ನೇಮಕಾತಿ ಮಂಡಳಿಯೇ ಸೂಕ್ತ ವ್ಯವಸ್ಥೆ

7
ನ್ಯಾಯಮೂರ್ತಿಗಳ ನೇಮಕ– ಸಿಜೆ ಪಿ. ಸದಾಶಿವಂ ಸ್ಪಷ್ಟ ಅಭಿಪ್ರಾಯ

ನೇಮಕಾತಿ ಮಂಡಳಿಯೇ ಸೂಕ್ತ ವ್ಯವಸ್ಥೆ

Published:
Updated:
ನೇಮಕಾತಿ ಮಂಡಳಿಯೇ ಸೂಕ್ತ ವ್ಯವಸ್ಥೆ

ನವದೆಹಲಿ: ಉನ್ನತ ನ್ಯಾಯಾಲಯಗಳ ನ್ಯಾಯ­ಮೂರ್ತಿಗಳ ನೇಮಕವನ್ನು ‘ನ್ಯಾಯ­ಮೂರ್ತಿ­ಗಳ ನೇಮಕಾತಿ ಮಂಡಳಿ’ (ಕೊಲಿಜಿ­ಯಂ ಸಿಸ್ಟಂ) ಮಾಡು­­ವುದೇ ಸೂಕ್ತ­ಎಂದು ಸುಪ್ರೀಂ­ಕೋರ್ಟ್ ಮುಖ್ಯ ನ್ಯಾಯ­ಮೂರ್ತಿ ಪಿ. ಸದಾಶಿವಂ ಶನಿ­ವಾರ ಪ್ರತಿಪಾದಿಸಿ­ದ್ದಾರೆ. ಆದರೆ, ಈ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಸಂಬಂಧ ಮಸೂದೆ ರೂಪಿಸುವುದು ಕೇಂದ್ರ ಸರ್ಕಾ­ರದ ವಿವೇಚನೆಗೆ ಬಿಟ್ಟಿದ್ದು' ಎಂದು ಹೇಳಿದ್ದಾರೆ.‘ಮುಖ್ಯ ನ್ಯಾಯಮೂರ್ತಿ ಆಗಿ ನಾನು ಮಸೂದೆ ಒಳಗೊಂಡಿರುವ ಅಂಶಗಳು ಮತ್ತು ಅದನ್ನು ಅಂಗೀಕರಿಸುವ ವಿಧಾನ ಕುರಿತು ಮಾತನಾಡುವುದಿಲ್ಲ. ಇದು ಸರ್ಕಾರದ ವಿವೇಚನೆಗೆ ಸಂಬಂಧಪಟ್ಟ ವಿಷಯವಾಗಿದ್ದು, ಅದನ್ನು ಒಪ್ಪುವುದು ಅಥವಾ ಬಿಡುವುದು ಜನರಿಗೆ ಬಿಟ್ಟಿದ್ದು. ನ್ಯಾಯಮೂರ್ತಿಗಳ ನೇಮಕಾತಿ ಆಯೋಗ ಕುರಿತು ಈಗಲೇ ಏನೂ ಹೇಳ­ಲಾಗದು’ ಎಂದು ಅವರು ‘ಕಾನೂನು ಪರಮೋಚ್ಚತೆ’ ಕುರಿತ ವಿಚಾರ ಸಂಕಿರ­ಣದಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರವು ನ್ಯಾಯಾಂಗ ಮತ್ತು ವಕೀಲ ಸಮುದಾಯವನ್ನು ವಿಶ್ವಾ­ಸಕ್ಕೆ ತೆಗೆದುಕೊಳ್ಳದೆ ತರಾ­ತು­ರಿ­ಯಲ್ಲಿ ರಾಜ್ಯ­ಸಭೆಯಲ್ಲಿ ಮಸೂದೆ ಮಂಡಿ­ಸಿರುವ ಕುರಿತು ಎತ್ತಿದ ಪ್ರಶ್ನೆಗೆ ಸಂಬಂಧಿಸಿದಂತೆ ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು.ಮಸೂದೆ ಪ್ರತಿಯನ್ನು ಒದಗಿಸುವಂತೆ ಏಪ್ರಿಲ್ 17ರಂದು ಕಾನೂನು ತಜ್ಞರು ಕಾನೂನು ಸಚಿವರಿಗೆ ಪತ್ರ ಬರೆದಿ­ದ್ದಾರೆ. ಆದರೆ, ಅವರಿಂದ ಇದುವರೆಗೆ ಉತ್ತರ ಬಂದಿಲ್ಲ ಎಂದು ಭಾರತೀಯ ವಕೀಲರ ಸಂಘದ ಅಧ್ಯಕ್ಷ ಅನಿಲ್ ದಿವಾನ್ ಆಕ್ಷೇಪ ವ್ಯಕ್ತಪಡಿಸಿದಾಗ ಸದಾ­ಶಿವಂ ಪ್ರತಿಕ್ರಿಯೆ ನೀಡಿದರು. ಈಗಲೂ ಸರ್ಕಾರ ಮತ್ತು ಕಾನೂನು ಇಲಾಖೆ ನ್ಯಾಯಮೂರ್ತಿಗಳ ನೇಮ­ಕಾತಿಗೆ ಸಂಬಂಧಿಸಿದಂತೆ `ನ್ಯಾಯ­ಮೂರ್ತಿ­ಗಳ ಸಮಿತಿ'ಗೆ ಸಲಹೆ ಕೊಡು­ವುದಕ್ಕೆ ಅವಕಾಶವಿದೆ. ಅದರ ಸಲಹೆ­ಯನ್ನು ಪರಿಗಣನೆಗೆ ತೆಗೆದುಕೊಳ್ಳ­ಲಾಗು­ತ್ತಿದೆ ಎಂದು ಮುಖ್ಯ ನ್ಯಾಯ­ಮೂರ್ತಿಗಳು ಸ್ಪಷ್ಟಪಡಿಸಿದರು.ಕಾನೂನು ಸಚಿವರು, ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿ ಒಪ್ಪಿಗೆ ದೊರೆಯು­ವ­ವರೆಗೂ ಯಾವುದೇ ಹೆಸರು ಅಂತಿಮ­ಗೊಳ್ಳುವುದಿಲ್ಲ. ಇಡೀ ಪ್ರಕ್ರಿಯೆ ಗುಪ್ತದಳ, ಸಂಬಂಧಪಟ್ಟ ಹೈಕೋರ್ಟ್ ಹಾಗೂ ಪ್ರಮುಖ ಗಣ್ಯರ ಸಲಹೆ, ಅಭಿಪ್ರಾಯಗಳನ್ನು ಆಧರಿಸಿದೆ ಎಂದು ಸದಾಶಿವಂ ವಿವರಿಸಿದರು. ನ್ಯಾಯಾಂಗ ಸರ್ಕಾರದಿಂದ ಪ್ರತ್ಯೇಕ­ವಾಗಿರುವ ವ್ಯವಸ್ಥೆ.

