ನೇತ್ರ ದಾನ: ವಿದ್ಯಾರ್ಥಿಗಳ ಮಾದರಿ ಕಾರ್ಯ

7

ನೇತ್ರ ದಾನ: ವಿದ್ಯಾರ್ಥಿಗಳ ಮಾದರಿ ಕಾರ್ಯ

Published:
Updated:

ಕೊಪ್ಪಳ: ಹುಟ್ಟಿದ ಮನುಷ್ಯ ಸಾಯಲೇಬೇಕು. ಆದರೆ, ಸತ್ತ ನಂತರ ಮನುಷ್ಯ ದೇಹವನ್ನು ದಹನ ಮಾಡಲಾಗುತ್ತದೆ ಇಲ್ಲವೇ ಹೂಳಲಾಗುತ್ತದೆ. ಆದರೆ, ಮೃತ ದೇಹದಿಂದ ನಿರ್ದಿಷ್ಟ ಅವಧಿಯಲ್ಲಿ ತೆಗೆಯುವ ಕಣ್ಣುಗಳು ಮತ್ತೊಬ್ಬರ ಬಾಳಿಗೆ ಬೆಳಕಾಗುತ್ತವೆ ಎಂಬುದೂ ಸತ್ಯ.ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯು ಪ್ರತಿ ವರ್ಷ ಅಕ್ಟೋಬರ್ ತಿಂಗಳಿನ 2ನೇ ಗುರುವಾರವನ್ನು `ವಿಶ್ವ ದೃಷ್ಟಿ ದಾನ ದಿನ~ ಎಂಬುದಾಗಿ ಆಚರಿಸುತ್ತಿದೆ. ವಿಶ್ವದಲ್ಲಿ 2020ರ ವೇಳೆಗೆ ಅಂಧತ್ವವನ್ನು ನಿರ್ಮೂಲನೆ ಮಾಡಬೇಕು ಎಂಬ ಮಹತ್ತರ ಉದ್ದೇಶದಿಂದ ಘೋಷಣೆ ಮಾಡಿರುವ ಈ ದಿನದಂದು ಆಸಕ್ತ ವ್ಯಕ್ತಿಗಳು ತಮ್ಮ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡುವ ಸಂಬಂಧ ಸಮ್ಮತಿ ಪತ್ರಕ್ಕೆ ಸಹಿ ಹಾಕುವುದು ರೂಢಿ.ಇಂತಹ ಮಹತ್ಕಾರ್ಯಕ್ಕೆ ತಮ್ಮ ಅನುಮತಿ ನೀಡುವ ಮೂಲಕ ಕೊಪ್ಪಳದ ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅನುಕರಣೀಯ ಕಾರ್ಯ ಮಾಡಿದ್ದಾರೆ.ಈ ತಿಂಗಳ ಎರಡನೇ ಗುರುವಾರವಾದ 11ನೇ ತಾರೀಖಿನಂದು ಕೊಪ್ಪಳದಲ್ಲಿರುವ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ತೆರಳಿದ 40 ಜನ ವಿದ್ಯಾರ್ಥಿಗಳು, ನೇತ್ರ ದಾನಕ್ಕೆ ಸಮ್ಮತಿಸಿ, ಅರ್ಜಿ ನಮೂನೆಗೆ ಸಹಿ ಹಾಕುವ ಮೂಲಕ ಮಾನವೀಯ ಕಾರ್ಯವೊಂದಕ್ಕೆ ತಮ್ಮನ್ನು ಅಣಿಗೊಳಿಸಿಕೊಂಡಿದ್ದಾರೆ.`ವಿಶ್ವ ದೃಷ್ಟಿ ದಾನ ದಿನ~ದ ಬಗ್ಗೆ `ಡೆಕ್ಕನ್ ಹೆರಾಲ್ಡ್~ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಲೇಖನವೇ ಈ ನಡೆಗೆ ಸ್ಫೂರ್ತಿ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಎ. ಧನಂಜಯನ್.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಲೇಖನ ಓದಿದ ನಂತರ ಕಾಲೇಜಿನಲ್ಲಿನ ಅಧ್ಯಯನ ಮಾಡುತ್ತಿರುವ 56 ಜನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದೆ. ಕಣ್ಣುಗಳನ್ನು ದಾನ ಮಾಡುವ ಮಹತ್ವವನ್ನು ವಿವರಿಸಿದೆ. ಕೇವಲ ವಿದ್ಯಾರ್ಥಿಗಳ ಜೊತೆ ಮಾತ್ರವಲ್ಲ, ಅವರ ಪಾಲಕರೊಂದಿಗೆ ಸಹ ಮಾತನಾಡಿ, ನೇತ್ರ ದಾನದ ಮಹತ್ವ ತಿಳಿಸಿದೆ ಎಂದೂ ವಿವರಿಸುತ್ತಾರೆ.ಆದರೆ, 40 ಜನ ವಿದ್ಯಾರ್ಥಿಗಳು ನೇತ್ರ ದಾನ ಮಾಡಲು ಮುಂದೆ ಬಂದರು. ನಾನೂ ನೇತ್ರ ದಾನ ಮಾಡಲು ನೋಂದಣಿ ಮಾಡಿಸಲು ನಿರ್ಧರಿಸಿದೆ. ಕಾಲೇಜಿನ ಸಿಬ್ಬಂದಿ ಪೈಕಿ ಕನ್ನಡ ಉಪನ್ಯಾಸಕ ವೀರೇಶ ಕೊಪ್ಪಳ, ಜೀವಶಾಸ್ತ್ರದ ಉಪನ್ಯಾಸಕಿ ಮಿರಾಜುನ್ನೀಸಾ ಸಹ ಸಮ್ಮತಿ ಪತ್ರಕ್ಕೆ ಸಹಿ ಹಾಕುವ ಮೂಲಕ ನೇತ್ರ ದಾನ ಕುರಿತ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು ಎಂದು ಹೆಮ್ಮೆಯಿಂದ ಹೇಳುತ್ತಾರೆ.ನಗರದಲ್ಲಿರುವ ಲಯನ್ಸ್ ಕಣ್ಣಾಸ್ಪತ್ರೆಯ ವೈದ್ಯಾಧಿಕಾರಿ ಡಾ.ಚಂದ್ರಶೇಖರ ಕಾಮತ್ ಅವರಿಗೆ ಸಮ್ಮತಿ ಪತ್ರಗಳನ್ನು ಸಲ್ಲಿಸಲಾಯಿತು. ಆಸ್ಪತ್ರೆಯ ವ್ಯವಸ್ಥಾಪಕ ಪಿ.ಆರ್.ಕುಲಕರ್ಣಿ, ಸಹಾಯಕ ವ್ಯವಸ್ಥಾಪಕ ಎಸ್.ಎ. ಅಬ್ಬಿಗೇರಿ ಅವರು ನೇತ್ರ ದಾನಕ್ಕೆ ಒಪ್ಪಿಗೆ ಸೂಚಿಸುವ ಪತ್ರಕ್ಕೆ ಸಹಿ ಹಾಕುವುದು ಸೇರಿದಂತೆ ನೋಂದಣಿ ಕಾರ್ಯಕ್ಕೆ ನೆರವಾದರು ಎಂದೂ ಹೇಳಲು ಮರೆಯಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry