ನೇರ ನಗದು: ಸಿದ್ಧತೆಗೆ ಸೂಚನೆ

7
ಜನವರಿ 1ರಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ನೇರ ನಗದು: ಸಿದ್ಧತೆಗೆ ಸೂಚನೆ

Published:
Updated:

ನವದೆಹಲಿ (ಪಿಟಿಐ): ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಪದ್ಧತಿಯು ಜ.1ರಿಂದ ಚಾಲನೆಯಾಗಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವಂತೆ ಪ್ರಧಾನಿ ಸಚಿವಾಲಯವು (ಪಿಎಂಒ) ವಿವಿಧ ಸಚಿವಾಲಯಗಳಿಗೆ ಸೂಚಿಸಿದೆ.ಫಲಾನುಭವಿಗಳಿಗೆ ಶೀಘ್ರವಾಗಿ `ಆಧಾರ್' ಕಾರ್ಡ್ ಪಡೆಯಲು ಅನುಕೂಲ ಕಲ್ಪಿಸುವ ಸಲುವಾಗಿ ಶಿಬಿರಗಳನ್ನು ಆಯೋಜಿಸುವಂತೆಯೂ ಸಚಿವಾಲಯ ನಿರ್ದೇಶನ ನೀಡಿದೆ.ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ಜತೆಗೆ, ಖಾತೆ ಪುಸ್ತಕದಲ್ಲಿ ಆಧಾರ್ ಸಂಖ್ಯೆಯನ್ನೂ ನಮೂದಿಸಿರಬೇಕು ಎಂದು ಸಚಿವಾಲಯ ಹೇಳಿದೆ.ರಾಷ್ಟ್ರದ ಆಯ್ದ 51 ಜಿಲ್ಲೆಗಳಲ್ಲಿರುವ ತನ್ನ 34 ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ಯೋಜನೆಯನ್ನು ಕೇಂದ್ರ ಹಾಕಿಕೊಂಡಿದೆ.ಡಿ.10ರಿಂದ ಡಿ.15ರ ನಡುವಿನ ಅವಧಿಯಲ್ಲಿ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ (ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳನ್ನು ಹೊರತುಪಡಿಸಿ) ಒಂದು ದಿನದ ಸಭೆ ನಿಗದಿ ನಡೆಸಲು ಯೋಜನಾ ಆಯೋಗಕ್ಕೆ ಸೂಚಿಸಿದೆ. ಫಲಾನುಭವಿಗಳು ಆಧಾರ್ ಸಂಖ್ಯೆಗಾಗಿ ನೋಂದಾಯಿಸಲು ಬ್ಯಾಂಕ್‌ಗಳಿಗೇ ಅಧಿಕೃತ ರಿಜಿಸ್ಟ್ರಾರ್ ಸ್ಥಾನಮಾನ ನೀಡಲಾಗುವುದು ಎಂದೂ ಪಿಎಂಒ ತಿಳಿಸಿದೆ.ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ವಿವಿಧ ಸಚಿವಾಲಯಗಳು, 43 ಜಿಲ್ಲೆಗಳಲ್ಲಿ ತಕ್ಷಣದಿಂದಲೇ ಈ ಕುರಿತು ಪ್ರಚಾರ, ಮಾಹಿತಿ ಮತ್ತು ಮಾಗದರ್ಶನ ಆಂದೋಲನಗಳನ್ನು ನಡೆಸಲಿವೆ.  ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನ 8 ಜಿಲ್ಲೆಗಳಲ್ಲಿ ಈ ಕಾರ್ಯ ಡಿ.20ರ ನಂತರ ನಡೆಯಲಿದೆ ಎಂದು ಪಿಎಂಒ ತಿಳಿಸಿದೆ.ಇದಕ್ಕೆ ಪೂರಕವಾಗಿ ಯೋಜನಾ ಆಯೋಗವು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು/ ಹಣಕಾಸು ಕಾರ್ಯದರ್ಶಿಗಳೊಂದಿಗೆ ವೀಡಿಯೊ ಸಂವಾದವನ್ನೂ ನಡೆಸಲಿದೆ.ಕೇಂದ್ರದ ಯೋಜನೆಗಳಡಿಯ ಹಣವನ್ನು ಆಯಾ ಸಚಿವಾಲಯಗಳು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಿವೆ. ಕೇಂದ್ರ ಪ್ರಾಯೋಜಕತ್ವದ ಯೋಜನೆಗಳ ಹಣವನ್ನು ಈಗಿರುವಂತೆ ರಾಜ್ಯಗಳ ಮೂಲಕವೇ ಕಳುಹಿಸಲಾಗುವುದು. ಫಲಾನುಭವಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆಯಾಗಿದ್ದ ಸಂದರ್ಭದಲ್ಲಿ, ಜಂಟಿ ಬ್ಯಾಂಕ್ ಖಾತೆಗೆ (ಸಾಮಾನ್ಯವಾಗಿ ತಾಯಿ ಹೆಸರಿನೊಂದಿಗೆ) ಹಣ ವರ್ಗಾಯಿಸಲಾಗುವುದು ಎಂದು ಪಿಎಂಒ ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry