ಗುರುವಾರ , ಫೆಬ್ರವರಿ 25, 2021
20 °C
ಅವಳಿನಗರದ ಇಬ್ಬರು ದಿಗ್ಗಜರಿಗೆ ಒಲಿಯಿತು ಅತ್ಯುನ್ನತ ನಾಗರಿಕ ಪ್ರಶಸ್ತಿ

ನೇತ್ರ ತಜ್ಞ, ಹಾಡುವ ಸಂತನಿಗೆ ಪದ್ಮಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇತ್ರ ತಜ್ಞ, ಹಾಡುವ ಸಂತನಿಗೆ ಪದ್ಮಶ್ರೀ

ಧಾರವಾಡ/ ಹುಬ್ಬಳ್ಳಿ: ಅವಳಿ ನಗರದ ಜನತೆಗೆ ಇದೊಂದು ವಿಶಿಷ್ಟ ಸನ್ನಿವೇಶ. ಊರು ಬೇರೆಯವರಾದರೂ ಇಲ್ಲಿಯೇ ಉಳಿದು ತಮ್ಮ ಸಾಧನೆ ಮಾಡಿದ ಇಬ್ಬರು ದಿಗ್ಗಜರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಒಬ್ಬರು ಪ್ರಸಿದ್ಧ ನೇತ್ರ ತಜ್ಞ ಡಾ.ಎಂ.ಎಂ. ಜೋಶಿ, ಇನ್ನೊಬ್ಬರು ಹಿಂದೂಸ್ತಾನಿ ಸಂಗೀತದ ಮೇರು ಗಾಯಕ, ಪಂ. ಪುಟ್ಟರಾಜ ಗವಾಯಿಗಳ ಮೇರು ಶಿಷ್ಯ ಪಂ. ಎಂ. ವೆಂಕಟೇಶ ಕುಮಾರ್‌.  ಇಬ್ಬರ ಪ್ರತಿಕ್ರಿಯೆಗಳು ಇಲ್ಲಿವೆ.‘ಸಮಾಜದ ಋಣ ತೀರಿಸಲು ಆಸ್ಪತ್ರೆ ಕಟ್ಟಿದೆ’: ‘49 ವರ್ಷಗಳ ಹಿಂದೆ ಬಡವರು, ನಿರ್ಗತಿಕರ ಸೇವೆ ಮಾಡುವ ಉದ್ದೇಶದಿಂದ ನಗರದಲ್ಲಿ ಆಸ್ಪತ್ರೆ ಆರಂಭಿಸಿದೆ. ಅಂದಿನಿಂದ ಇಂದಿನವ ರೆಗೂ ಇಲ್ಲಿನ ಜನರ ಸಹಕಾರದಿಂದ ನನ್ನ ಸೇವೆಯನ್ನು ಮುಂದುವರಿಸಿದ್ದೇನೆ. ನಾನೊಬ್ಬನೇ ಎಲ್ಲವನ್ನೂ ಸಾಧಿಸಿದ್ದೇನೆ ಎಂದರೆ ಅದು ಸ್ವಾರ್ಥವಾಗುತ್ತದೆ. ನನ್ನೊಂದಿಗೆ ಕೆಲಸ ಮಾಡಿದ ಆಸ್ಪತ್ರೆಯ ಸಿಬ್ಬಂದಿ, ಕುಟುಂಬಕ್ಕೂ ಪ್ರಶಸ್ತಿಯಲ್ಲಿ ಪಾಲು ಸಿಗಬೇಕು...’

ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ತಮಗೆ ಘೋಷಣೆಯಾದ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಾ. ಎಂ.ಎಂ. ಜೋಶಿ ಅವರು ತಮ್ಮ ಸಂತಸವನ್ನು ಹಂಚಿಕೊಂಡದ್ದು ಹೀಗೆ.ಪ್ರಶಸ್ತಿ ಘೋಷಣೆಯಾದುದನ್ನು ತಿಳಿದ ಅವರ ಹಿತೈಷಿಗಳು ಹಾಗೂ ಅಭಿಮಾನಿಗಳು ಹೊಸೂರು ವೃತ್ತದ ಆಸ್ಪತ್ರೆಯ ಮೇಲ್ಭಾಗದಲ್ಲಿರುವ ಮನೆಗೆ ಬಂದು ಶುಭಾಶಯ ಹೇಳುತ್ತಿದ್ದರು. ಅವರ ಎರಡು ಮೊಬೈಲ್‌ಗಳೂ ನಿರಂತರ ರಿಂಗಣಿಸುತ್ತಿದ್ದವು. ಅದರ ಮಧ್ಯೆಯೂ ತಮ್ಮ ಸಾಧನೆಯ ಮುಡಿಗೆ ಹೊಸದಾಗಿ ಸೇರಿಕೊಂಡ ಈ ಪ್ರಶಸ್ತಿಯ ಬಗ್ಗೆ ಖುಷಿಯಿಂದಲೇ ಅವರು ಮಾತನಾಡಿದರು. ಪತ್ನಿ ಪ್ರಮೀಳಾ ಅವರನ್ನೂ ಪಕ್ಕದಲ್ಲಿ ಕೂರಿಸಿಕೊಳ್ಳಲು ಮರೆಯಲಿಲ್ಲ.‘ಹುಬ್ಬಳ್ಳಿಯ ಜನರು ನನ್ನನ್ನು ಆದ ರದಿಂದ ಬರಮಾಡಿಕೊಂಡು ಇಲ್ಲಿಯೇ ಉಳಿದುಕೊಳ್ಳುವಂತೆ ಸಲಹೆ ನೀಡಿದರು (ಜೋಶಿ ಅವರು ಮೂಲತಃ ವಿಜಯ ಪುರ ಬಳಿಯ ಕಾಖಂಡಕಿಯವರು). ನಗರದಲ್ಲಿ ಆಸ್ಪತ್ರೆ ಆರಂಭಿಸಿ ಸುತ್ತಮುತ್ತ ಲಿನ ಹಳ್ಳಿಗಳು ಹಾಗೂ ಪಟ್ಟಣಗಳ ಲ್ಲಿಯೂ 800ಕ್ಕೂ ಅಧಿಕ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದೇವೆ. 1989 ರಲ್ಲಿಯೇ ನನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಇಲ್ಲಿಯವರೆಗೆ ಸುಮಾರು 35ಕ್ಕೂ ಅಧಿಕ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳು ಸಂದಿವೆ. ಆದರೆ, ನಾನು ಎಂದಿಗೂ ಪ್ರಶಸ್ತಿಗಾಗಿ ಆಸೆಪಟ್ಟವನಲ್ಲ. ಬಡವರ ಸೇವೆಯೇ ನಾನು ಸಮಾಜಕ್ಕೆ ಸಲ್ಲಿಸುವ ಋಣ ಎಂದುಕೊಂಡೇ ವೃತ್ತಿಯನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಹೇಳಿದರು.ಪದ್ಮಶ್ರೀ ಪ್ರಶಸ್ತಿ ಬರುವುದು ತಡವಾಯಿತೇ ಎಂಬ ಪ್ರಶ್ನೆಗೆ ಸಾವಧಾನವಾಗಿಯೇ ಉತ್ತರ ನೀಡಿದ ಡಾ. ಜೋಶಿ, ‘ನಮ್ಮ ಭಾರತ ದೇಶ ಬಹಳ ದೊಡ್ಡದು. ಸಾಧಕರೂ ಬಹಳ ಜನ ಇದ್ದಾರೆ. ಹಾಗಾಗಿ ಗುರುತಿಸಲು ತಡವಾಗಿರಬಹುದು’ ಎಂದರು.ಗವಾಯಿಗಳಿಗೆ ಅರ್ಪಣೆ: ‘ಪ್ರಶಸ್ತಿ ಬಂದಿ ರುವುದು ಸಂತಸ ತಂದಿದೆ. ಈ ಪ್ರಶಸ್ತಿ ನನ್ನ ಗುರುಗಳಾದ ಪಂಡಿತ್‌ ಪುಟ್ಟರಾಜ ಗವಾಯಿಗಳಿಗೆ ಅರ್ಪಿತ’ ಎಂದು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಪಂಡಿತ್‌ ವೆಂಕಟೇಶ ಕುಮಾರ್‌ ಪ್ರತಿಕ್ರಿಯಿಸಿದರು.ಪ್ರತಿಭೆ, ಪರಿಶ್ರಮ, ಪರಿಶುದ್ಧ ಗಾಯನಕ್ಕೆ ಹೆಸರುವಾಸಿಯಾದ ವೆಂಕಟೇಶ ಕುಮಾರ್ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಂದಿದೆ. ಈ ಸಂದರ್ಭದಲ್ಲಿ ತಮ್ಮ ಸಂತಸ ಹಂಚಿಕೊಂಡ ಅವರು, ‘ಸರಿಯಾದ ಸಮಯಕ್ಕೆ ನನಗೆ ಪ್ರಶಸ್ತಿ ಬಂದಿದೆ. ತೀರಾ ಮೊದಲೂ ಅಲ್ಲ, ತೀರಾ ತಡವೂ ಆಗಿಲ್ಲ. ಈ ಪ್ರಶಸ್ತಿಯನ್ನು ನಾನು ಸರಿಯಾಗಿ ಬಳಸಿಕೊಳ್ಳುತ್ತೇನೆ. ಇದು ನನ್ನ ಮುಂದಿನ ಸಾಧನೆಗೆ ಸ್ಫೂರ್ತಿಯಾಗಲಿದೆ’ ಎಂದರು.ಬಳ್ಳಾರಿಯ ಲಕ್ಷ್ಮೀಪುರದವರಾದ ವೆಂಕಟೇಶ ಕುಮಾರ್‌ ಅವರು ಸಂಗೀತದ ಮನೆತನದಲ್ಲಿ ಬೆಳೆದವರು. ಇವರ ತಂದೆ ಹುಲಿಯಪ್ಪ ಅವರು ಜಾನಪದ ಹಾಗೂ ವಯಲಿನ್‌ ವಾದನದಲ್ಲಿ ಪಾಂಡಿತ್ಯ ಪಡೆದವರು. ಹೀಗಾಗಿ ಸಹಜವಾಗಿ ಸಂಗೀತದತ್ತ ಹೊರಳಿದ ವೆಂಕಟೇಶ ಕುಮಾರ್‌, ಗದುಗಿನ ವೀರೇಶ್ವರ ಪುಣ್ಯಾಶ್ರಮ ಸೇರಿ ಪಂಡಿತ್ ಪುಟ್ಟರಾಜ ಗವಾಯಿಗಳ ಬಳಿ 12 ವರ್ಷಗಳ ಸಂಗೀತಾಭ್ಯಾಸ ಮಾಡಿದರು.ನಂತರ ಆಕಾಶವಾಣಿಯಲ್ಲಿ ಬಿ–ಶ್ರೇಣಿ ಕಲಾವಿದರಾಗಿ, ಧಾರವಾಡದ ಗಂಡುಮಕ್ಕಳ ಟ್ರೇನಿಂಗ್‌ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವ ಅವರದ್ದು. ನಂತರ ಕರ್ನಾಟಕ ಸಂಗೀತ ಮಹಾವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರಾಗಿ ಸೇರಿದ ಅವರು ಅಲ್ಲೇ ಸಂಗೀತ ಪ್ರಾಧ್ಯಾಪಕರಾಗಿ ನಿವೃತ್ತರಾದರು.ಹಿಂದೂಸ್ತಾನಿ ಸಂಗೀತದಲ್ಲಿ ಸಾಕಷ್ಟು ಕೃಷಿ ಮಾಡಿರುವ ಇವರ ವಚನ ಗಾಯನ ಹಾಗೂ ದಾಸರ ಪದಗಳನ್ನು ಆಲಿಸುವುದೇ ಒಂದು ವಿಶಿಷ್ಟ ಅನುಭವ. ಅದರಲ್ಲೂ ‘ಒಂದು ಬಾರಿ ಸ್ಮರಣೆ ಸಾಲದೆ...’ ಎಂಬ ಗಾಯನವಿಲ್ಲದೆ ಇವರ ಕಛೇರಿ ಪೂರ್ಣಗೊಳಿಸಲು ಸಂಗೀತಾಸಕ್ತರು ಬಿಡದಷ್ಟು ಪ್ರಸಿದ್ಧಿ.

ಆಕಾಶವಾಣಿಯ ಉನ್ನತ ಶ್ರೇಣಿಯ ಕಲಾವಿದರಾಗಿರುವ ವೆಂಕಟೇಶ ಕುಮಾರ್‌ ಕರ್ನಾಟಕ ಮಾತ್ರವಲ್ಲ ಉತ್ತರ ಭಾರತದಲ್ಲೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.