ಇದು ಪ್ರಜಾ­ಪ್ರಭುತ್ವದ ಆತ್ಮ. ನ್ಯಾಯಾಧೀಶರ ಆಯ್ಕೆ, ಶಿಸ್ತು ಮತ್ತು ಪದಚ್ಯತಿಗಳು ಸಂವಿಧಾನದಡಿ ನಡೆಯುವುದರಿಂದ ಹೊಣೆಗಾರಿಕೆ ಸಾಧ್ಯವಾಗಿದೆ. ಸ್ವತಂತ್ರ­ವಾದ, ಪಕ್ಷಪಾತವಿಲ್ಲದ ಶಕ್ತಿಯುತ­ವಾದ ನ್ಯಾಯಾಂಗ ವ್ಯವಸ್ಥೆಯ ಮೇಲೇ ಪ್ರಜಾಪ್ರಭುತ್ವದ ಯಶಸ್ಸು ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟರು.ನ್ಯಾಯಾಲಯದ ಪರಮೋಚ್ಚತೆ ಕಾಪಾ­ಡುವ ನಿಟ್ಟಿನಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಹೊಣೆ­ಗಾರಿಕೆ ಅತ್ಯಂತ ಪ್ರಮುಖವಾದ ಅಂಶಗಳು ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry