ಭಾನುವಾರ, ಜನವರಿ 26, 2020
28 °C

ನೈಜೀರಿಯಾ : ಭಾರತೀಯ ಸೇರಿ 162 ಜನ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಬುಜಾ (ಐಎಎನ್‌ಎಸ್): ನೈಜೀರಿಯಾದ ಕನೊ ನಗರದಲ್ಲಿ ಇಸ್ಲಾಂ ಉಗ್ರರು ಶನಿವಾರ ನಡೆಸಿದ ಮುಂಬೈ ಮಾದರಿಯ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಸೇರಿದಂತೆ 162 ಜನ ಸಾವಿಗೀಡಾಗಿದ್ದಾರೆ. ಇಬ್ಬರು ಮಕ್ಕಳನ್ನೂ ಒಳಗೊಂಡು ಆರು ಭಾರತೀಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.23 ವರ್ಷದ ಕೇವಲ್ ಕುಮಾರ್ ಕಾಳಿದಾಸ್ ರಜಪೂತ್ ಮೃತಪಟ್ಟ ಭಾರತೀಯ ಎಂದು ನೈಜೀರಿಯಾದಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.ಗುಜರಾತ್ ಮೂಲದ ಕಾಳಿದಾಸ್ ಕನೊದ ಕಂಪೆನಿಯೊಂದರಲ್ಲಿ ಸುಮಾರು 1 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಇಬ್ಬರು ಸಹೋದ್ಯೋಗಿಗಳಾದ ನೇಪಾಳದ ಹರಿ ಪ್ರಸಾದ್ ಭೂಷಾಲ್ ಮತ್ತು ರಾಜ್ ಸಿಂಗ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಉಗ್ರರು ಅವಿತುಕೊಂಡಿದ್ದ ಸ್ಥಳದಲ್ಲಿ ಈ ಇಬ್ಬರು ಇದ್ದ ಕಾರು ಪ್ರವೇಶಿಸಿದ್ದೇ ಇವರ ಸಾವಿಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎರಡು ಕುಟುಂಬಗಳ ಒಟ್ಟು ಆರು ಭಾರತೀಯರಿಗೆ ಬಾಂಬ್ ಸಿಡಿತದಿಂದ ತೂರಿಬಂದ ವಸ್ತುಗಳಿಂದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಸ್ಥಳೀಯ ಪತ್ರಕರ್ತ ಕೂಡ ಸಾವನ್ನಪ್ಪಿದ್ದಾನೆ.ದಾಳಿ ನಡೆದ ನಗರದ ವಿವಿಧ ಭಾಗಗಳಿಂದ ಗಾಯಗೊಂಡ ಜನರನ್ನು ಆಸ್ಪತ್ರೆಗೆ ತರಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸರ್ಕಾರಿ ಕಚೇರಿಗಳು ಮತ್ತು ಮಹತ್ವದ ಖಾಸಗಿ ಕಂಪೆನಿ ಕಟ್ಟಡಗಳ ಸುತ್ತಮುತ್ತ ಶಸ್ತ್ರಸಜ್ಜಿತ ಯೋಧರ ಬಿಗಿ ಪಹರೆ ಹಾಕಲಾಗಿದೆ.ಪೊಲೀಸ್ ಠಾಣೆ, ವಲಸೆ ಇಲಾಖೆ ಕಚೇರಿ, ಭದ್ರತಾ ಮುಖ್ಯ ಕಚೇರಿ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳನ್ನು ಗುರಿಯಾಗಿರಿಸಿ ಈ ಸರಣಿ ಬಾಂಬ್ ಹಾಗೂ ಗುಂಡಿನ ದಾಳಿಗಳನ್ನು ನಡೆಸಲಾಗಿದೆ. ನೈಜೀರಿಯಾದ ಎರಡನೇ ಅತಿ ದೊಡ್ಡ ನಗರವಾದ ಕನೊದಲ್ಲಿ ನಡೆದ ಈ ದಾಳಿಗಳ ಹೊಣೆಯನ್ನು ನಿಷೇಧಿತ ಬೋಕೊ ಹರಾಮ್ ಸಂಘಟನೆ ಹೊತ್ತುಕೊಂಡಿದೆ.ಜೈಲಿನಲ್ಲಿರುವ ತಮ್ಮ ಸಹವರ್ತಿಗಳನ್ನು ಬಿಡುಗಡೆ ಮಾಡಲು ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆಯ ವಕ್ತಾರ ಅಬುಲ್ ಖಾಖಾ ತಿಳಿಸಿದ್ದಾನೆ.ಅಬುಜಾದಲ್ಲಿರುವ ವಿಶ್ವಸಂಸ್ಥೆ ಮುಖ್ಯ ಕಚೇರಿ ಮೇಲೆ ಕಳೆದ ಜುಲೈನಲ್ಲಿ ಇದೇ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ 26 ಜನ ಸಾವಿಗೀಡಾಗಿದ್ದರು. ಕ್ರಿಸ್‌ಮಸ್ ದಿನದಂದು ಚರ್ಚ್ ಹೊರಗೆ ನಡೆಸಿದ ದಾಳಿಯಲ್ಲಿ 40 ಜನ ಅಸುನೀಗಿದ್ದರು.ತೀವ್ರ ಖಂಡನೆ: ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಮಾನವ ಜೀವಕ್ಕೆ ಕಂಟಕವಾಗುವ ಇಂತಹ ಕೃತ್ಯವನ್ನು ಸಹಿಸಲು ಆಗದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಭಾರತ, ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳೂ ಘಟನೆಯನ್ನು ಖಂಡಿಸಿವೆ. ಭಾರತದ ವಿದೇಶಾಂಗ ಸಚಿವ ಎಸ್. ಎಂ.ಕೃಷ್ಣ ಅವರು ಕಟುವಾದ ಶಬ್ದಗಳಲ್ಲಿ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಮೃತರಾದ ಭಾರತೀಯ ಪ್ರಜೆಯ ಕುಟುಂಬದವರನ್ನು ರಾಜತಾಂತ್ರಿಕ ಕಚೇರಿಯ ಅಧಿಕಾರಿಗಳು ಸಂಪರ್ಕಿಸಿದ್ದಾರೆ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)