದೆ.ಪ್ರಸಕ್ತ ಸಾಲಿನಲ್ಲಿ ಈವರೆಗೆ 133 ಜನರ ನೇತ್ರ ತಪಾಸಣೆ ಮಾಡಿ, ಶಸ್ತ್ರಚಿಕಿತ್ಸೆ ನೀಡಲಾಗಿದೆ. ಇದೀಗ ಕಳೆದ ಬುಧವಾರದಿಂದ ಉತ್ತರ ಕರ್ನಾಟಕಕ್ಕೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ.ಕಳೆದ ವಾರ ಈ ಯೋಜನೆ ಆರಂಭವಾಗುತ್ತಿದ್ದಂತೆಯೇ ಒಟ್ಟು 300 ಜನ ಬಡವರು ತಮ್ಮ ಹೆಸರು ನೋಂದಾಯಿಸಿದ್ದು, ಅವರಲ್ಲಿ ಈಗಾಗಲೇ 50 ಜನರಿಗೆ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಇನ್ನೂ 24 ಜನರ ಶಸ್ತ್ರಚಿಕಿತ್ಸೆ ನಡೆಯಬೇಕಿದೆ.ಪ್ರತಿ ಬುಧವಾರದಂದು ಈ ಯೋಜನೆ ಅಡಿ ಶಿಬಿರ ನಡೆಯಲಿದ್ದು, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರ, ಧಾರವಾಡ, ಹಾವೇರಿ, ವಿಜಾಪುರ, ಬಾಗಲಕೋಟೆ, ಬೆಳಗಾವಿ, ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಯ ಬಡಜನತೆ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ಔಷಧಿ, ಕನ್ನಡಕ, ಆರೈಕೆ, ಊಟ- ತಿಂಡಿಗೆ ಹಲವು ಸಾವಿರ ರೂಪಾಯಿ ವೆಚ್ಚ ಮಾಡುವುದು ದುಸ್ತರವಾಗಿರುವುದರಿಂದ ಬಡಜನತೆ ದೋಷದೊಂದಿಗೇ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಅಂಥವರಿಗೆಲ್ಲ ಸೂಕ್ತ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ.

 

ರೋಗಿ ಹಾಗೂ ಅವರೊಂದಿಗೆ ಒಬ್ಬರಿಗೆ ಉಚಿತ ಊಟ- ತಿಂಡಿ, ವಸತಿ ಸೌಲಭ್ಯವನ್ನೂ ನೀಡಲಾಗುತ್ತದೆ ಎಂದು ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥ ಬ್ರಿಗೇಡಿಯರ್ ಇನಾಯತ್, ಸಂಪರ್ಕಾಧಿಕಾರಿ ಪವನ್‌ಕುಮಾರ್ ರೆಡ್ಡಿ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.