ಗುರುವಾರ , ಜೂನ್ 17, 2021
27 °C

ನೇತ್ರಾವತಿಗಾಗಿ ಘರ್ಷಣೆ ಬೇಡ: ಪೇಜಾವರ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇತ್ರಾವತಿಗಾಗಿ ಘರ್ಷಣೆ ಬೇಡ: ಪೇಜಾವರ ಶ್ರೀ

ತುಮಕೂರು: ಕರ್ನಾಟಕ- ತಮಿಳುನಾಡು ನಡುವೆ ಕಾವೇರಿ ವಿವಾದ ಘರ್ಷಣೆಗೆ ಕಾರಣವಾದಂತೆ ಕರಾವಳಿ ಮತ್ತು ಬಯಲುಸೀಮೆ ಕನ್ನಡಿಗರ ನಡುವಿನ ಘರ್ಷಣೆಗೆ ನೇತ್ರಾವತಿ ಕಾರಣವಾಗವುದು ಬೇಡ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ಮಾಡಿದರು.ನಾಗರಿಕ ವೇದಿಕೆ ಶನಿವಾರ ಆಯೋಜಿಸಿದ್ದ `ಗುರುವಂದನೆ~ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ, ಯೋಜನೆಯಿಂದ ಪ್ರಕೃತಿ ಮೇಲಾಗುವ ಪರಿಣಾಮಗಳ ಅಧ್ಯಯನದ ನಂತರ ಮಾತ್ರ ಸ್ಪಷ್ಟ ನಿಲುವು ಪ್ರಕಟಿಸಲು ಸಾಧ್ಯ ಎಂದರು.ಕರಾವಳಿ, ಬಯಲುಸೀಮೆ ಎರಡೂ ಪ್ರದೇಶಕ್ಕೆ ನ್ಯಾಯ ದೊರಕುವಂತೆ ಮಾಡಲು ಸರ್ವ ಪ್ರಯತ್ನ ಮಾಡುತ್ತೇನೆ. ಕರ್ನಾಟಕ ಒಡೆಯಲು ನೇತ್ರಾವತಿ ಎಂದಿಗೂ ನೆಪವಾಗಬಾರದು ಎಂದು ಹೇಳಿದರು.ರಾಜಕಾರಿಣಿಗಳು ಇಂದು ಸೇವೆಯ ಪಾಠ ಮರೆತು ಸ್ವಾರ್ಥದ ಪಾಠ ಕಲಿತಿದ್ದಾರೆ. ಹೀಗಾಗಿ ಹಣ ಮಾಡಲು, ಜನರನ್ನು ಶೋಷಿಸಲು ಸೇವೆ ಒಂದು ಸೋಗು ಆಗುತ್ತಿದೆ ಎಂದು ವಿಶ್ಲೇಷಿಸಿದರು.ಪಾವಗಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಜಪಾನಂದಜಿ ಮಹಾರಾಜ್ ಮಾತನಾಡಿ, ಪಾವಗಡದ ಜನ ಒಂದು ಲೋಟ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಬೆಂಗಳೂರಿಗೆ ಪಾದಯಾತ್ರೆ ಹೋಗಿದ್ದಾರೆ. ಕಳೆದ 65 ವರ್ಷದಲ್ಲಿ ನಮಗೆ ಒಂದು ಲೋಟ ನೀರು ಕೊಡಲೂ ನಮ್ಮನ್ನು ಆಳುವವರಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.`ನೀರಿಗಾಗಿ ಭಿಕ್ಷೆ ಕೇಳಲು ಇಲ್ಲಿಗೆ ಬಂದಿಲ್ಲ. ನಮಗೆ ಬೇಕಾದ ಸೌಲಭ್ಯ ಒದಗಿಸುವುದು ನಮ್ಮನ್ನಾಳುವವರ ಕರ್ತವ್ಯ. ಸೇವೆಗಾಗಿ ಬಳಕೆಯಾಗಬೇಕಿದ್ದ ರಾಜಕೀಯ ಅಧಿಕಾರ ಸುಖಲೋಲುಪತೆಗಾಗಿ ಬಳಕೆಯಾಗುತ್ತಿದೆ. ದೇಶದ ಸಮಸ್ಯೆ ಅರಿಯದೆ ಆಕಾಶದತ್ತ ಮುಖ ನೆಟ್ಟು ಆಡಳಿತ ಮಾಡುವವರಿಂದ ನಮಗೆ ಇಂಥ ದುರ್ದೆಸೆ ಬಂದಿದೆ~ ಎಂದು ರಾಜಕಾರಿಣಿಗಳನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.`ಬಡವರ ಮೇಲೆ ಅಧಿಕಾರಸ್ಥರ ಸವಾರಿ ನಿಲ್ಲಬೇಕು. ಪರಿಸ್ಥಿತಿ ಬದಲಾಗಲು ಕ್ರಾಂತಿ ಆಗಬೇಕು. ನವಭಾರತ ನಿರ್ಮಾಣದ ಸಂಕಲ್ಪ ತೊಟ್ಟು ಯುವಕರು ಶ್ರಮಿಸಬೇಕು~ ಎಂದರು.ವಿಶ್ವೇಶತೀರ್ಥರನ್ನು ಅಭಿನಂದಿಸಿದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಯಾವುದೇ ಮಠ ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಪರ ಇರುವುದಿಲ್ಲ. ಸಮಾಜದ ಸಮಗ್ರ ಅಭಿವೃದ್ಧಿಗೆ ಸನ್ಯಾಸಿಗಳು ತಮ್ಮ ಬದುಕನ್ನು ಮೀಸಲಿಟ್ಟಿರುತ್ತಾರೆ. ಸದೃಢ ಸಮಾಜ ನಿರ್ಮಾಣಕ್ಕೆ ಭಾರತೀಯತೆಯ ಜಾಗೃತಿಯೊಂದೇ ದಾರಿ ಎಂದು ಅಭಿಪ್ರಾಯಪಟ್ಟರು.ಸಂಸದ ಜಿ.ಎಸ್.ಬಸವರಾಜ್, ಶಾಸಕರಾದ ಟಿ.ಬಿ.ಜಯಚಂದ್ರ, ಎಸ್.ಶಿವಣ್ಣ, ಬಿ.ಸಿ.ನಾಗೇಶ್, ಡಾ.ಎಂ.ಆರ್.ಹುಲಿನಾಯ್ಕರ್, ಕೃಷ್ಣ ಮಂದಿರದ ಟ್ರಸ್ಟಿ ನೇರಂಬಳ್ಳಿ ರಾಘವೇಂದ್ರರಾವ್, ಅಭಿನಂದನಾ ಸಮಿತಿ ಅಧ್ಯಕ್ಷ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.`ನೀರು ಹರಿಸಲು ಅಡ್ಡಿಪಡಿಸಲ್ಲ~

ತುಮಕೂರು: `ನಾನು ಕೇವಲ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಇಡಿ ರಾಜ್ಯವನ್ನು ನನ್ನದು ಎಂದುಕೊಂಡಿದ್ದೇನೆ. ಇಲ್ಲಿನ ಬರ ಪರಿಸ್ಥಿತಿ ಸುಧಾರಿಸಬೇಕೆಂಬ ಆಶಯ ನನ್ನಲ್ಲೂ ಇದೆ~ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.ನಗರದ ನಾಗರಿಕ ವೇದಿಕೆ ಶನಿವಾರ ಆಯೋಜಿಸಿದ್ದ `ಗುರು ವಂದನೆ~ಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಸ್ವಾಮೀಜಿ ಅವರೊಂದಿಗೆ ಸಂಸದ ಜಿ.ಎಸ್.ಬಸವರಾಜ್ ನೇತೃತ್ವದಲ್ಲಿ ವಿವಿಧ ಪಕ್ಷಗಳು ಮತ್ತು ಸಂಘಟನೆಗಳ ಮುಖಂಡರು ಪರಮಶಿವಯ್ಯ ವರದಿ ಜಾರಿ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು.`ನೇತ್ರಾವತಿ ಹರಿವಿಗೆ ಧಕ್ಕೆ ತಾರದಂತೆ ಅಲ್ಲಿಂದ ನೀರು ತರುವುದಿದ್ದರೆ ನನ್ನ ಅಭ್ಯಂತರ ಏನೇನೂ ಇಲ್ಲ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪರಿಸರವಾದಿಗಳು, ತಂತ್ರಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ. ಈ ಯೋಜನೆಗೆ ನಾನು ಅಡ್ಡಗಾಲಾಗಿದ್ದೇನೆ ಎಂಬ ಅಭಿಪ್ರಾಯ ಸಂಪೂರ್ಣ ಸುಳ್ಳು~ ಎಂದು ಹೇಳಿದರು.ಯೋಜನೆ ಕುರಿತು ಸ್ವಾಮೀಜಿಗೆ ವಿವರಿಸಿದ ಸಂಸದ ಜಿ.ಎಸ್.ಬಸವರಾಜ್, `ತಮ್ಮ ಅಧ್ಯಕ್ಷತೆಯಲ್ಲಿ ಕರಾವಳಿ, ಬಯಲುಸೀಮೆ ರೈತ ಪ್ರತಿನಿಧಿಗಳು, ನೀರಾವರಿ ಹೋರಾಟ ಸಮಿತಿ ಮುಖಂಡರ ಸಭೆ ಕರೆಯಿರಿ. ಪರಮಶಿವಯ್ಯ ವರದಿಯ ಸಾಧಕ- ಬಾಧಕಗಳನ್ನು ಚರ್ಚಿಸೋಣ. ಕರಾವಳಿ ಪ್ರದೇಶಕ್ಕೂ ಬೇಸಿಗೆಯಲ್ಲಿ ನೀರೊದಗಿಸುವ ವಿಚಾರ ಸೇರಿದಂತೆ ಯೋಜನೆಯ ಸಂಪೂರ್ಣ ಅಂಶಗಳನ್ನು ಪರಾಮರ್ಶಿಸೋಣ~ ಎಂದು ವಿನಂತಿಸಿದರು.`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಸೇರಿದಂತೆ ಹಲವು ರಾಜಕೀಯ ನಾಯಕರು ಯೋಜನೆ ಜಾರಿಗೆ ವಿಶ್ವೇಶತೀರ್ಥ ಸ್ವಾಮೀಜಿ, ವೀರಂದ್ರ ಹೆಗ್ಗಡೆ ಅವರ ವಿರೋಧವಿದೆ ಎಂದು ಹೇಳುತ್ತಿದ್ದಾರೆ.ಬಯಲುಸೀಮೆಯಲ್ಲಿರುವ ನಾವೂ ಕೃಷ್ಣನ ಭಕ್ತರೇ ಆಗಿದ್ದೇವೆ. ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುವ ನೀರಿನಲ್ಲಿ ಕೇವಲ ಶೇ. 10ರಷ್ಟು ನೀರನ್ನು ಇತ್ತ ತಿರುಗಿಸಿ ಎಂಬ ನಮ್ಮ ವಿನಂತಿಯನ್ನು ನೀವೇ ಅಲ್ಲಿನ ಜನರಿಗೆ ತಲುಪಿಸಬೇಕು~ ಎಂದು ಕೋರಿದರು.ಈ ಕುರಿತು ಪ್ರತಿಕ್ರಿಯಿಸಿದ ಸ್ವಾಮೀಜಿ, `ಒಬ್ಬರಿಗೆ ಸಹಾಯ ಮಾಡಲು ಹೋಗಿ ಇನ್ನೊಬ್ಬರನ್ನು ತೊಂದರೆಗೆ ದೂಡುವಂತೆ ಆಗಬಾರದು. ನೀರಾವರಿ ಹೋರಾಟದಲ್ಲಿ ಸಕ್ರಿಯರಾಗಿರುವವರು, ತಂತ್ರಜ್ಞರು, ಪರಿಸರ ತಜ್ಞರೊಂದಿಗೆ ನಿಷ್ಪಕ್ಷಪಾತ ಸಮಾಲೋಚನೆಯ ನಂತರ ಮಾತ್ರ ಕರಾವಳಿ ಕನ್ನಡಿಗರು ತಮ್ಮ ತೀರ್ಮಾನ ಪ್ರಕಟಿಸಲು ಸಾಧ್ಯ. ಕರಾವಳಿ ಮಾರ್ಗವಾಗಿ ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರಿನಿಂದ ಇಲ್ಲಿನ ಜನ ಬದುಕುತ್ತಾರೆ ಎಂದರೆ ಅದನ್ನು ಯಾರೂ ಅಡ್ಡಿಪಡಿಸುವುದಿಲ್ಲ.

