`ನೇಮಕಾತಿ ತಡೆ ಹಿಡಿದರೆ ಅಸಂವಿಧಾನಿಕ'

7

`ನೇಮಕಾತಿ ತಡೆ ಹಿಡಿದರೆ ಅಸಂವಿಧಾನಿಕ'

Published:
Updated:

ಗಂಗಾವತಿ: ಹಿಂದುಳಿದ ಹೈದಾರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವವರೆಗೂ ನೇಮಕಾತಿ ತಡೆ ಹಿಡಿದರೆ ಅದು ಅಸಂವಿಧಾನಿಕವಾಗುತ್ತದೆ ಎಂದು ಕೇಂದ್ರದ ಕಾರ್ಪೊರೇಟ್ ಮತ್ತು ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯಿಲಿ ಹೇಳಿದರು.ಭಾನುವಾರ ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಮಾರ್ಗ ಮಧ್ಯೆ ಮಾಜಿ ಸಂಸದ ಎಚ್.ಜಿ. ರಾಮುಲು ಅವರ ನಗರದ ನಿವಾಸಕ್ಕೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹೈ.ಕ.ಕ್ಕೆ ವಿಶೇಷ ಸ್ಥಾನಮಾನ ಲಭಿಸುವವರೆಗೂ ಈ ಭಾಗದಲ್ಲಿನ ಎಲ್ಲ ಸರ್ಕಾರಿ ನೇಮಕಾತಿಗಳನ್ನು ತಡೆ ಹಿಡಿಯುವಂತೆ ಹೈ.ಕ. ಹೋರಾಟ ಸಮಿತಿ ಒತ್ತಾಯಿಸುತ್ತಿರುವ ಬಗ್ಗೆ ಸುದ್ದಿಗಾರರು ಸಚಿವ ವೀರಪ್ಪ ಮೊಯಿಲಿ ಅವರ ಗಮನಕ್ಕೆ ತಂದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೇಮಕಾತಿ ತಡೆ ಹಿಡಿಯುವುದಕ್ಕಿಂತ ನಾಲ್ಕಾರು ದಿನಗಳಲ್ಲಿ ತಿದ್ದುಪಡಿ ಪ್ರಕಟಗೊಳ್ಳಲಿದೆ ಕೂಡಲೆ ರಾಜ್ಯ ಸರ್ಕಾರ ಎಚ್ಚೆತ್ತು ಅದನ್ನು ಅನುಷ್ಠಾನಕ್ಕೆ ತಂದರೆ ಈ ಭಾಗದ ಜನರಿಗೆ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದರು.ಹೈ.ಕ. ಉಸ್ತುವಾರಿ: ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳಿಗೆ ಕಾಂಗ್ರೆಸ್ ಪಕ್ಷವು ತಮ್ಮನ್ನು ಉಸ್ತುವಾರಿಯನ್ನಾಗಿ ನೇಮಿಸಿದೆ. ವೀಕ್ಷಕರ ವರದಿ ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುವುದು ಎಂದರು.ಇದಕ್ಕೂ ಮುನ್ನ ಪಕ್ಷ ಸಂಘಟನೆಗಾಗಿ ಜ.6ರಿಂದ 14ರವರೆಗೆ ಹೊಸಪೇಟೆಯಿಂದ ಕೂಡಲ ಸಂಗಮದ ವರೆಗೂ ಪಾದಯಾತ್ರೆ ನಡೆಸಲಾಗುವುದು. ಎಲ್ಲ ಜಿಲ್ಲೆ ತಾಲ್ಲೂಕು ಕೇಂದ್ರಗಳಲ್ಲಿ ಸಭೆ ನಡೆಸಿ ಕಾರ್ಯಕರ್ತರನ್ನು ಸಂಘಟಿಸಲಾಗುವುದು ಎಂದರು.ರಾಮುಲು ನೇತೃತ್ವ: ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಸಂಸದ  ಎಚ್. ಜಿ. ರಾಮುಲು ಅವರ ನೇತೃತ್ವ, ಮಾರ್ಗದರ್ಶನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ತಮ್ಮ ನೂರಾರು ಬೆಂಬಲಿಗರೊಂದಿಗೆ ಮಾಜಿ ಸಂಸದರ ನಿವಾಸಕ್ಕೆ ಆಗಮಿಸಿದ ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ ತಂಗಡಗಿ, ವೀರಪ್ಪ ಮೊಯಿಲಿ ಅವರಿಗೆ ಮಾಲಾರ್ಪಣೆ ಮಾಡಿ ಮೊಯಿಲಿ ಹಾಗೂ ಎಚ್.ಜಿ. ರಾಮುಲು ಅವರ ಪಾದಸ್ಪರ್ಶಿಸಿ ನೆರೆದವರ ಗಮನ ಸೆಳೆದರು.ಕೇಂದ್ರ ಸಚಿವ ವೀರಪ್ಪ ಮೊಯಿಲಿ ಆಗಮನದಿಂದ ಮಾಜಿ ಸಂಸದ ರಾಮುಲು ಅವರ ಇಲ್ಲಿನ ನಿವಾಸ ಭಾನುವಾರ ಕಾರ್ಯಕರ್ತರಿಂದ ತುಂಬಿತ್ತು. ಈ ಸಂದರ್ಭದಲ್ಲಿ ಕನಕಗಿರಿ ಕ್ಷೇತ್ರದ ಟಿಕೆಟ್ ಅಕಾಂಕ್ಷಿ ಮುಕುಂದ್‌ರಾವ್ ಭವಾನಿಮಠರೂ ಹಾಜರಿದ್ದರು.ಶಾಸಕ ಶಿವರಾಜ ತಂಗಡಗಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಮೊಯಿಲಿ ಮತ್ತು ರಾಮುಲು ಅವರನ್ನು ಅಭಿನಂದಿಸುತ್ತಿದ್ದಂತೆಯೆ ಕಾರ್ಯಕರ್ತರ ಗುಂಪಿನಿಂದ ಮುಕುಂದ್‌ರಾವ್ ಕಾಣದಂತೆ ಹಿಂದೆ ಸರಿದರು ಎಂದು ತಿಳಿದುಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry