ನೈರ್ಮಲ್ಯದ ಬರ- ಅವ್ಯವಸ್ಥೆಯ ಆಗರ- ಸುರಕ್ಷೆ ದೂರ

7

ನೈರ್ಮಲ್ಯದ ಬರ- ಅವ್ಯವಸ್ಥೆಯ ಆಗರ- ಸುರಕ್ಷೆ ದೂರ

Published:
Updated:

ಬೆಂಗಳೂರು: ಸಿಟಿ ರೈಲು ನಿಲ್ದಾಣದ ಪ್ರಯಾಣಿಕರ ಸುರಂಗ ಮಾರ್ಗ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲದಿರುವುದು, ಅಸ್ತವ್ಯಸ್ತವಾಗಿರುವ ಒಳಚರಂಡಿ ವ್ಯವಸ್ಥೆ, ದುರ್ನಾತ, ಅಲ್ಲಲ್ಲಿ ಸೋರುವ ಛಾವಣಿ ಮತ್ತಿತರ ಸಮಸ್ಯೆಗಳಿಂದಾಗಿ ಪ್ರಯಾಣಿಕರು ಪದೇ ಪದೇ ತೊಂದರೆ ಅನುಭವಿಸುವಂತಾಗಿದೆ.ಪ್ರತಿದಿನ 70 ಸಾವಿರಕ್ಕೂ ಅಧಿಕ ಪ್ರಯಾಣಿಕರು ನಿಲ್ದಾಣವನ್ನು ಉಪಯೋಗಿಸುತ್ತಾರೆ. ಪಾದಚಾರಿ ಮೇಲ್ಸೇತುವೆಗಳು ಇದ್ದರೂ ಸುಮಾರು ಅರ್ಧದಷ್ಟು ಪ್ರಯಾಣಿಕರು ನೆಚ್ಚಿಕೊಂಡಿರುವುದು ಸುರಂಗ ಮಾರ್ಗವನ್ನು.

ಸುಮಾರು 300 ಮೀಟರ್ ಉದ್ದದ ಸುರಂಗ ಮಾರ್ಗ ನಿಲ್ದಾಣದ 10 ಪ್ಲಾಟ್‌ಫಾರ್ಮ್‌ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇದನ್ನು ಎರಡು ಭಾಗಗಳಾಗಿ ವಿಭಜಿಸಿದ್ದರೂ ಇನ್ನೊಂದು ಬದಿಯಲ್ಲಿ ಸಂಚರಿಸಲು ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದರಿಂದ ಒಂದು ಭಾಗದಲ್ಲಿ ಮಾತ್ರವೇ ಜನದಟ್ಟಣೆ ಹೆಚ್ಚಿರುತ್ತದೆ.ಸುರಂಗಕ್ಕೆ ಪ್ರವೇಶ ಕಲ್ಪಿಸುವ ಮೆಟ್ಟಿಲುಗಳು ನುಣುಪಾಗಿದ್ದು ಅಲ್ಲಲ್ಲಿ ಜಿನುಗುವ ನೀರಿನಿಂದಾಗಿ ಅನೇಕರು ಜಾರಿ ಬಿದ್ದ ಉದಾಹರಣೆಗಳಿವೆ. ಸುರಂಗ ಮಾರ್ಗ ಇರುವ ಬಗ್ಗೆ ಯಾವುದೇ ಫಲಕ ಕೂಡ ಇಲ್ಲಿಲ್ಲ. ಇನ್ನು ಇದರ ಒಳ ಪ್ರವೇಶಿಸಿದರೆ ಅದು ಬೇರೆಯದೇ ನರಕ. ಎರಡೂ ಬದಿಯ ಗೋಡೆಗಳಲ್ಲಿ ಉಗುಳು, ಗುಟ್ಕಾ, ಎಲೆ ಅಡಿಕೆ ಕಲೆಗಳು ಪ್ರಯಾಣಿಕರನ್ನು ಸ್ವಾಗತಿಸುತ್ತವೆ. ನಿಲ್ದಾಣದಲ್ಲಿ ಧೂಮಪಾನ ನಿಷೇಧಿಸಿದ್ದರೂ ಇಲ್ಲಿನ ಸುರಂಗ ಮಾರ್ಗದಲ್ಲಿ ಬೀಡಿ ಸಿಗರೇಟಿನ ತುಂಡುಗಳಿಗೆ ಕೊರತೆ ಇಲ್ಲ!ಜನ ಸಂಚರಿಸುವ ಮಾರ್ಗದ ಎರಡೂ ಭಾಗದಲ್ಲಿ ಚರಂಡಿ ಇದ್ದು ನಿರ್ವಹಣೆ ಕೊರತೆಯಿಂದಾಗಿ ಇವು ದುರ್ನಾತ ಬೀರುತ್ತಿವೆ. ಗುರುವಾರ ಇಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ನೀರು ಸುರಂಗದ ಎರಡೂ ಬದಿಯ ಮಾರ್ಗಗಳನ್ನು ಆವರಿಸಿ ಇಲ್ಲಿ ಸಂಚಾರವೇ ದುಸ್ಸಾಧ್ಯವಾಗಿತ್ತು. ಅದೇ ನೀರು 7-8ನೇ ಪ್ಲಾಟ್‌ಫಾರ್ಮ್‌ನ ಮಧ್ಯದಲ್ಲಿರುವ ಲಿಫ್ಟ್‌ನೊಳಗೂ ನುಗ್ಗಿ ಅವಾಂತರ ಸೃಷ್ಟಿಸಿತ್ತು.ಅದೇ ಕೊಳಚೆ ನೀರಿನಲ್ಲಿ ವಿಧಿಯಿಲ್ಲದೆ ಸಾಗಿ ಬಂದ ವೃತ್ತಪತ್ರಿಕೆ ಮಾರುವವರೊಬ್ಬರು ಪ್ರತಿಕ್ರಿಯೆ ನೀಡಿ, `ಸುರಂಗ ಮಾರ್ಗದಲ್ಲಿ ಇಂಥ ಸಮಸ್ಯೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುವುದಿಲ್ಲ. ಎಲ್ಲಾ ಮುಗಿದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ತರಾತುರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮತ್ತೆ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಿಲ್ಲ~ ಎಂದರು.ಸುರಂಗದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಆ ಬಗ್ಗೆ ಯಾವುದೇ ಮಾಹಿತಿ ಫಲಕ ಹಾಕುವುದಿಲ್ಲ. ಕಾಮಗಾರಿ ನಡೆಯುತ್ತಿರುವುದು ಸುರಂಗ ಪ್ರವೇಶಿಸಿದ ಬಳಿಕವಷ್ಟೇ ಜನರಿಗೆ ತಿಳಿಯುತ್ತದೆ ಎಂಬುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಸುರಂಗದ ಛಾವಣಿಯೂ ಅಲ್ಲಲ್ಲಿ ಸೋರುತ್ತದೆ. ಮಳೆ ಇದ್ದರೂ ಇಲ್ಲದಿದ್ದರೂ ಛಾವಣಿ ಮಾತ್ರ ಸದಾ ತೇವವಾಗಿಯೇ ಇರುತ್ತದೆ. ಮೇಲ್ಭಾಗದಿಂದ ತೊಟ್ಟಿಕ್ಕುವ ನೀರು ಪ್ರಯಾಣಿಕರಿಗೆ ಇರುಸು-ಮುರುಸು ಉಂಟುಮಾಡುತ್ತದೆ. ಎರಡೂ ಬದಿಯ ಗೋಡೆಗಳಲ್ಲಿ ಸೌಂದರ್ಯವನ್ನು ಹೆಚ್ಚಿಸಬೇಕಾದ ಫಲಕಗಳಲ್ಲಿ ಚಿತ್ರಗಳು ಮಾಯವಾಗಿ ನಿರರ್ಥಕತೆಯನ್ನು ಸಾರುತ್ತಿವೆ.ಸುರಂಗ ನಿರ್ಮಾಣವಾಗಿ ಅನೇಕ ದಶಕಗಳೇ ಕಳೆದಿದ್ದರೂ ಇದುವರೆಗೂ ಹವಾನಿಯಂತ್ರಿತ ವ್ಯವಸ್ಥೆಯಾಗಲಿ ಗಾಳಿಯಾಡಲು ಅವಶ್ಯಕವಾದ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆ ತಂದೊಡ್ಡಿದೆ. ಅಲ್ಲಲ್ಲಿ ಕಾಣುವ ಟ್ಯೂಬ್‌ಲೈಟ್ ಹೊರತುಪಡಿಸಿದರೆ ಸೂಕ್ತ ರೀತಿಯಲ್ಲಿ ಬೆಳಕು ಸುರಂಗ ಮಾರ್ಗವನ್ನು ಪ್ರವೇಶಿಸಲು ಪ್ರತ್ಯೇಕ ವ್ಯವಸ್ಥೆಗಳಿಲ್ಲ. ವಿದ್ಯುತ್ ತೊಂದರೆ ಉಂಟಾದರೆ ಕತ್ತಲಲ್ಲಿಯೇ ಸುರಂಗ ಸಂಚಾರ ಅನಿವಾರ್ಯ ಎಂಬುದು ಪ್ರಯಾಣಿಕರ ಅಳಲು.ಶುಚಿತ್ವ ಕಾಪಾಡಲು ಹಾಗೂ ಸುರಂಗದ ನಿರ್ವಹಣೆಗೆ ಆಧುನಿಕ ಸಲಕರಣೆಗಳನ್ನು ಬಳಸುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಕೆಲವು ಕೆಲಸಗಾರರು. ಇಡೀ ಸುರಂಗವನ್ನು ಶುಚಿಗೊಳಿಸಲು ಗಂಟೆಗಟ್ಟಲೆ ಹಿಡಿಯುತ್ತದೆ. ಅಲ್ಲದೆ ಇಲ್ಲಿ ನಿರಂತರವಾಗಿ ಜನರ ಸಂಚಾರ ಇರುವುದರಿಂದ ಶುಚಿ ಕಾರ್ಯಕ್ಕೆ ಅಡಚಣೆಯಾಗುತ್ತದೆ. ಹೀಗಾಗಿ ನಿರ್ವಹಣೆಗೆ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ಆದರೆ ಅಧಿಕಾರಿಗಳು ಹೇಳುವುದೇ ಬೇರೆ. `ಸುರಂಗ ಮಾರ್ಗದಲ್ಲಿ ಶುಚಿತ್ವದ ಸಮಸ್ಯೆ ಇಲ್ಲ. ಸಾಕಷ್ಟು ಕೆಲಸಗಾರರನ್ನು ಇದಕ್ಕಾಗಿಯೇ ನೇಮಿಸಿಕೊಳ್ಳಲಾಗಿದೆ. ಸುರಂಗದೊಳಗಿರುವ ಸಾಕಷ್ಟು ಬೆಳಕಿನ ವ್ಯವಸ್ಥೆ ಇದೆ.

 

ಮಳೆಗಾಲ ಮುಗಿದಿರುವುದರಿಂದ ನೀರು ನುಗ್ಗುವ ಪ್ರಮೇಯವೂ ಇಲ್ಲ. ಒಂದು ವೇಳೆ ನೀರು ನುಗ್ಗಿ ಸಮಸ್ಯೆ ಉಂಟಾದರೆ ಅದನ್ನು ಹೊರಹಾಕಲು ಪ್ರತ್ಯೇಕ ವ್ಯವಸ್ಥೆ ಇದೆ~ ಎನ್ನುತ್ತಾರೆ ನೈರುತ್ಯ ರೈಲ್ವೆ ಸಾರ್ವಜನಿಕ

ಸಂಪರ್ಕಾಧಿಕಾರಿ ಸುವಾಂಕರ್ ಬಿಸ್ವಾಸ್.ಆದರೆ ಅಧಿಕಾರಿಗಳು ಕೇವಲ ಸಮಜಾಯಿಷಿ ನೀಡುವ ಬದಲು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಗಮನ ಹರಿಸಬೇಕು ಎಂಬ ಒತ್ತಾಯ ಪ್ರಯಾಣಿಕರಿಂದ ಕೇಳಿ ಬಂದಿದೆ. ಸಾರ್ವಜನಿಕರ ಪ್ರತಿಕ್ರಿಯೆ

ಜನರ ಓಡಾಟ ಹೆಚ್ಚಿರುವಾಗ ಸುರಂಗ ಮಾರ್ಗದಲ್ಲಿ ಉಸಿರಾಡಲು ಕೂಡ ತೊಂದರೆ ಆಗುತ್ತದೆ. ಬಹಳಷ್ಟು ಉದ್ದದ ಮಾರ್ಗದಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಸೂಕ್ತವಾಗಿರಬೇಕು.

- ನಿರಂಜನ್, ಚಿತ್ರದುರ್ಗಕ್ಕೆ ತೆರಳುತ್ತಿದ್ದ ಪ್ರಯಾಣಿಕರೈಲ್ವೆ ಇಲಾಖೆಯನ್ನಷ್ಟೇ ದೂರುವುದರಿಂದ ಯಾವುದೇ ಉಪಯೋಗವಿಲ್ಲ. ಜನರು ಕೂಡ ನಾಗರಿಕ ಪ್ರಜ್ಞೆ ಮೆರೆಯಬೇಕು. ಎಲ್ಲೆಂದರಲ್ಲಿ ಉಗುಳುವುದು, ಗಲೀಜು ಮಾಡುವುದು ತಪ್ಪಬೇಕು.

- ಶ್ರೀನಿವಾಸ ರಾವ್, ಹೈದರಾಬಾದ್ ನಿವಾಸಿಇಲ್ಲಿ ಮಾರ್ಗದರ್ಶಕರನ್ನು ಅಥವಾ ಮಾಹಿತಿ ಫಲಕಗಳನ್ನು ಅಳವಡಿಸುವುದು ಒಳ್ಳೆಯದು. ಆಗ ಜನರಿಗೆ ಗೊಂದಲ ಉಂಟಾಗುವುದು ತಪ್ಪುತ್ತದೆ. ಲಿಫ್ಟ್‌ಗಳು ಎಲ್ಲಿದೆ ಎಂಬುದೇ ಜನರಿಗೆ ಗೊತ್ತಿರುವುದಿಲ್ಲ. ಉದ್ಘೋಷಕರು ಕೂಡ ತಿಳಿಸುವುದಿಲ್ಲ.

- ನಂಜಮ್ಮ, ದಾವಣಗೆರೆ ನಿವಾಸಿದುರ್ನಾತ ಬೀರುವ ಸುರಂಗ ಮಾರ್ಗ ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗಬಲ್ಲದು. ರೈಲ್ವೆ ಇಲಾಖೆಯ ನಿರ್ಲಕ್ಷ್ಯ ಸಲ್ಲದು. ಆಗಾಗ ದುರಸ್ತಿ ಮಾಡುವ ಬದಲು ಶಾಶ್ವತ ಪರಿಹಾರ ಅಗತ್ಯವಿದೆ.

- ಕೆ.ಆರ್. ನಾಯಕ್, ವಿದ್ಯಾರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry