ನೇಮಕಾತಿ ಅವ್ಯವಹಾರ: ತನಿಖೆಗೆ ಆಗ್ರಹ

7
ಕೃಷಿ ವಿ.ವಿ ಕುಲಪತಿ ಡಾ.ಕೆ. ನಾರಾಯಣ ಗೌಡ ವಿರುದ್ಧ ಆರೋಪ

ನೇಮಕಾತಿ ಅವ್ಯವಹಾರ: ತನಿಖೆಗೆ ಆಗ್ರಹ

Published:
Updated:

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ೨೦೧೧ ರಿಂದ ಇಲ್ಲಿಯವರೆಗೆ ನೇಮಕಾತಿ ಸೇರಿದಂತೆ ಹಲ­ವಾರು ವಿಷಯಗಳಲ್ಲಿ  ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಿಬಿಐ ತನಿಖೆ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಹಾಗೂ ಆರ್‌ಟಿಐ ಕಾರ್ಯಕರ್ತ ರವಿಕೃಷ್ಣ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದರು.ಬುಧವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತ­ನಾಡಿದ ದ್ವಾರಕಾನಾಥ್‌, ಕೃಷಿ ವಿಶ್ವ­ವಿದ್ಯಾಲಯ­ದಲ್ಲಿ ಪ್ರಸ್ತುತ ಕುಲಪತಿಗಳಾಗಿರುವ ಡಾ. ಕೆ. ನಾರಾಯಣ ಗೌಡ ಅವರು ೨೦೦೬ರಲ್ಲಿ ಅರ್ಜಿ ಆಹ್ವಾನಿಸಲಾಗಿದ್ದ ಹುದ್ದೆಗಳಿಗೆ ೨೦೧೩ರಲ್ಲಿ ಸಂದರ್ಶನ ನಡೆಸಿ, ಸರ್ಕಾರದ ನೀತಿ, ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.ಈ ನೇಮಕಾತಿಯ ಸಮಯದಲ್ಲಿ ಅರ್ಹರನ್ನು ಕಡೆಗಣಿಸಿರುವ ಆಯ್ಕೆ ಸಮಿತಿ ಅರ್ಹರಲ್ಲದವರಿಗೆ ಹೆಚ್ಚಿನ ಅಂಕಗಳನ್ನು ನೀಡಿ ಅಕ್ರಮವಾಗಿ ನೇಮಕಾತಿ ಮಾಡಿಕೊಂಡಿದೆ ಎಂದು ಆರೋಪಿಸಿದರು.ಪ್ರತಿ ಹುದ್ದೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡು­ವಾಗ ಕೃಷಿ ವಿಶ್ವ ವಿದ್ಯಾಲಯದ ಕುಲಪತಿಗಳು ಮತ್ತು ಕೃಷಿ ಸಚಿವರ ಒಪ್ಪಿಗೆಯ ಮೇರೆಗೆ ಅಂಕಪಟ್ಟಿಗೆ ಅನುಮೋದನೆ ನೀಡಲಾಗುತ್ತದೆ. ಇದರ ಪ್ರಕಾರ ೧೦೦ ಅಂಕಗಳು ಇರುತ್ತವೆ. ಅದರಲ್ಲಿ ೯೦ ಅಂಕ­ಗಳನ್ನು ಅಭ್ಯರ್ಥಿಗಳು ನಾನಾ ವಿಭಾಗಗಳಲ್ಲಿ ಪಡೆದಿ­ರು­ತ್ತಾರೆ. ಉಳಿದ ೧೦ ಅಂಕಗಳು ಸಂದರ್ಶನದ ಮೂಲಕ ಪಡೆಯಬೇಕಾಗುತ್ತದೆ. ೯೦ ಅಂಕಗಳನ್ನು ನೀಡುವ ಸಲುವಾಗಿ ವಿಶ್ವವಿದ್ಯಾಲಯದಲ್ಲಿ ಕುಲಪತಿ­ಯಿಂದ ಅನುಮೋದನೆಗೊಂಡ ಪರಾಮರ್ಶೆ ಸಮಿತಿಯು ಅಭ್ಯರ್ಥಿಯ ಎಲ್ಲಾ ಅಂಕಗಳನ್ನು ಪರಿಶೀಲಿಸಿ ಸಂದರ್ಶನಕ್ಕೆ ಆಹ್ವಾನಿಸಲು ಶಿಫಾರಸ್ಸು ಮಾಡುತ್ತದೆ ಎಂದರು.ನಂತರ ೧೦ ಅಂಕಗಳ ಸಂದರ್ಶನಕ್ಕೆ ಅಭ್ಯರ್ಥಿ­ಯನ್ನು ಆಹ್ವಾನಿಸಿ, ಕುಲಪತಿಗಳ ಅಧ್ಯಕ್ಷತೆಯಲ್ಲಿ ರೂಪು­ಗೊಂಡ ಆಯ್ಕೆ ಸಮಿತಿಯು ಸಂದರ್ಶನ ನಡೆಸು­ತ್ತದೆ. ಇವೆರಡರಲ್ಲಿ ಪಡೆದ ಒಟ್ಟು ಅಂಕಗಳ ಆಧಾರ­ದಲ್ಲಿ ಮೆರಿಟ್ ಪಟ್ಟಿ ತಯಾರಿಸಿ ಅಭ್ಯರ್ಥಿ­ಯನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಕೃಷಿ ವಿಶ್ವ ವಿಶ್ವವಿದ್ಯಾಲಯ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿ, ದೂರಿದರು.ಅಭ್ಯರ್ಥಿಗಳು ಪಡೆದಿರುವ ಪ್ರಶಸ್ತಿಗಳು, ಇತರೆ ಅರ್ಹತೆಗಳ ಆಧಾರದ ಮೇಲೆ  ೧೦ ಅಂಕಗಳನ್ನು ನೀಡಲು ಆಯ್ಕೆ ಸಮಿತಿಗೆ ಅವಕಾಶವಿರುತ್ತದೆ. ಆದರೆ ಈ ಸಮಿತಿ ಅರ್ಹತೆ ಇಲ್ಲದವರಿಗೆ ಕಾನೂನು ಬಾಹಿರವಾಗಿ ೧೦.೪೦ ಅಂಕಗಳನ್ನು ನೀಡುವುದು, ಅರ್ಹ ಅಭ್ಯರ್ಥಿಗಳಿಗೆ ಕಡಿಮೆ ಅಂಕ ನೀಡುವ ಮೂಲಕ ಅರ್ಹರಿಗೆ ವಂಚನೆ ಮಾಡಲಾಗಿದೆ ಎಂದು ರವಿಕೃಷ್ಣ ರೆಡ್ಡಿ ದೂರಿದರು.ವಿಶ್ವವಿದ್ಯಾಲಯದಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದ್ದ ೫೨ ಮಂದಿಗೆ ವ್ಯವಸ್ಥಾಪಕ ಮಂಡಳಿ ಬಡ್ತಿ ನೀಡಿತ್ತು. ಆದರೆ ಕುಲಪತಿಗಳು ಆ ಬಡ್ತಿಯನ್ನು ರದ್ದುಗೊಳಿಸಿ, ಅವರಿಗೆ ಹಿಂಬಡ್ತಿ ನೀಡಿದ್ದಾರೆ. ಈ ರೀತಿ ಹಿಂಬಡ್ತಿ ಪಡೆದವರಲ್ಲಿ ೪೦ಕ್ಕೂ ಹೆಚ್ಚು ಮಂದಿ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿದ್ದಾರೆ ಎಂದು ದ್ವಾರಕಾನಾಥ್‌ ಬೇಸರ ವ್ಯಕ್ತಪಡಿಸಿದರು.ಕೇವಲ ನೇಮಕಾತಿ ಅಲ್ಲದೆ ಬಡ್ತಿ ವಿಚಾರದಲ್ಲೂ ಜಾತೀಯತೆ, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರವನ್ನು ನಡೆಸಲಾಗಿದೆ. ಈ ಅಕ್ರಮಗಳ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರೊಬ್ಬರು 2012 ಡಿಸೆಂಬರ್‌ ನಲ್ಲಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಆದರೆ ಆಗಿನಿಂದ ಇಲ್ಲಿಯವರೆಗೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಈಗಲಾದರೂ ರಾಜ್ಯಪಾಲರು ಈ ಸಂಬಂಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry