ಬುಧವಾರ, ಮೇ 12, 2021
18 °C

`ನೈಜ ಘಟನೆಗೆ ಕಥೆಯ ರೂಪ ನೀಡಿದ ತೇಜಸ್ವಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಾವು ಹರಟೆಯ ಮಾತುಗಳಲ್ಲಿ ಮರೆಯುತ್ತಿದ್ದ ವಿಷಯಗಳನ್ನು ತೇಜಸ್ವಿ ಅದ್ಭುತ ಕಥೆಯಾಗಿ ಬೆಳೆಸುತ್ತಿದ್ದರು' ಎಂದು ಹಿರಿಯ ರೈತ ಮುಖಂಡ ಕಡಿದಾಳ್ ಶಾಮಣ್ಣ ಹೇಳಿದರು.`ಟೋಟಲ್ ಕನ್ನಡ' ಮಳಿಗೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು - ಬರಹ ಕುರಿತ `ಮತ್ತೆ ಮತ್ತೆ ತೇಜಸ್ವಿ' ಸಾಕ್ಷ್ಯಚಿತ್ರದ ಡಿವಿಡಿಯನ್ನು ಬಿಡುಗಡೆಗೊಳಿಸಿ  ಮಾತನಾಡಿದರು.`ನೈಜ ಘಟನೆಗಳಿಗೆ ತೇಜಸ್ವಿ ಕಥೆಯ ರೂಪ ನೀಡುತ್ತಿದ್ದರು. ಅವರ ಬಹುತೇಕ ಬರಹಗಳಿಗೆ ಅನುಭವವೇ ಆಧಾರ. ಕೇಳಿ, ನೋಡಿ, ಅನುಭವಿಸಿದ ಘಟನೆಗಳು ಅವರ ಮೂಲಕ ಉತ್ತಮ ಕಥೆಗಳಾಗಿ ಹೊರಬರುತ್ತಿದ್ದವು. `ಅಬಚೂರಿನ ಪೋಸ್ಟ್ ಆಫೀಸು', `ಮಾಯಾಮೃಗ' ಮುಂತಾದ ಕಥೆಗಳು ಹರಟೆಯ ಮಧ್ಯೆ ನಾನು ಹೇಳಿದ ಸಂಗತಿಗಳನ್ನು ಆಧರಿಸಿದಂಥವು' ಎಂದು ತೇಜಸ್ವಿ ಅವರ ಜತೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡರು.`ಇಂಟರ್‌ಮೀಡಿಯಟ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಎಂದು ಕೆಲವರು ಮೂದಲಿಸಿದಾಗ ಬರೆದೇ ಬದುಕುತ್ತೇನೆ ಎಂದು ನಿರ್ಧಾರ ಮಾಡಿದ ತೇಜಸ್ವಿ, ಅದನ್ನು ತಮ್ಮ ಜೀವನದಲ್ಲಿ ಸಾಧಿಸಿದರು. ಇವರ ಬರಹಗಳನ್ನು ಓದಿದ ಶಿವಕಾಮ ಕಾರಂತರು, ತೇಜಸ್ವಿ ತಮಗಿಂತಲೂ ಶ್ರೇಷ್ಠವಾದ ಬರಹಗಾರರು ಎಂದು ಪತ್ರ ಬರೆದಿದ್ದರು. ತೇಜಸ್ವಿ ಅವರ ಮನೆಗೆ ಬಂದು ತಂಗಿದ್ದ ಕಾರಂತರು ಕಂಪ್ಯೂಟರ್ ಬಗ್ಗೆ ಅಪಾರ ಕುತೂಹಲ ಹೊಂದಿದ್ದರು' ಎಂದು ನುಡಿದರು.ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, `ಪ್ರಶಸ್ತಿ - ಪ್ರಸಿದ್ಧಿಗಳಿಂದ ದೂರ ಉಳಿದವರು ತೇಜಸ್ವಿ. ಸಾಹಿತ್ಯ ವಲಯದಲ್ಲಿ ಮಾತ್ರವಲ್ಲದೇ ಸಾಮಾಜಿಕ ವಲಯದಲ್ಲೂ ಅವರ ಮಾತಿಗೆ ಬೆಲೆಯಿತ್ತು. ಕಾಫಿಗೆ ಮುಕ್ತ ಮಾರುಕಟ್ಟೆ ದೊರಕಿಸಿಕೊಡಲು ಹೋರಾಟ ಆರಂಭಿಸಿದ ಮೊದಲಿಗರು ತೇಜಸ್ವಿ' ಎಂದು ಹೇಳಿದರು.`ತೇಜಸ್ವಿ ನಗರವನ್ನು ಬಿಟ್ಟು ಮೂಡಿಗೆರೆಗೆ ಬಂದು ನೆಲೆಸಿದ್ದು ನಮಗೆಲ್ಲ ಆಶ್ಚರ್ಯದಂದಿತ್ತು. ಮೂಡಿಗೆರೆಯವನೇ ಆದ ನನಗೆ ತೇಜಸ್ವಿ ಅವರ ಬದುಕು ಹೆಚ್ಚು ಕುತೂಹಲಕರವಾಗಿತ್ತು. ಮೂಡಿಗೆರೆಯ ಪರಿಸರದಲ್ಲಿ ಅವರು ಸಾಮಾನ್ಯರಂತೆ ಬದುಕಿದವರು. ಆದರೂ ಆಯಸ್ಕಾಂತದ ವ್ಯಕ್ತಿತ್ವದ ಅವರನ್ನು ಕಾಣಲು ನಗರಗಳಿಂದ ಜನರು ಬರುತ್ತಿದ್ದರು' ಎಂದರು.

ಉಪನ್ಯಾಸಕ ನರೇಂದ್ರ ರೈ ದೇರ್ಲ, `ಟೋಟಲ್ ಕನ್ನಡ' ಮಳಿಗೆಯ ಮುಖ್ಯಸ್ಥ ವಿ.ಲಕ್ಷ್ಮೀಕಾಂತ ಮತ್ತಿತರರು ಉಪಸ್ಥಿತರಿದ್ದರು.ಕೆ.ಪರಮೇಶ್ವರ ಅವರು ನಿರ್ದೇಶಿಸಿರುವ ಡಿವಿಡಿಯ ಬೆಲೆ ್ಙ 125.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.