ಭಾನುವಾರ, ಮೇ 31, 2020
27 °C

ನೈಋತ್ಯ ರೈಲ್ವೆ: ನೇಮಕಾತಿ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಎರಡು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ‘ಡಿ’ ದರ್ಜೆ ನೌಕರರ ನೇಮಕಾತಿ ಪ್ರಕ್ರಿಯೆಯನ್ನು ಫೆಬ್ರುವರಿ ಮೂರನೇ ವಾರದಲ್ಲಿ ಪುನರಾರಂಭಿಸಲಾಗುತ್ತದೆ’ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಶುಕ್ರವಾರ ಪ್ರಕಟಿಸಿದ್ದಾರೆ.

‘ರೈಲ್ವೆ ಇಲಾಖೆಯಲ್ಲಿ ಬಿಹಾರ ಮೂಲದವರನ್ನೇ ತುಂಬಲಾಗುತ್ತಿದ್ದು, ಸ್ಥಳೀಯ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಗಲಾಟೆ ನಡೆದಿದ್ದರಿಂದ 2008ರಲ್ಲಿ ಪ್ರಾರಂಭವಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಆರಂಭದಲ್ಲೇ ಸ್ಥಗಿತಗೊಳಿಸಲಾಗಿತ್ತು. ಆಗ 4701 ಹುದ್ದೆಗಳ ಭರ್ತಿಗೆ ಉದ್ಯೋಗ ಪ್ರಕಟಣೆ (1/2007) ಹೊರಡಿಸಲಾಗಿತ್ತು.

ನೈಋತ್ಯ ರೈಲ್ವೆಯಲ್ಲಿ ‘ಡಿ’ ದರ್ಜೆಯ ಬಹಳ ಹುದ್ದೆಗಳು ಖಾಲಿ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಇದರಿಂದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ‘ಡಿ’ ದರ್ಜೆ ನೌಕರರನ್ನು ನೇಮಕ ಮಾಡಿಕೊಳ್ಳುವುದು ಅವಶ್ಯವಾಗಿದೆ. ಈಗಾಗಲೇ ನೇಮಕಾತಿ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವ 4701 ಹುದ್ದೆಗಳಲ್ಲದೆ, ಹೊಸದಾಗಿ 3007 ಹುದ್ದೆಗಳನ್ನು ತುಂಬಿಕೊಳ್ಳಲು ನಿರ್ಧರಿಸಲಾಗಿದ್ದು, ಉದ್ಯೋಗ ಪ್ರಕಟಣೆ (2/2010) ಹೊರಡಿಸಲಾಗಿದೆ. ಈ ಎರಡೂ ಪ್ರಕಟಣೆಗಳು ಮತ್ತು ಖಾಲಿ ಹುದ್ದೆಗಳು ಬೇರೆ, ಬೇರೆಯಾಗಿರುತ್ತವೆ’ ಎಂದು  ಹೇಳಿದ್ದಾರೆ.

‘2007ರ ಭರ್ತಿಗೆ ಕನಿಷ್ಠ ವಿದ್ಯಾರ್ಹತೆ ಎಂಟನೇ ತರಗತಿ ತೇರ್ಗಡೆ ಆಗಿರಬೇಕಿತ್ತು. ಆರನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ 2010ರ ಭರ್ತಿಗೆ ಎಸ್‌ಎಸ್‌ಎಲ್‌ಸಿ ಇಲ್ಲವೆ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮಾತ್ರ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ’ ಎಂದು ವಿವರಿಸಿದ್ದಾರೆ.

‘ದೇಶದ ಎಲ್ಲ 16 ರೈಲ್ವೆ ವಲಯಗಳಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯನ್ನು ಒಂದೇ ಅವಧಿಯಲ್ಲಿ ಮತ್ತು ಲಿಖಿತ ಪರೀಕ್ಷೆಯನ್ನು ಏಕಕಾಲಕ್ಕೆ ನಡೆಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಇದರಿಂದ ಸ್ಥಳೀಯ ಅಭ್ಯರ್ಥಿಗಳಿಗೆ ಆಯ್ಕೆಗೊಳ್ಳುವ ಅವಕಾಶ ಹೆಚ್ಚಾಗುತ್ತದೆ. ಹೊರ ರಾಜ್ಯಗಳ ಅಭ್ಯರ್ಥಿಗಳು ತಮ್ಮ ರಾಜ್ಯದಲ್ಲಿಯೇ ದೈಹಿಕ ಸಾಮರ್ಥ್ಯ ಹಾಗೂ ಲಿಖಿತ ಪರೀಕ್ಷೆ ಎದುರಿಸುತ್ತಾರೆ’ ಎಂದು ಅವರು ಹೇಳಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.