ನೇಪಾಳ ನ್ಯಾಯಮೂರ್ತಿ ಹತ್ಯೆ

7

ನೇಪಾಳ ನ್ಯಾಯಮೂರ್ತಿ ಹತ್ಯೆ

Published:
Updated:
ನೇಪಾಳ ನ್ಯಾಯಮೂರ್ತಿ ಹತ್ಯೆ

ಕಠ್ಮಂಡು (ಪಿಟಿಐ):  ನೇಪಾಳ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಾಣಾ ಬಹಾದ್ದೂರ್ ಬಾಮ್ ಅವರನ್ನು ಗುರುವಾರ ಹಾಡಹಗಲೇ ಮೋಟಾರ್ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.ಬಾಗಲಮುಖಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನ್ಯಾಯಾಲಯದತ್ತ ಕಾರಿನಲ್ಲಿ ತೆರಳುತ್ತಿದ್ದಾಗ ಸಂಕಮೂಲ ಪ್ರದೇಶದಲ್ಲಿ ಬಾಗಮತಿ ನದಿ ದಂಡೆಯ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಕಾರಿಗೆ ಅಡ್ಡವಾಗಿ ನಿಂತು ಗುಂಡಿನ ಮಳೆಗರೆದರು.ನ್ಯಾಯಮೂರ್ತಿ ಬಾಮ್, ಅವರ ಅಂಗರಕ್ಷಕ ಮತ್ತು ಇನ್ನೊಬ್ಬರನ್ನು ಕೂಡಲೇ ಹತ್ತಿರದ ನೊರ್ವಿಕ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ್ಯಾಯಮೂರ್ತಿಗಳು ಕೊನೆಯುಸಿರೆಳೆದರು.ಗಾಯಗೊಂಡಿರುವ ಅಂಗರಕ್ಷಕ ಮತ್ತು ಇನ್ನೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ನ್ಯಾಯಮೂರ್ತಿಗಳ ದೇಹದೊಳಗೆ  ಆರು ಗುಂಡುಗಳು ಹೊಕ್ಕಿವೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಪ್ರತ್ಯಕ್ಷ ಸಾಕ್ಷಿಯಾಗಿರುವ ನ್ಯಾಯಾಧೀಶರ ಅಂಗರಕ್ಷಕನನ್ನು ವಿಚಾರಣೆ ನಡೆಸಿದ ನಂತರವೇ ಹಂತಕರ ಬಗ್ಗೆ ಸುಳಿವು ಸಿಗಬಹುದು ಎಂದು ಪೊಲೀಸರು  ತಿಳಿಸಿದ್ದಾರೆ.ದೇಶದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿ ಉಸ್ತುವಾರಿ ಸರ್ಕಾರದ ಆಡಳಿತ ಇರುವುದರಿಂದ ರಾಜಧಾನಿ ಕಠ್ಮಂಡುವಿನಲ್ಲಿ ಬಿಗಿ ಭದ್ರತೆ ಇದ್ದರೂ ಈ ಹತ್ಯೆ ನಡೆದಿರುವುದರಿಂದ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.ಹತ್ಯೆಗೀಡಾಗಿರುವ ನ್ಯಾಯಮೂರ್ತಿ ಬಾಮ್ ಅವರು ಲಂಚ ಪಡೆದು ಜೈಲಿನಲ್ಲಿ ಹಲವು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳನ್ನು ಬಿಡುಗಡೆ ಮಾಡಿದ್ದ ಆಪಾದನೆ ಎದುರಿಸುತ್ತಿದ್ದು, ಯಾವುದೇ ಪ್ರಕರಣದ ವಿಚಾರಣೆ ನಡೆಸದಂತೆ ಅವರಿಗೆ ಆದೇಶಿಸಲಾಗಿತ್ತು.ಗುಂಡಿನ ದಾಳಿ ನಡೆದ ನಂತರ ಆಸ್ಪತ್ರೆಗೆ ಸೇರಿಸಿದ ಕೂಡಲೇ ಪ್ರಧಾನಿ ಬಾಬುರಾಂ ಭಟ್ಟಾರಾಯ್ ಮತ್ತು ಮುಖ್ಯ ನ್ಯಾಯಮೂರ್ತಿ ಖಿಲಾ ರಾಜ್ ರೆಗ್ಮಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಪ್ರಧಾನಿ ಅವರು ಗೃಹ ಸಚಿವ ಬಿಜಯ್ ಗಚ್ಚದಾರ್ ಅವರಿಗೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸುವಂತೆ ಆದೇಶಿಸಿದ್ದಾರೆ.ಹಂತಕರನ್ನು ಪತ್ತೆ ಹಚ್ಚುವುದಾಗಿ ತಿಳಿಸಿರುವ ಪ್ರಧಾನಿ, ಉನ್ನತ ಮಟ್ಟದ ಅಧಿಕಾರಿಗಳಿಗೆ ಇನ್ನೂ ಹೆಚ್ಚಿನ ಭದ್ರತೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಹಂತಕರಿಗಾಗಿ ಪೊಲೀಸರು ತೀವ್ರ ಶೋಧನಾ ಕಾರ್ಯ ನಡೆಸಿದ್ದು, ರಾಜಧಾನಿಯಲ್ಲಿ ಬಿಗಿ ಭದ್ರತೆಯನ್ನು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry