ಶನಿವಾರ, ನವೆಂಬರ್ 23, 2019
17 °C

ನೇರ ನಗದು: ಸಿಂಗ್ ಸಮರ್ಥನೆ

Published:
Updated:

ನವದೆಹಲಿ (ಪಿಟಿಐ): ಕೇಂದ್ರದ ಮಹತ್ವಾಕಾಂಕ್ಷಿ `ನೇರ ಹಣ ವರ್ಗಾವಣೆ ಯೋಜನೆ'ಯು ಹಣದ ಸೋರಿಕೆಯನ್ನು ತಡೆಗಟ್ಟುವ ಜೊತೆಗೆ, ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು ನೆರವಾಗುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸಮರ್ಥಿಸಿ ಕೊಂಡರು.ಇಲ್ಲಿ ನಡೆದ 8ನೇ ನಾಗರಿಕ ಸೇವಾ ದಿನಾಚರಣೆಯಲ್ಲಿ ಮಾತನಾಡಿದ ಅವರು, `ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರ ನಿಗ್ರಹ, ಪಾರದರ್ಶಕತೆ ಹಾಗೂ ಉತ್ತರಾದಾಯಿತ್ವವನ್ನು ಕಾಪಾಡಿಕೊಳ್ಳುವಲ್ಲಿ ಯುಪಿಎ ಸರ್ಕಾರ ಸುಸ್ಥಿರ ಪ್ರಯತ್ನ ನಡೆಸಿದೆ ಎಂದು ಪ್ರತಿಪಾದಿಸಿದರು.ಪ್ರಸ್ತುತ ಆಡಳಿತದಲ್ಲಿ ಹೊಸ ಹಾಗೂ ಆಧುನಿಕ ತಂತ್ರಜ್ಞಾನವನ್ನು ಸರ್ಕಾರ ಸಂಪೂರ್ಣವಾಗಿ ಬಳಸಿಕೊಳ್ಳಬೇಕಿದೆ. ದೇಶದ ಎಲ್ಲ ಪ್ರಜೆಗಳಿಗೂ ವಿಶಿಷ್ಟ ಗುರುತು ಸಂಖ್ಯೆ ನೀಡುವ ಆಧಾರ್ ಯೋಜನೆ ಆಧುನಿಕ ತಂತ್ರಜ್ಞಾನ ಬಳಕೆಗೆ ಉದಾಹರಣೆಯಾಗಿದೆ. ಆಧಾರ್ ಸಂಖ್ಯೆಯ ಮೂಲಕವೇ ಫಲಾನುಭವಿಗಳಿಗೆ ಸರ್ಕಾರದ  ಸೌಲಭ್ಯಗಳನ್ನು ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಆ ಯೋಜನೆಯನ್ನು ಜನರ ಬಳಕೆಗೆ ಬಿಡುಗಡೆ ಮಾಡಿದೆ ಎಂದರು.

`ಸೌಲಭ್ಯಗಳ ನೇರ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ಸ್ ಟ್ರಾನ್ಸ್‌ಫರ್- ಡಿಬಿಟಿ) ಯೋಜನೆಯಿಂದ ಸಹಾಯಧನ, ಶಿಷ್ಯ ವೇತನ ಮತ್ತು ಪಿಂಚಣಿಗಳಂತಹ ಯೋಜನೆಗಳ ಪ್ರಯೋಜನಗಳನ್ನು ಉದ್ದೇಶಿತ ಫಲಾನುಭವಿಗಳಿಗೆ  ತಲುಪಿಸುವಾಗ ಉಂಟಾಗುವ ವಿಳಂಬ ನಿಲ್ಲುತ್ತದೆ. ಈ ಯೋಜನೆಯನ್ನು ದೇಶದ 121 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ' ಎಂದು ವಿವರಿಸಿದರು.ಮಹಿಳೆಯರ ಸುರಕ್ಷತೆ ಸುಧಾರಿಸಲಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಪ್ರಧಾನಿ, `ಸಮಾಜದಲ್ಲಿರುವ ದುಷ್ಟ ಮನೋಭಾವವನ್ನು ಬೇರು ಸಹಿತ ಕಿತ್ತೊಗೆಯಲು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು.`ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡುತ್ತಿರುವ ಸುರಕ್ಷತೆ ಮತ್ತಷ್ಟು ಸುಧಾರಿಸಬೇಕು. ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಗಳು ಸಮಾಜ ಮತ್ತು ಸರ್ಕಾರ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತವಾಗುವ ಸೂಚನೆ ನೀಡಿವೆ' ಎಂದು ಹೇಳಿದರು.

ಚಿತ್ರ: ಪುಟ 9

ಪ್ರತಿಕ್ರಿಯಿಸಿ (+)