ಶುಕ್ರವಾರ, ನವೆಂಬರ್ 22, 2019
27 °C

`ನೈತಿಕ ಮೌಲ್ಯ ಬಿತ್ತುವ ಶಿಕ್ಷಣ ಅಗತ್ಯ'

Published:
Updated:

ಹಾವೇರಿ: `ಆಧುನಿಕ ಶಿಕ್ಷಣ ಪದ್ದತಿಯಿಂದ ನೈತಿಕತೆ ಅಧಃಪತನ ಹೊಂದುತ್ತಿರುವ ಇಂದಿನ ಸಂದರ್ಭದಲ್ಲಿ ಗುರುಕುಲ ಮಾದರಿಯ ಶಿಕ್ಷಣದ ಮೂಲಕ ಆಧುನಿಕ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ಬಿತ್ತುತ್ತಿರುವ ಸಾಯಿ ಚಂದ್ರ ಗುರುಕುಲ ಶಾಲೆಯ ಕಾರ್ಯ ಶ್ಲಾಘನೀಯ' ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಬಣ್ಣಿಸಿದರು.ನಗರದ ಮಾಗಾವಿ ಶಿಕ್ಷಣ ಸಂಸ್ಥೆಯ ಸಾಯಿ ಚಂದ್ರ ಗುರುಕುಲ ಶಾಲೆಯ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.`ಕೇವಲ ವಿದ್ಯೆ ಕಲಿಸುವುದು ಅಷ್ಟೇ ಶಿಕ್ಷಣವಲ್ಲ. ವಿದ್ಯೆಯೊಂದಿಗೆ ವಿನಯ, ಗುರುಹಿರಿಯರಿಗೆ ಗೌರವ, ನೈತಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣ ನೀಡುವುದು ಶಿಕ್ಷಣದ ಮುಖ್ಯ ಗುರಿಯಾಗಬೇಕು. ಇಂತಹ ಮೌಲ್ಯವನ್ನು ಮೊದಲು ಶಿಕ್ಷಕರು ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಶಿಕ್ಷಣ ಸಾರ್ಥಕವಾಗುತ್ತದೆ' ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.`ಗುರುಕುಲ ತನ್ನ ಹೆಸರಿಗೆ ತಕ್ಕಂತೆ ಆಧುನಿಕ ಭರಾಟೆಯಲ್ಲೂ ಗುರುಕುಲ ಮಾದರಿ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಉತ್ತಮ ಬೆಳೆವಣಿಗೆ. ಇಲ್ಲಿಯ ಶಿಕ್ಷಕರೂ ವಿದ್ಯಾರ್ಥಿಗಳಲ್ಲಿ ನೈತಿಕತೆ ಬಿತ್ತಲು ಸಮರ್ಥರಿದ್ದಾರೆ' ಎಂದರು.ಶಾಲೆಯ ಮುಖ್ಯ ಶಿಕ್ಷಕಿ ರಕ್ಷಿತಾ ಮಾಗಾವಿ ಮಾತನಾಡಿ, `ಕೇವಲ ಹಣಗಳಿಕೆಯೊಂದೆ ಶಿಕ್ಷಣ ಸಂಸ್ಥೆಗಳ ಉದ್ದೇಶವಾಗಬಾರದು. ಹಾಗೆಯೇ ಆರ್ಥಿಕವಾಗಿ ಸಬಲತೆ ಇಲ್ಲದೆ ಗುಣಮಟ್ಟದ ಶಿಕ್ಷಣ ನೀಡುವುದು ಅಷ್ಟೇ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ' ಎಂದರು.`ಈ ವರ್ಷದ ವಾರ್ಷಿಕೋತ್ಸವವನ್ನು ಸ್ವಾಮಿವಿವೇಕಾನಂದ ಅವರಿಗೆ ಸಂಸ್ಥೆ ಸಮರ್ಪಿಸಲು ಉದ್ದೇಶಿಸಿದ್ದು, ಅವರ ಆದರ್ಶ, ತತ್ವ, ಸಿದ್ಧಾಂತಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿ' ಎಂದು ಆಶಿಸಿದರು.

ಸಂಸ್ಥೆಯ ಚೇರಮನ್ ರಾಜೀವ್ ಮಾಗಾವಿ ಅಧ್ಯಕ್ಷತೆ ವಹಿಸಿದ್ದರು. ರಶ್ಮಿ ಮಾಗಾವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಸಿಬ್ಬಂದಿಗಳಾದ ಪದ್ಮಾ ನಾಗನೂರ, ನೀಲಮ್ಮ ಮೆಣಸಿನಕಾಯಿ, ವೀಣಾ ಪಾಟೀಲ, ರಾಜೇಶ್ವರಿ ಓಲೇಕಾರ, ಜ್ಯೋತಿ, ಪದ್ಮಾವತಿ, ಶೋಭಾ, ಸಂಜೋತಾ, ಆನಿಮಠ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)