ನೇಮಕ ಬೇಗ ನಡೆಯಲಿ

7

ನೇಮಕ ಬೇಗ ನಡೆಯಲಿ

Published:
Updated:

ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳು  ಬಹಳ ದಿನಗಳಿಂದ ಖಾಲಿ ಉಳಿದಿವೆ. ಕೋಲಾರ, ಬೀದರ್, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ 2011ರಿಂದಲೇ ಅಧ್ಯಕ್ಷ ಸ್ಥಾನಗಳು ಖಾಲಿ ಬಿದ್ದಿವೆ.  ಇತರ ಹಲವು ಜಿಲ್ಲೆಗಳಲ್ಲಿ 2012ರಿಂದ ಇದೇ ಪರಿಸ್ಥಿತಿ ಇದೆ.ಗ್ರಾಹಕರ ವೇದಿಕೆಯ ರಚನೆ ಜನರಿಗೆ ಮಾಡುವ ಉಪಕಾರವಲ್ಲ; ಅಥವಾ ಅವರ ಮೆಚ್ಚುಗೆ ಗಳಿಸಲು ಹಮ್ಮಿಕೊಳ್ಳುವ ಜನಪ್ರಿಯ ಕಾರ್ಯಕ್ರಮವೂ ಅಲ್ಲ.  1986ರಲ್ಲಿ ಜಾರಿಗೆ ಬಂದ ಗ್ರಾಹಕರ ಹಕ್ಕುಗಳ ರಕ್ಷಣಾ ಕಾಯ್ದೆಯ ಅನ್ವಯ ಈ ವೇದಿಕೆಗಳನ್ನು ಸ್ಥಾಪಿಸಲೇಬೇಕು. ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ಇದು ಸರ್ಕಾರಕ್ಕೆ ಗೊತ್ತಿಲ್ಲದ ವಿಷಯವೇನಲ್ಲ.ಗ್ರಾಹಕರು ಉದ್ಯಮಗಳಿಂದ, ವರ್ತಕರಿಂದ ಮತ್ತು ಸೇವಾಧಾರಿತ ಸಂಸ್ಥೆಗಳಿಂದ ಶೋಷಣೆಗೆ ಒಳಗಾಗುವುದರ ವಿರುದ್ಧ ಚಳವಳಿ ತೀವ್ರಗೊಂಡು ವೇದಿಕೆ ರಚನೆಯ ಅನಿವಾರ್ಯ ಉಂಟಾಗಿ ಕಾನೂನುಬದ್ಧ ವೇದಿಕೆಗಳು ಅಸ್ತಿತ್ವಕ್ಕೆ ಬಂದಿವೆ.  ಎಲ್ಲಾ ಜಿಲ್ಲೆಗಳಲ್ಲಿ ಇವುಗಳ ರಚನೆ ಕಡ್ಡಾಯ. ಜಾಗತೀಕರಣದ ಫಲ ಮತ್ತು ಸರಾಸರಿ ಆದಾಯದ ಹೆಚ್ಚಳದ ಪರಿಣಾಮವಾಗಿ ಗ್ರಾಹಕರು ಖರೀದಿ ಮಾಡುವ ವಸ್ತುಗಳ ವೈವಿಧ್ಯ ಮತ್ತು  ಪ್ರಮಾಣ ಹೆಚ್ಚಿದೆ.ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದು ಬೀಳುತ್ತಿವೆ. ಯಾವುದು ಉತ್ತಮ, ಯಾವುದು ಕಳಪೆ ಎಂಬ ವ್ಯತ್ಯಾಸ  ತಿಳಿಯದೆ ಗ್ರಾಹಕರು ಮೋಸದ ಬಲೆಗೆ ಬೀಳುವುದು ಸಾಮಾನ್ಯವಾಗಿದೆ. ಅಂತಹ ಗ್ರಾಹಕರಿಗೆ ನ್ಯಾಯ ಒದಗಿಸಲು  ಗ್ರಾಹಕರ ವೇದಿಕೆ ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯ.ಪ್ರತಿಯೊಂದು ವಸ್ತುವಿನ ಗುಣಮಟ್ಟ ನಿರ್ಧರಿಸಲು ಬ್ಯೂರೊ ಆಫ್‌ ಸ್ಟಾಂಡರ್ಡ್‌ ಎನ್ನುವ ಸಂಸ್ಥೆ ಇದೆ. ಎಲ್ಲಾ ವಸ್ತುಗಳು ಇದರ ಮಾನ್ಯತೆ ಪಡೆಯಲೇ ಬೇಕು ಎನ್ನುವ ನಿಯಮವಿದೆ. ಆದರೆ ಈ ಕುರಿತು ಗ್ರಾಹಕರಿಗೆ ಹೆಚ್ಚಿನ ಅರಿವು ಇಲ್ಲ. ಮೋಸ ಹೋದರೂ ಮೂಕ ಪ್ರೇಕ್ಷಕರಾಗಿ ಉಳಿಯುವವರ ಸಂಖ್ಯೆಯೇ ಅಧಿಕ. ಜನರ ಅಜ್ಞಾನ, ವಂಚನೆ ಎಸಗುವವರಿಗೆ  ವರದಾನ ಆಗಿದೆ.ಉದ್ಯಮಗಳ ಮಧ್ಯೆ ಇಂದು ತೀವ್ರ ಪೈಪೋಟಿ ಇದೆ. ಕೊಳ್ಳುಬಾಕ ಸಂಸ್ಕೃತಿಯ ಲಾಭ ಪಡೆಯಲು ಬಹು ರಾಷ್ಟ್ರೀಯ ಉದ್ಯಮಗಳು ತೀವ್ರ  ಪೈಪೋಟಿಯಲ್ಲಿ ತೊಡಗಿವೆ.  ನಕಲಿ ಉಪಕರಣಗಳನ್ನು ಅಸಲಿ ಜತೆಯೇ ಮಾರಾಟಕ್ಕೆ ಇಡುವ ಕೆಟ್ಟ ಪ್ರವೃತ್ತಿ ಕೂಡ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಗ್ರಾಹಕರ ವೇದಿಕೆಗಳಿಗೆ ಶಕ್ತಿ ತುಂಬಬೇಕು.  ಕಾನೂನಿನ ತೊಡಕುಗಳಿದ್ದರೆ ಅದನ್ನು  ನಿವಾರಿಸಬೇಕು.  ಸರ್ಕಾರ, ಯಾವುದೇ ನೆಪ ಒಡ್ಡದೇ ಖಾಲಿ ಸ್ಥಾನಗಳ ಭರ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry