ನೇಪಥ್ಯಕ್ಕೆ ಸರಿದ ನೈಸರ್ಗಿಕ ಅಣಬೆ

7

ನೇಪಥ್ಯಕ್ಕೆ ಸರಿದ ನೈಸರ್ಗಿಕ ಅಣಬೆ

Published:
Updated:

ಶ್ರೀನಿವಾಸಪುರ: ಅಣಬೆ ನೈಸರ್ಗಿಕವಾಗಿ ಸಿಗುವ ಒಂದು ಪೌಷ್ಟಿಕ ಆಹಾರ. ಮಳೆಗಾಲದಲ್ಲಿ ಗೆದ್ದಲಿನ ಗೂಗೆಯಲ್ಲಿ ಹುಟ್ಟಿ ಬೆಳೆಯುವ ಅಣಬೆ. ತಾಲ್ಲೂಕಿನಲ್ಲಿ  ಆಗಸ್ಟ್ ನಿಂದ ನವೆಂಬರ್‌ವರೆಗೆ ಹೆಚ್ಚಾಗಿ ಸಿಗುತ್ತಿತ್ತು. ಆದರೆ ಈ ಬಾರಿ ಅಣಬೆ ಸಿಕ್ಕಿತು ಎನ್ನುವವರೇ ಇಲ್ಲ.ಮಳೆಗಾಲ ಬಂತೆಂದರೆ ಅಣಬೆ ಪ್ರಿಯರ ಬಾಯಲ್ಲಿ ನೀರೂರುತ್ತದೆ. ಅದರ ರುಚಿಗೆ ಮಾರುಹೋಗಿರುವ ಗ್ರಾಮೀಣ ಪ್ರದೇಶದ ಜನ ಮಳೆಯಾದ ಮಾರನೇ ದಿನ ಬೆಳಿಗ್ಗೆ ಹೊಲ, ತೋಟ, ಬಯಲೆನ್ನದೆ ಸುತ್ತಾಡಿ ಅಣಬೆಯನ್ನು ಕಿತ್ತು ತರುತ್ತಾರೆ. ತಂದ ಅಣಬೆಯನ್ನು ಕೊಯ್ದು ಸ್ವಲ್ಪ ಕಾಲ ನೀರಿನಲ್ಲಿ ನೆನೆಹಾಕಿ ಮಣ್ಣನ್ನು ಬಿಡಿಸಿ ಸಾರು ಮಾಡಿ ಮುದ್ದೆಯೊಂದಿಗೆ ಸವಿಯುತ್ತಾರೆ.ನೈಸರ್ಗಿಕವಾಗಿ ಸಿಗುವ ಅಣಬೆ ಕೃತಕವಾಗಿ ಬೆಳೆದ ಅಣಬೆಗಿಂತ ಹೆಚ್ಚು ರುಚಿಕರ ಎನ್ನುವ ಅಭಿಪ್ರಾಯವಿದೆ. ಇದು ಮಾರುಕಟ್ಟೆಯಲ್ಲಿ ಕೆಜಿಯೊಂದಕ್ಕೆ 200 ರೂ.ವರೆಗೆ ಮಾರಾಟವಾಗುತ್ತದೆ. ಅಣಬೆ ಸಸ್ಯ ಶಾಸ್ತ್ರದ ಪ್ರಕಾರ ಹರಿತ್ತಿಲ್ಲದ ಸಸ್ಯ. ಆದರೆ ಕೆಲವರಲ್ಲಿ ಅಣಬೆ ಮಾಂಸಾಹಾರ ಎಂಬ ತಪ್ಪು ಕಲ್ಪನೆ ಇದೆ. ಈ ಕಾರಣದಿಂದಲೇ ಕೆಲವು ಸಮುದಾಯಗಳಿಗೆ ಸೇರಿದ ಜನ ಇದನ್ನು ತಿನ್ನುವುದಿಲ್ಲ.ಅಣಬೆಗಳಲ್ಲಿ ಹಲವು ಪ್ರಭೇದಗಳಿವೆ ಆ ಪೈಕಿ ಕೆಲವು ಜಾತಿಯ ಅಣಬೆಗಳು ಮಾತ್ರ ತಿನ್ನಲು ಅರ್ಹವಾಗಿರುತ್ತವೆ. ಮತ್ತೆ ಕೆಲವನ್ನು ತಿನ್ನುವಂತಿಲ್ಲ. ಅಣಬೆ ತರಲು ಹೋಗುವ ವ್ಯಕ್ತಿಗೆ ಈ ವ್ಯತ್ಯಾಸ ಗೊತ್ತಿರಬೇಕು. ಇಲ್ಲವಾದರೆ ಮನೆ ಮಂದಿ ತೊಂದರೆಗೆ ಸಿಕ್ಕಿಕೊಳ್ಳುತ್ತಾರೆ.ತಿನ್ನುವ ಅಣಬೆ ಸಾಮಾನ್ಯವಾಗಿ ಗೆದ್ದಲಿರುವ ಪ್ರದೇಶದಲ್ಲಿ ಸುಮಾರು ಒಂದು ಅಡಿ ಆಳದಿಂದ ಬೆಳೆದುಬಂದಿರುತ್ತದೆ. ಮೊದಲು ನೆಲ ಮಟ್ಟದಲ್ಲಿ ಗುಂಡಾಗಿ ಕಾಣಿಸಿಕೊಳ್ಳುತ್ತದೆ. ಸಮಯ ಕಳೆದಂತೆ ಬೆಳ್ಳಗೆ ಕೊಡೆಯಾಕಾರವಾಗಿ ಬಿಚ್ಚಿಕೊಳ್ಳುತ್ತದೆ. ಈ ಲಕ್ಷಣಗಳುಳ್ಳ ಅಣಬೆಯನ್ನು ಮಾತ್ರ ಚೂಪಾದ ಕೋಲಿನ ಸಹಾಯದಿಂದ ಅಗೆದು ತೆಗೆಯಲಾಗುತ್ತದೆ.ಕೆಲವು ಜಾತಿಯ ಅಣಬೆಗಳು ಸಾವಯವ ವಸ್ತುಗಳ ಮೇಲೆ ಬೆಳೆಯುತ್ತವೆ. ಅವುಗಳನ್ನು ಹುಚ್ಚಣಬೆ, ಮರ ಅಣಬೆ, ಕಲ್ಲಣಬೆ ಎಂದೆಲ್ಲಾ ಕರೆಯಲಾಗುತ್ತದೆ. ಅವು ಹುಟ್ಟುವ ಪರಿಸರವನ್ನು ಆಧರಿಸಿ ಹೆಸರಿಸುವುದು ರೂಢಿ. ಈ ಅಣಬೆಗಳನ್ನು ತಿನ್ನುವುದಿಲ್ಲ. ಒಂದು ವೇಳೆ ಗೊತ್ತಿಲ್ಲದೆ ಸಾರು ಮಾಡಿ ತಿಂದಲ್ಲಿ ವಾಂತಿ, ಭೇದಿ ಕಾಣಿಸಿಕೊಳ್ಳುತ್ತದೆ. ಕೆಲವು ಜಾತಿಯ ಅಣಬೆಗಳು ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ಎಂಬುದು ಗ್ರಾಮೀಣರ ಅನುಭವದ ಮಾತು. ಆದ್ದರಿಂದಲೆ ಅಣಬೆಗಳ ಬಗ್ಗೆ ತಿಳಿವಳಿಕೆ ಇರುವವರು ಮಾತ್ರ ಅಣಬೆ ತರಲು ಹೋಗುವುದು ವಾಡಿಕೆ.ಆಳದ ಉಳುಮೆ, ಕೀಟನಾಶಕಗಳ ಅತಿಯಾದ ಬಳಕೆ ಮುಂತಾದ ಕಾರಣಗಳಿಂದ ಇತ್ತೀಚಿನ ವರ್ಷಗಳಲ್ಲಿ ನೈಸರ್ಗಿಕ ಅಣಬೆಯ ಲಭ್ಯತೆ ಪ್ರಮಾಣ ಕುಸಿದಿದೆ. ಈ ಬಾರಿಯಂತೂ ಮಳೆ ಕೊರತೆಯಿಂದಾಗಿ ಅಣಬೆ ಮೊಳಕೆಯೊಡೆಯಲೇ ಇಲ್ಲ. ಹೀಗಾಗಿರುವುದು ಇದೇ ಮೊದಲು ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಹಿರಿಯರು.ಕೃತಕ ಅಣಬೆ ಬೇಸಾಯ ಒಂದು ಉದ್ಯಮವಾಗಿ ಬೆಳೆಯುತ್ತಿದೆ. ನಗರ ಹಾಗೂ ಪಟ್ಟಣ ಪ್ರದೇಶದ ಹೋಟೆಲ್, ರೆಸ್ಟೋರೆಂಟ್, ಡಾಬಾಗಳಲ್ಲಿ ಕೃತಕ ಅಣಬೆಗೆ ಬೇಡಿಕೆ ಹೆಚ್ಚಿದೆ. ವಿಶೇಷ ಸಭೆ, ಸಮಾರಂಭಗಳಲ್ಲೂ ಅಣಬೆಯಿಂದ ತಯಾರಿಸಿದ ತಿಂಡಿಗಳಿಗೆ ಮಣೆ ಹಾಕಲಾಗುತ್ತಿದೆ. ಕೃತಕ ಅಣಬೆಯನ್ನು ಮನೆಗಳಿಗೆ ಕೊಂಡೊಯ್ದು ತಮಗೆ ಇಷ್ಟವಾದ ತಿಂಡಿ ತಯಾರಿಸಿ ತಿನ್ನುವವರಿಗೂ ಕೊರತೆಯಿಲ್ಲ.ನೈಸರ್ಗಿಕ ಅಣಬೆ ತಿಂದವರಿಗೇ ಗೊತ್ತು ಅದರ ರುಚಿ. ಆದರೇನು ಮಾಡುವುದು ನೈಸರ್ಗಿಕ ವಿಕೋಪ ಅಣಬೆಯನ್ನೂ ಅಡಗಿಸಿಬಿಟ್ಟಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನೈಸರ್ಗಿಕ ಅಣಬೆ ನೇಪಥ್ಯಕ್ಕೆ ಸರಿಯುವುದರಲ್ಲಿ ಆಶ್ಚರ್ಯವಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry