ಮಂಗಳವಾರ, ಅಕ್ಟೋಬರ್ 15, 2019
27 °C

ನೇಮಕಾತಿಯಲ್ಲಿ ಪ್ರಾದೇಶಿಕ ಅಸಮಾನತೆ

Published:
Updated:

ಬೆಂಗಳೂರು: `ಎಚ್.ಎನ್.ಕೃಷ್ಣ ಅವರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರೀ ಅಕ್ರಮಗಳು ನಡೆದಿದ್ದು, ನೇಮಕಾತಿಯಲ್ಲಿ ಪ್ರಾದೇಶಿಕ ಅಸಮಾನತೆಯ ದ್ರೋಹ ಎಸಗಲಾಗಿದೆ~ ಎಂದು ಜನ ಸಂಗ್ರಾಮ ಪರಿಷತ್‌ನ ರಾಜ್ಯ ಸಂಚಾಲಕ ಕೆ.ರಾಘವೇಂದ್ರ ಆರೋಪಿಸಿದ್ದಾರೆ.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, `ಎಚ್.ಎನ್.ಕೃಷ್ಣ ಅವರು ಆಯೋಗದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕೇವಲ ಒಂದು ಸಮುದಾಯಕ್ಕಾಗಿ ಲೋಕಸೇವಾ ಆಯೋಗದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆಯೋಗದ ವಿವಿಧ ಹುದ್ದೆಗಳಿಗೆ 3ಎ ಸಮುದಾಯದ ಶೇ 68 ರಷ್ಟು ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ನಂಜುಂಡಪ್ಪ ವರದಿಯನ್ವಯ ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಶೇಕಡಾ 24 ರಷ್ಟು ಮೀಸಲಾತಿ ನೀಡಬೇಕು. ಆದರೆ ಅವರ ಅಧಿಕಾರಾವಧಿಯಲ್ಲಿ ಶೇ 2 ರಷ್ಟು ಮೀಸಲಾತಿಯನ್ನೂ ನೀಡಿಲ್ಲ~ ಎಂದು ಅವರು ತಿಳಿಸಿದರು.`ಅಕ್ರಮ ನೇಮಕಾತಿಯಲ್ಲಿ ಅಂದಿನ ಲೋಕಸೇವಾ ಆಯೋಗದ ಕಾರ್ಯದರ್ಶಿಗಳಾಗಿದ್ದ ಬಿ.ಎ.ಹರೀಶ್‌ಗೌಡ ಅವರ ಪಾತ್ರ ಮುಖ್ಯವಾಗಿದೆ. ಸರ್ಕಾರ ಕೂಡಲೇ ಅವರನ್ನು ಅಧಿಕಾರದಿಂದ ವಜಾ ಮಾಡಬೇಕು. ಅಕ್ರಮ ನೇಮಕಾತಿ ತನಿಖೆಯ ಸಂಬಂಧ ಹೈಕೋರ್ಟ್ ನೀಡಿದ್ದ ಸೂಚನೆಯನ್ನೂ ಗಾಳಿಗೆ ತೂರಲಾಗಿದೆ.ಸದ್ಯ ಸಿಐಡಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಎಚ್.ಎನ್.ಕೃಷ್ಣ ಹಾಗೂ ಹರೀಶ್‌ಗೌಡ ಸೇರಿದಂತೆ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ನ್ಯಾಯಯುತ ತನಿಖೆಗೆ ಸರ್ಕಾರ ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು~ ಎಂದು ಎಚ್ಚರಿಸಿದರು.`ಜೈಲಿನಿಂದ ಹೊರಬಂದ ಕೃಷ್ಣ ಅವರಿಗೆ ಸನ್ಮಾನಗಳನ್ನು ನಡೆಸಲಾಗುತ್ತಿದೆ. ಆರೋಪಿಗಳನ್ನು ಸನ್ಮಾನಿಸುವ ಪ್ರವೃತ್ತಿ ರಾಜ್ಯದಲ್ಲಿ ಹೆಚ್ಚುತ್ತಿರುವುದು ದುರಂತ. ಕೇವಲ ಜಾತಿ ರಾಜಕಾರಣ ಹಾಗೂ ಪ್ರಾದೇಶಿಕ ಮೋಹದಿಂದಾಗಿ ಉತ್ತರ ಕರ್ನಾಟಕವೂ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಎಲ್ಲ ರೀತಿಯಿಂದಲೂ ಅನ್ಯಾಯವಾಗುತ್ತಿದೆ~ ಎಂದು ಅವರು ವಿಷಾದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಾಕ್ ಉಸ್ತಾದ್ ಉಪಸ್ಥಿತರಿದ್ದರು.

Post Comments (+)