ನೇಮಕಾತಿ ಗೊಂದಲ ಬೇಡ: ಝಾ

7

ನೇಮಕಾತಿ ಗೊಂದಲ ಬೇಡ: ಝಾ

Published:
Updated:

ಕೆಜಿಎಫ್: ಸೇನೆಗೆ ಸೇರುವ ಆಕಾಂಕ್ಷಿಗಳು ಸಲ್ಲಿಸುವ ದಾಖಲೆಗಳು ಕನ್ನಡದಲ್ಲಿರುವುದರಿಂದ ದಾಖಲಾತಿ ಪರಿಶೀಲನೆಗೆ ತೊಂದರೆಯಾಗುತ್ತಿದೆ. ಒಂದೊಂದು ರಾಜ್ಯಗಳು ಒಂದೊಂದು ಭಾಷೆಯಲ್ಲಿ ದಾಖಲೆ ಕೊಡುವ ಪರಿಪಾಠ ಬಿಟ್ಟು ಎ್ಲ್ಲಲ ರಾಜ್ಯಗಳು ಇಂಗ್ಲಿಷ್‌ನಲ್ಲಿಯೇ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಲು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಾಗುವುದು ಎಂದು ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಬ್ರಿಗೇಡಿಯರ್ ಸೋಮನಾಥ ಝಾ ಇಲ್ಲಿ ಹೇಳಿದರು.ಸೇನೆ ಸೇರುವ ಅಭ್ಯರ್ಥಿಗಳು ವಾಸಸ್ಥಳ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳು ನಿರ್ದಿಷ್ಟ ರೀತಿಯಲ್ಲಿಯೇ ಇರಬೇಕು. ವಿವಿಧ ನಮೂನೆಗಳನ್ನು ಉಪಯೋಗಿಸುತ್ತಿರುವುದರಿಂದ ಅಮೂಲಾಗ್ರ ತಪಾಸಣೆಗೆ ತೊಂದರೆಯಾಗುತ್ತಿದೆ. ಇಂತಹ ಗೊಂದಲಗಳನ್ನು ಸೃಷ್ಟಿಸುವ ಕೆಲವು ವಂಚಕರು ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅದಕ್ಕಾಗಿ ಇಂಗ್ಲಿಷ್‌ನಲ್ಲಿಯೇ ಪ್ರಮಾಣ ಅಗತ್ಯ ಎನ್ನಲಾಗಿದೆ ಎಂದು ತಿಳಿಸಿದರು.ನೇಮಕಾತಿ ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯುತ್ತಿದೆ. ಒಂದು ಚಿಕ್ಕಾಸೂ ಖರ್ಚಿಲ್ಲದೆ ಅರ್ಹತೆ ಇದ್ದವರು ಆಯ್ಕೆಯಾಗಬಹುದು. ಸೇನೆಯಲ್ಲಿ ಕೆಲಸ ಕೊಡಿಸುತ್ತೇವೆ ಎಂಬ ಭರವಸೆ ನೀಡಿ ಹಣ ವಸೂಲಿ ಮಾಡುವವರ ವಿರುದ್ಧ ನಾಗರಿಕ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಇಂತಹ ವಂಚಕರ ಮಾತಿಗೆ ಯಾರೂ ಮೋಸ ಹೋಗಬಾರದು ಎಂದು ಬ್ರಿಗೇಡಿಯರ್ ಒತ್ತಿ ಹೇಳಿದರು.ಪ್ರಸ್ತುತ ನಡೆಯುತ್ತಿರುವ ನೇಮಕಾತಿ ರ‌್ಯಾಲಿಯಲ್ಲಿ ವೈದ್ಯಕೀಯವಾಗಿ ಅನರ್ಹಗೊಂಡವರು ನಿರಾಸ ಆಗಬೇಕಿಲ್ಲ. ಅವರನ್ನು ಪುನಃ ಸೇನೆಯ ಆಸ್ಪತ್ರೆಯಲ್ಲಿ ವಿಶೇಷ ತಜ್ಞರು ಪರಿಶೀಲನೆ ನಡೆಸುತ್ತಾರೆ. ಅಲ್ಲಿ ಅವರು ಅರ್ಹಗೊಳ್ಳುವ ಸಂಭವವಿರುತ್ತದೆ ಎಂದರು. ಸುಮಾರು ಆರು ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಸೇನೆಯಲ್ಲಿ ಈಗ ಸಿಗುತ್ತಿರುವ ಆಕರ್ಷಕ ಸಂಬಳ ಮತ್ತಿತರರ ಭತ್ಯೆ ಮತ್ತು ಗೌರವ ಯುವಕರನ್ನು ಹೆಚ್ಚಿನ ರೀತಿಯಲ್ಲಿ ಆಕರ್ಷಿಸುತ್ತಿದೆ ಎಂದು ಝಾ ಹೇಳಿದರು.ಬೆಂಗಳೂರು ಕೇಂದ್ರದ ನೇಮಕಾತಿ ವಿಭಾಗದ ಮುಖ್ಯಸ್ಥ ಕರ್ನಲ್ ಆರ್.ಎಸ್.ಚೌಹಾಣ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಶ್ರೀನಿವಾಸ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry