`ನೈತಿಕ ಶಿಕ್ಷಣದ ಜತೆ ಸಾಮಾಜಿಕ ಮೌಲ್ಯ ಕಲಿಸಿ'

7
ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ

`ನೈತಿಕ ಶಿಕ್ಷಣದ ಜತೆ ಸಾಮಾಜಿಕ ಮೌಲ್ಯ ಕಲಿಸಿ'

Published:
Updated:

ಶಿವಮೊಗ್ಗ: ಶಿಕ್ಷಣ ಬದುಕಿನ ಸಮಸ್ಯೆಗಳಿಗೆ ಸಂಬಂಧ ಪಟ್ಟಿರಬೇಕು. ಇಂತಹ ಶಿಕ್ಷಣ ಪಡೆದವರು ಮಾತ್ರ ಸಮಾಜಮುಖಿಯಾಗಲು ಸಾಧ್ಯ. ಇಂತಹ ಬದುಕನ್ನು ನೀಡಲು ಸಾಧ್ಯವಾಗುವುದು ಶಿಕ್ಷಕರಿಗೆ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ನಗರದ ನೆಹರೂ ಕ್ರೀಡಾಂಗಣದ ಆವರಣದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2013ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜದಲ್ಲಿ ಶಿಕ್ಷಕರ ಸ್ಥಾನ ಮಹತ್ವದ್ದು, ಅಂತೆಯೇ ಗುರು-ಶಿಷ್ಯರ ನಡುವಿನ ಸಂಬಂಧವೂ ಮಹತ್ವದ್ದಾಗಿದೆ. ಉತ್ತಮ ಶಿಕ್ಷಕರು ತಮ್ಮ ಸೇವೆಯಿಂದ ಕಂಡುಕೊಳ್ಳುವ ತೃಪ್ತಿ ಅನನ್ಯವಾದುದು ಎಂದ ಅವರು, ಶಿಕ್ಷಕರು ವಿದ್ಯಾರ್ಥಿಗಳನ್ನು ಅಕ್ಕರೆ, ಅಭಿಮಾನದಿಂದ ಕಾಣಬೇಕು. ಸಮಾಜದಲ್ಲಿ ಸಾಮಾಜಿಕ ಮೌಲ್ಯಗಳು ಅಧಃಪತನಗೊಳ್ಳುತ್ತಿವೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಶಿಕ್ಷಕರು ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಮೌಲ್ಯಗಳನ್ನು ತಿಳಿಸಿಕೊಡಬೇಕು ಎಂದರು.ಶಿಕ್ಷಕರಾಗಿ ಕಾರ್ಯನಿರ್ವಹಿಸುವವರು ಯಾವುದೇ ವ್ಯಸನಿಗಳಾಗಿರಬಾರದು, ದುರಭ್ಯಾಸಗಳನ್ನು ಹೊಂದಿರಬಾರದು. ಶಿಕ್ಷಕ ಉತ್ತಮ ಗುಣ, ನಡತೆ, ಶೀಲ ಹೊಂದಿದ್ದಾಗ ಸಹಜವಾಗಿ ವಿದ್ಯಾರ್ಥಿಗಳು ಅಂತಹ ಶಿಕ್ಷಕನನ್ನು ಅನುಸರಿಸುತ್ತಾರೆ ಎಂದು ಹೇಳಿದರು.ಅತಿಥಿಗಳಾಗಿದ್ದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಈಗ ಹೊಸ ಯುಗದಲ್ಲಿ ಇದ್ದೇವೆ. ವಿಜ್ಞಾನ, ಬದಲಾವಣೆಗೆ ಈ ಯುಗ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ಯುಗಕ್ಕೆ ತಕ್ಕ ನಾಗರಿಕರನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.ಶಿಕ್ಷಕ ಸಮಾಜದ ಶಿಲ್ಪಿ. ಶಿಕ್ಷಕ ಸಕಾಲಿಕ ಮಾರ್ಗದರ್ಶಕನಾಗಿ ಶಿಕ್ಷಣ ನೀಡುವ ಜತೆಗೆ ಶ್ರಮಿಕರಿಗೆ ಉದ್ಯೋಗ, ಹಸಿದ ಒಡಲಿಗೆ ಅನ್ನ, ಹಾಗೂ ಸೂರು ದೊರಕಿಸಿಕೊಳ್ಳುವ ಹಾಗೂ ಸಮದ್ಧ ರಾಷ್ಟ್ರಕಟ್ಟುವ ಕನಸನ್ನು ಸಾಕಾರಗೊಳಿಸುವ ಹಾಗೆ ಮನಸ್ಸುಗಳನ್ನು ಸೃಜಿಸಬೇಕು ಎಂದರು.ಸಮಾರಂಭದಲ್ಲಿ ರಾಜ್ಯಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸಚಿವ ಕಿಮ್ಮನೆ ರತ್ನಾಕರ ಪ್ರಶಸ್ತಿ ಪ್ರದಾನ ಮಾಡಿ, ರಾಜ್ಯದ 51,000 ಶಾಲಾ ಕಟ್ಟಡಗಳಲ್ಲಿ ಸೌಲಭ್ಯ ವಂಚಿತವಾಗಿರುವ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.ಸಾರ್ವಜನಿಕರ ಸಹಭಾಗಿತ್ವದಲ್ಲಿ ಶಿಕ್ಷಕ-ವಿದ್ಯಾರ್ಥಿ- ಪೋಷಕ ಮತ್ತು ಸಮುದಾಯದ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಗ್ರಾಮೀಣ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಗಮನಹರಿಸಲಾಗುವುದು ಎಂದರು.ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಉಪಾಧ್ಯಕ್ಷೆ ಹೇಮಾ ಪಾವನಿ, ಶಾಸಕರಾದ ಎಂ.ಜೆ.ಅಪ್ಪಾಜಿ, ಶಾರದಾ ಪೂರ‌್ಯನಾಯ್ಕ, ಮಧು ಬಂಗಾರಪ್ಪ, ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry