ಶನಿವಾರ, ನವೆಂಬರ್ 23, 2019
18 °C
ಗೆಲುವಿನ ಹಾದಿಗೆ ಮರಳುವ ಒತ್ತಡದಲ್ಲಿ ಗಂಭೀರ್ ಬಳಗ

ನೈಟ್ ರೈಡರ್ಸ್- ಸೂಪರ್ ಕಿಂಗ್ಸ್ ಹೋರಾಟ

Published:
Updated:

ಕೋಲ್ಕತ್ತ (ಪಿಟಿಐ): ಹಾಲಿ ಚಾಂಪಿಯನ್ ಕೋಲ್ಕತ್ತ   ನೈಟ್‌ರೈಡರ್ಸ್ ತಂಡದವರು ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಶನಿವಾರ ಎರಡು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.ಗೌತಮ್ ಗಂಭೀರ್ ನೇತೃತ್ವದ ರೈಡರ್ಸ್ ಆಟಗಾರರು ಈ ಹಿಂದಿನ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ಸೋಲು ಅನುಭವಿಸಿದ್ದರು. ರೈಡರ್ಸ್‌ಗೆ ಈ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಅವಕಾಶವಿತ್ತು. ಆದರೆ ಬ್ಯಾಟ್ಸ್‌ಮನ್‌ಗಳು ಕೊನೆಯಲ್ಲಿ ಎದುರಾದ ಒತ್ತಡವನ್ನು ಮೆಟ್ಟಿನಿಲ್ಲಲು ವಿಫಲರಾಗಿದ್ದರಿಂದ ನಾಲ್ಕು ರನ್‌ಗಳ ಸೋಲು ಎದುರಾಗಿತ್ತು.ಇದೀಗ ತವರು ನೆಲ ಎನಿಸಿರುವ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಡಲಿರುವ ಕಾರಣ ಗಂಭೀರ್ ಬಳಗ ಗೆಲುವಿನ ಹಾದಿಗೆ ಮರಳುವ ವಿಶ್ವಾಸ ಹೊಂದಿದೆ. ಆದರೆ ಎದುರಾಳಿ ತಂಡ ಸೂಪರ್ ಕಿಂಗ್ಸ್ ಪ್ರಮುಖ ಆಟಗಾರರನ್ನು ಒಳಗೊಂಡಿದ್ದು, ಜಯ ನಿರೀಕ್ಷಿಸಿದಷ್ಟು ಸುಲಭವಲ್ಲ. ಮಾತ್ರವಲ್ಲ ಮಹೇಂದ್ರ ಸಿಂಗ್ ದೋನಿ ಬಳಗ ಹಿಂದಿನ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಭರ್ಜರಿ ಜಯ ಪಡೆದಿತ್ತು. ಇದರಿಂದ ತಂಡದ ಆಟಗಾರರ ಆತ್ಮವಿಶ್ವಾಸ ಸಹಜವಾಗಿ ಹೆಚ್ಚಿದೆ.ಆಡಿದ ಐದು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿರುವ ಕೆಕೆಆರ್ `ಪ್ಲೇ ಆಫ್' ಹಂತ ಪ್ರವೇಶಿಸಬೇಕಾದರೆ ಈಗಿನಿಂದಲೇ ಎಚ್ಚೆತ್ತುಕೊಳ್ಳುವುದು ಅಗತ್ಯ. ಗಂಭೀರ್ ಬಳಗ ತನ್ನ ಮುಂದಿನ ಮೂರೂ ಪಂದ್ಯಗಳನ್ನು ಈಡನ್ ಗಾರ್ಡನ್ಸ್‌ನಲ್ಲಿ ಆಡಲಿದರೆ. ಈ ಮೂರರಲ್ಲೂ ಗೆಲುವು ಪಡೆಯುವುದು ತಂಡದ ಗುರಿ. ಪ್ರಸಕ್ತ ಋತುವಿನಲ್ಲಿ ಇಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ತಂಡ ಯಶಸ್ಸು ಸಾಧಿಸಿದೆ.ಬ್ಯಾಟ್ಸ್‌ಮನ್‌ಗಳು ಸಂಘಟಿತ ಪ್ರದರ್ಶನ ನೀಡದೇ ಇರುವುದು ತಂಡದ ವೈಫಲ್ಯಕ್ಕೆ ಕಾರಣ. ಇದುವರೆಗೆ ಮಿಂಚಿರುವುದು ಗಂಭೀರ್ ಮತ್ತು ಎಯೊನ್ ಮಾರ್ಗನ್ ಮಾತ್ರ. ಯೂಸುಫ್ ಪಠಾಣ್ ಹಾಗೂ ಮನೋಜ್ ತಿವಾರಿ ಲಯ ಕಂಡುಕೊಳ್ಳದೇ ಇರುವುದರಿಂದ ತಂಡದ ಸಮತೋಲನ ತಪ್ಪಿದೆ.ಬ್ರೆಂಡನ್ ಮೆಕ್ಲಮ್ ಈ ಪಂದ್ಯದಲ್ಲಾದರೂ ಅವಕಾಶ ಗಿಟ್ಟಿಸುವರೇ ಎಂಬ ಕುತೂಹಲದಲ್ಲಿ ಅಭಿಮಾನಿಗಳು ಇದ್ದಾರೆ. ರೈಡರ್ಸ್ ತಂಡದ ಬೌಲರ್‌ಗಳು ಎದುರಾಳಿ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಬ್ಯಾಟಿಂಗ್ ವೈಫಲ್ಯದ ಕಾರಣ   ಬೌಲರ್‌ಗಳ ಪರಿಶ್ರಮಕ್ಕೆ ಫಲ ಲಭಿಸುತ್ತಿಲ್ಲ.ಮತ್ತೊಂದೆಡೆ ದೋನಿ ಬಳಗ ಸಂಘಟಿತ ಆಟ ತೋರುತ್ತಿದ್ದು, ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮೈಕ್ ಹಸ್ಸಿ ಮತ್ತು ರವೀಂದ್ರ ಜಡೇಜ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವುದು ತಂಡದ ಬಲ ಹೆಚ್ಚಿಸಿದೆ. ದೋನಿ ಅಲ್ಲದೆ ಸುರೇಶ್ ರೈನಾ ಮತ್ತು ಮುರಳಿ ವಿಜಯ್ ಮಿಂಚಿದರೆ ಸೂಪರ್ ಕಿಂಗ್ಸ್‌ಗೆ ಬೃಹತ್ ಮೊತ್ತ ಪೇರಿಸುವುದು ಕಷ್ಟವಾಗದು.

ಈ ಪಂದ್ಯ ಇಬ್ಬರು ಪ್ರಮುಖ ಸ್ಪಿನ್ನರ್‌ಗಳಾದ ಸುನಿಲ್ ನಾರಾಯಣ್ ಮತ್ತು ಆರ್. ಅಶ್ವಿನ್ ನಡುವಿನ ಹೋರಾಟ ಎನಿಸಿಕೊಂಡಿದೆ. ಇವರಲ್ಲಿ ಅಂತಿಮ ನಗು ಬೀರುವುದು ಯಾರು ಎಂಬುದನ್ನು ನೋಡಬೇಕು.

ಪ್ರತಿಕ್ರಿಯಿಸಿ (+)