 

ನದಿ ನೀರು ತಿರುಗಿಸುತ್ತಾರೆ ಎಂಬ ಪ್ರಚಾರದಿಂದಾಗಿ ಕರಾವಳಿ ಪ್ರದೇಶದಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ~ ಎಂದು ವಿವರಿಸಿದರು.`ಕನ್ನಡಿಗರಲ್ಲಿ ಯಾವುದೇ ಕಾರಣಕ್ಕೂ ಪರಸ್ಪರ ಘರ್ಷಣೆಯಾಗಬಾರದು. ಇಷ್ಟುದಿನ ಹೇಗೆ ಅಣ್ಣ ತಮ್ಮಂದಿರಂತೆ ಬದುಕಿದ್ದೇವೆಯೋ ಇನ್ನು ಮುಂದೆಯೂ ಹಾಗೆಯೇ ಇರಬೇಕು. ನೀರಾವರಿ ಯೋಜನೆ ಕುರಿತು ಜನ ಜಾಗೃತಿ ಮೂಡಬೇಕು. ಕರಾವಳಿ ಮತ್ತು ಬಯಲುಸೀಮೆ ಹೋರಾಟಗಾರರಲ್ಲಿ ಸಾಮರಸ್ಯ ಮೂಡಿಸಲು ಎಲ್ಲರೂ ಯತ್ನಿಸಬೇಕು. ವರದಿ ಜಾರಿ ಕುರಿತು ಸರ್ಕಾರ ಶೀಘ್ರ ತನ್ನ ನಿಲುವು ಪ್ರಕಟಿಸಬೇಕು~ ಎಂದು ಅಭಿಪ್ರಾಯಪಟ್ಟರು.ನೀರಾವರಿ ತಜ್ಞ ಪರಶಿವಯ್ಯ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಷಫಿ ಅಹ್ಮದ್, ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ಅವಿಭಜಿತ ಕೋಲಾರ ಜಿಲ್ಲೆ ನೀರಾವರಿ ಸಮಿತಿ ಮುಖಂಡರಾದ ಡಾ.ಮಧು ಸೀತಪ್ಪ, ಆಂಜನೇಯರೆಡ್ಡಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.